ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯಲ್ಲಿ ಕೆಲವು ಕಾಮಗಾರಿ ನಡೆಯುವಾಗ ಸ್ಥಳೀಯ ವಾರ್ಡ್ ಸದಸ್ಯರ ಗಮನಕ್ಕೆ ಇರುವುದಿಲ್ಲ. ಇದರಿಂದ ಸಂವಹನ ಕೊರತೆ ಉಂಟಾಗುತ್ತಿದ್ದು ಆ ಭಾಗದ ಜನರು ಲಂಚದ ಆರೋಪ ಮಾಡುತ್ತಾರೆ. ಪುರಸಭೆ ಸದಸ್ಯರು ಮೊದಲು ಧ್ವನಿ ಎತ್ತುತ್ತಾರೆ. ಕೈ ಬಿಸಿ ಆದಮೇಲೆ ಸುಮ್ಮನೆ ಇರುತ್ತಾರೆ ಎಂಬ ಅಪವಾದ ಕೇಳುತ್ತಿದ್ದೇವೆ ಎಂದು ಪುರಸಭಾ ಇಂಜಿನಿಯರ್ ಹಾಗೂ ಸಂಬಂಧಪಟ್ಟವರ ವಿರುದ್ದ ಪುರಸಭಾ ಸದಸ್ಯರಾದ ಪ್ರಭಾಕರ್ ಕುಂದಾಪುರ, ಸಂತೋಷ್ ಕುಮಾರ್ ಶೆಟ್ಟಿ, ಅಶ್ವಿನಿ ಪ್ರದೀಪ್ ಅಸಮಾಧಾನ ಹೊರಹಾಕಿದರು.
ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯ ಮೊದಲಿಗೆ ‘ಕೈ ಬಿಸಿ’ ಚರ್ಚೆ ನಡೆಯಿತು.
ಸಭೆಯ ಆರಂಭದಲ್ಲೇ ಪುರಸಭಾ ಸದಸ್ಯ ಪ್ರಭಾಕರ್ ಅವರು, ಕುಂದೇಶ್ವರ ರಸ್ತೆ ಕಾಮಗಾರಿ ಮಾಡುವಾಗ ಹಲವು ಲೋಪದೋಷಗಳಾಗಿದೆ. ಕಾಮಗಾರಿ ಅವ್ಯವಹಾರದ ಬಗ್ಗೆ ಲೋಕಾಯುಕ್ತ ದೂರಿದ್ದು ಅವರು ಸ್ಥಳ ತನಿಖೆಗೆ ಬಂದಾಗ ವಾರ್ಡ್ ಸದಸ್ಯನಾದ ತನಗೆ ಮಾಹಿತಿ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ಮೇಲೆ ಲಂಚ ಪಡೆದ ಆರೋಪ ಮಾಡುತ್ತಿದ್ದು ಇದಕ್ಕೆಲ್ಲಾ ಉತ್ತರಿಸುವ ಜವಬ್ದಾರಿ ನನ್ನ ಮೇಲಿದೆ ಎಂದಿದ್ದು ಮತ್ತೋರ್ವ ಸದಸ್ಯ ಸಂತೋಷ್ ಶೆಟ್ಟಿ ಮಾತನಾಡಿ, 25 ಲಕ್ಷ ವೆಚ್ಚದ ಕಾಮಗಾರಿ ನಡೆಯುವ ಸ್ಥಳದಲ್ಲಿ ಇಂಜಿನಿಯರ್ ಇರಲಿಲ್ಲ. ರಾತ್ರಿ ಹೊತ್ತು ಕಾಮಗಾರಿ ನಡೆಸಿದ ಉದ್ದೇಶ ಏನು ಎಂಬುದರ ಬಗ್ಗೆ ಸ್ಪಷ್ಟನೆ ಬೇಕು ಎಂದರು. ಇದಕ್ಕೆ ಧ್ವನಿಯಾದ ಹಿರಿಯ ಸದಸ್ಯ ಮೋಹನದಾಸ್ ಶೆಣೈ, ಕುಂದಾಪುರ ಕುಂದೇಶ್ವರ ರಸ್ತೆ ಕಾಮಗಾರಿ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಇಂಜಿನಿಯರ್ ಅವರನ್ನು ಉದ್ದೆಶಿಸಿ ಸದಸ್ಯರುಗಳು ಹೇಳಿದರು. ಇದಕ್ಕೆ ಉತ್ತರಿಸಿ ಇಂಜಿನಿಯರ್ ಸತ್ಯ, ಕಾಮಗಾರಿ ನಡೆಯುವ ವೇಳೆ ತಾನು ಬೈಂದೂರಿನಲ್ಲಿ ಪ್ರಭಾರಿಯಾಗಿ ಕರ್ತವ್ಯದಲ್ಲಿದ್ದೆ ಎಂದು ಸಮಜಾಯಿಷಿ ನೀಡಿದರು. ಶಾಸ್ತ್ರೀ ವೃತ್ತದಲ್ಲಿ ಸರ್ಕಲ್ ನಿರ್ಮಾಣ ವಿಚಾರದಲ್ಲಿ ಮಾಹಿತಿ ನೀಡಿದ ಅವರು ಹೆದ್ದಾರಿ ಪ್ರಾಧಿಕಾರದಿಂದ ಹೈಮಾಸ್ಟ್ ತೆರವಾಗಬೇಕಿದ್ದು ಬಳಿಕ ಉಳಿದ ಕಾಮಗಾರಿ ಆರಂಭವಾಗಲಿದೆ ಎಂದರು.
