ಕರಾವಳಿ

ತೆಕ್ಕಟ್ಟೆ ಮಾಲಾಡಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಸಾರ್ವಜನಿಕರಲ್ಲಿ ಹೆಚ್ಚಿದ ಆತಂಕ

Pinterest LinkedIn Tumblr

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಪರಿಸರದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ.

(KW- File Photo)

ಶುಕ್ರವಾರ ಸಂಜೆ 7 ಗಂಟೆ ವೇಳೆಗೆ ಮಾಲಾಡಿ ಸಮೀಪದಿಂದ ನಾಯಿಯೊಂದನ್ನು ಎಳೆದೊಯ್ಯುವಾಗ ರಸ್ತೆಯಲ್ಲಿ ಸಾಗುತ್ತಿದ್ದ ಬೈಕ್ ಸವಾರನಿಗೆ ಚಿರತೆ ಕಾಣಿಸಿಕೊಂಡಿದ್ದು ಬಳಿಕ ಕಾಡು‌ ಪ್ರದೇಶದಲ್ಲಿ ಕಣ್ಮರೆಯಾಗಿದೆ‌.

ಬಳಿಕ ತಡರಾತ್ರಿ ಮಾಲಾಡಿಯ ತೋಪಿನಿಂದ ಮುಂದೆ ಸಾಗಿದಾಗ ಸಿಗುವ ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷೆ ಮಮತಾ ದೇವಾಡಿಗರ ಪತಿ ಸುರೇಶ್ ದೇವಾಡಿಗರ ನಿವಾಸದಲ್ಲಿ ನಾಯಿ ಬೊಗಳುವ ಶಬ್ಧ ಕೇಳಿಸಿದ್ದು ಮನೆಮಂದಿ ಅಂಗಳದಲ್ಲಿ ಚಿರತೆ ಓಡುವುದನ್ನು ಕಂಡಿದ್ದಾರೆ.

ಈ ಬಗ್ಗೆ ಮನೆಯವರಾದ ಸತೀಶ್ ದೇವಾಡಿಗ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು ನಿರಂತರ ಈ ಭಾಗದಲ್ಲಿ ಚಿರತೆ ಕಾಟವಿದ್ದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಬೋನಿಟ್ಟು ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

4 ವರ್ಷದಲ್ಲಿ 6 ಚಿರತೆ ಸೆರೆ…
ಮಾಲಾಡಿ ತೋಪಿನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದ ಚಿರತೆಯು ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸಿದ್ದು ಮಾತ್ರವಲ್ಲದೇ ಆಗ್ಗಾಗೆ ಪ್ರತಕ್ಷವಾಗಿ ಜನರಲ್ಲಿ ಭೀತಿ ಉಂಟುಮಾಡುತ್ತಿದೆ. ಮಾಲಾಡಿ ತೋಟದಲ್ಲಿ 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಅ.6, 2019, ಡಿ.12, 2019, ಡಿ.24 ,2019 ರಲ್ಲಿ ಹಾಗೂ 2022 ರ ಎಪ್ರಿಲ್ ತಿಂಗಳಿನಲ್ಲಿ ‘ಆಪರೇಶನ್ ಚಿರತೆ’ ಕಾರ್ಯಾಚರಣೆ ನಡೆಸಿದ ಇಲಾಖೆ ಚಿರತೆಯನ್ನು ಬೋನಿಗೆ ಬೀಳಿಸಿದ್ದು 2022 ಅ.2 ರಂದು ಚಿರತೆ ಸೆರೆಯಾಗಿದ್ದು‌ ಈ ವರ್ಷದಲ್ಲಿ ಒಟ್ಟು ಎರಡು ಚಿರತೆ ಬೋನಿಗೆ ಬಿದ್ದಿತ್ತು.

Comments are closed.