(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಮೊಬೈಲ್ ಅಂಗಡಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ನಗರ ಠಾಣೆ ಪೊಲೀಸರಿಂದ ಬಂಧಿಯಾಗಿದ್ದು ಉಡುಪಿಯ ಹಿರಿಯಡ್ಕದ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಪೊಲಿಸರನ್ನು ತಳ್ಳಿ ಪರಾರಿಯಾದ ಆರೋಪಿ ಮೊಹಮ್ಮದ್ ರಾಹೀಕ್ (22) ಎನ್ನುವ ಖತರ್ನಾಕ್ ಆರೋಪಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ.
ಅ.20 ರಂದು ಈ ಘಟನೆ ನಡೆದಿದ್ದು ಕುಂದಾಪುರ ಠಾಣೆ ಹೆಡ್ ಕಾನ್ಸ್ಟೇಬಲ್ ಮಂಜುನಾಥ ಎಚ್. ಎನ್ನುವರು ಹಿರಿಯಡಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಘಟನೆ ಹಿನ್ನೆಲೆ..
ಕುಂದಾಪುರ ನಗರ ಠಾಣೆ ವ್ಯಾಪ್ತಿಯ ಬೀಜಾಡಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಬಳಿಯ ಮೊಬೈಲ್ ಅಂಗಡಿ ಕಳವು ಪ್ರಕರಣವೊಂದರ ತನಿಖೆಗಿಳಿದ ಪೊಲೀಸರ ತಂಡ ಆರೋಪಿ ಮೊಹಮ್ಮದ್ ರಾಹೀಕ್ ಅ.19 ರಂದು ಬಂಧಿಸಿದ್ದು ಅ.20 ರಂದು ಆತನನ್ನು ಕುಂದಾಪುರದ ಎ.ಸಿ.ಜೆ ಮತ್ತು ಜೆ.ಎಂ.ಎಪ್.ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಹೆಡ್ ಕಾನ್ಸ್ಟೇಬಲ್ ಮಂಜುನಾಥ್ ಹಾಗೂ ಸಿಬ್ಬಂದಿ ಬಸನಗೌಡ ಅವರು ಆರೋಪಿಯ ಭದ್ರಿಕೆಯಲ್ಲಿ ಖಾಸಗಿ ವಾಹನದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಜಿಲ್ಲಾ ಕಾರಾಗೃಹಕ್ಕೆ ಒಪ್ಪಿಸುವಂತೆ ಆದೇಶಿಸಿದ್ದರು. ಅದರಂತೆಯೇ ಪೊಲೀಸರಿಬ್ಬರು ಆರೋಪಿಯ ಜೊತೆಗೆ ಕುಂದಾಪುರದಿಂದ ಹೊರಟು ಅಂದು ರಾತ್ರಿ 8.25ಕ್ಕೆ ಹಿರಿಯಡ್ಕ ಅಂಜಾರು ಕಾಜರಗುತ್ತು ಎಂಬಲ್ಲಿರುವ ಜಿಲ್ಲಾ ಕಾರಾಗೃಹದ ಮುಖ್ಯ ದ್ವಾರದ ಬಳಿ ತಲುಪಿ ವಾಹನ ನಿಲ್ಲಿಸಿ ಆರೋಪಿಯನ್ನು ಇಳಿಸುತ್ತಿದ್ದಂತೆ ಅರೋಪಿ ರಾಹೀಕ್ ಭದ್ರಿಕೆಯಲ್ಲಿದ್ದ ಮಂಜುನಾಥ್ ಹಾಗೂ ಬಸನಗೌಡ ಅವರನ್ನು ತಳ್ಳಿ, ಹೊಟ್ಟೆಗೆ ಹೊಡೆದು ದೂಡಿ ಹಾಕಿ ಕಾಡಿನ ಕಡೆ ಓಡಿ ಹೋಗಿ ತಲೆಮರೆಸಿಕೊಂಡಿದ್ದಾನೆ.
ಈ ಬಗ್ಗೆ ಹಿರಿಯಡಕ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸದ್ಯ ಆರೋಪಿ ಮೊಹಮ್ಮದ್ ರಾಹೀಕ್ ಪತ್ತೆಗಾಗಿ ಪೊಲೀಸರ ತಂಡ ರಚಿಸಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಯ ಪತ್ತೆ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್. ನಿರ್ದೇಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ಮತ್ತು ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್.ಕೆ. ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್ ಮುಂದಾಳತ್ವದಲ್ಲಿ, ಕುಂದಾಪುರ ಪಿ.ಎಸ್.ಐ. ಸದಾಶಿವ ಗವರೋಜಿ ಮತ್ತು ಪಿ.ಎಸ್.ಐ. ಪ್ರಸಾದ್ ಕೆ.ರವರ ನೇತ್ರತ್ವದಲ್ಲಿ 2 ತಂಡಗಳನ್ನು ರಚಿಸಿ ವಿಶೇಷ ಕರ್ತವ್ಯಕ್ಕೆ ನೇಮಿಸಿ ಕಳುಹಿಸಿಕೊಡಲಾಗಿತ್ತು.
ಪಿ.ಎಸ್.ಐ. ಪ್ರಸಾದ್ ಕೆ. ರವರ ನೇತ್ರತ್ವದ ತಂಡವು ಅರೊಪಿ ರಾಹೀಕ್ ನನ್ನು ನ.5ರಂದು ಮುಂಬಯಿಯ ಮಾಂಡೋವಿಯಲ್ಲಿ ವಶಕ್ಕೆ ಪಡೆದುಕೊಂಡು ಕುಂದಾಪುರಕ್ಕೆ ಕರೆತಂದಿದ್ದು ಕುಂದಾಪುರ ನ್ಯಾಯಾಲಯಕ್ಕೆ ನ.6ಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಆರೋಪಿ ರಾಹಿಕ್ ವೃತ್ತಿಪರ ಕಳ್ಳನಾಗಿದ್ದು ಪೊಲೀಸರಿಂದ ತಪ್ಪಿಸಿಕೊಂಡು ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿದ್ದಲ್ಲದೇ ಲೋನಾವಾಲ ಮುಂಬಯಿಯ ಹೋಟೇಲ್ನಲ್ಲಿ ಉಳಿದುಕೊಂಡು ಅಲ್ಲಿ ಕೂಡಾ ಕಳ್ಳತನ ಮಾಡಿರುವುದು ತನಿಖೆ ವೇಳೆ ತಿಳಿದುಬಂದಿದೆ. ಆರೋಪಿಯನ್ನು ಪತ್ತೆ ಮಾಡಿದ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದು ಈ ವಿಶೇಷ ತಂಡದಲ್ಲಿ ಸಿಬ್ಬಂದಿಗಳಾದ ಸಂತೋಷ ಕುಮಾರ್, ಸಂತೋಷ , ಸಿದ್ದಪ್ಪ , ಗಂಗೊಳ್ಳಿ ಠಾಣೆಯ ಚಂದ್ರ ಇದ್ದರು.
Comments are closed.