ಇಂಜಿನಿಯರ್ ಹುದ್ದೆ ಭರ್ತಿಯಾಗಬೇಕು:
ಕುಂದಾಪುರ ಪುರಸಭೆಯಲ್ಲಿ ಎಷ್ಟು ಅಧೀಕೃತ ಇಂಜಿನಿಯರ್ ಇದ್ದಾರೆಂದು ಮಾಹಿತಿ ಬೇಕು. ಕುಂದೇಶ್ವರ ರಸ್ತೆ ಕಳಪೆ ಬಗ್ಗೆ ಹಾಗ ಕಾಮಗಾರಿ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬೇರೆಯದ್ದೇ ಸಂದೇಶ ನೀಡುವ ಜೊತೆಗೆ ಪುರಸಭೆ ಹೆಸರು ಕೆಡಿಸುವಂತೆ ಹರಿದಾಡಿದೆ. ಜವಬ್ದಾರಿಯುತ ಆ ಭಾಗದ ಸದಸ್ಯರು ಇದಕ್ಕೆ ಆಸ್ಪದ ನೀಡಬಾರದಿತ್ತು ಎಂದು ವಿಪಕ್ಷ ಸದಸ್ಯ ಚಂದ್ರಶೇಖರ್ ಖಾರ್ವಿ ಕೇಳಿದರು. ಇಲ್ಲಿಂದ ದೆಲ್ಲಿ ತನಕ ನಿಮ್ಮದೆ ಸರ್ಕಾರವಿದ್ದು ಅಗತ್ಯವಿರುವ ಇಂಜಿಯರ್ ಹುದ್ದೆ ತುಂಬಲು ತಾಕತ್ತು ಪ್ರದರ್ಶನವಾಗಲಿ ಎಂದರು. ಪುರಸಭೆಗೆ ಇಬ್ಬರು ಇಂಜಿನಿಯರ್ ಅಗತ್ಯವಿದ್ದು ಒಂದು ಹುದ್ದೆ ಖಾಲಿಯಿದೆ. ಈಗಾಗಾಲೇ ಮನವಿ ನೀಡಿದ್ದೇವೆ. ಮುಂದೆಯೂ ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ತಿಳಿಸಿದರು.
ಕುಂದಾಪುರ ಪುರಸಭೆ ಸುವರ್ಣ ಮಹೋತ್ಸವ ಆಚರಣೆ ಈ ಸುಸಂದರ್ಭದಲ್ಲಿ ಗಮನಾರ್ಹವಾದ ಕೆಲಸ ಆಗಬೇಕಿತ್ತು. ಪುರಭವನದಂತಹ ಗುರುತಿಸುವ ಕಾರ್ಯ ನಡೆಯಬೇಕಿತ್ತು. ಆದರೆ ರೋಡು, ತೋಡು, ಇಂಟರ್ ಲಾಕ್ ಮೊದಲಾದವುಗಳಿಗೆ ಹಣ ಹಾಕಿದರೆ ಗುರುತರ ಕೆಲಸ ಆಗದು ಎಂದು ಚಂದ್ರಶೇಖರ್ ಖಾರ್ವಿ ಹೇಳಿದಾಗ ಅಧ್ಯಕ್ಷೆ ವೀಣಾ ಭಾಸ್ಕರ್ ಪ್ರತಿಕ್ರಿಯಿಸಿ, ಸುವರ್ಣ ಮಹೋತ್ಸವ ವೇಳೆ ಅಗತ್ಯ ಕಾಮಗಾರಿಗಳ ಬೇಡಿಕೆ ಪಟ್ಟಿಯನ್ನು ಸದಸ್ಯರುಗಳು ನೀಡಿದ್ದು ಸರ್ವ ಸದಸ್ಯರ ನಿಯೋಗ ಶಾಸಕರ ಬಳಿ ತೆರಳಿ ಬೇಡಿಕೆ, ಮನವಿ ನೀಡೋಣ ಎಂದರು.
ಬಿಳಿ ಆನೆ ಸಾಕಿದಂತಾಗಿದೆ..!
ಕುಂದಾಪುರ ಪುರಸಭೆ ಮಟ್ಟಿಗೆ ಜಲಸಿರಿ ಹಾಗೂ ಒಳಚರಂಡಿ ಯೋಜನೆ ಬಿಳಿ ಆನೆ ಸಾಕಿದಂತಾಗಿದೆ. ನಾವೆ ಹಣ ನೀಡಿ ನಷ್ಟ ಅನುಭವಿಸುತ್ತಿದ್ದೇವೆ ಎಂದು ಸಂತೋಷ್ ಕುಮಾರ್ ಶೆಟ್ಟಿ ಜಲಸಿರಿ ಯೋಜನೆ ಅಧಿಕಾರಿಗಳನ್ನು ತೀವೃ ತರಾಟೆಗೆತ್ತಿಕೊಂಡರು. ಪುರಸಭೆ ವತಿಯಿಂದ ಯೋಜನೆಗೆ ನೀಡಿದ ಕೆಲ ಅನುದಾನ ನಿಲ್ಲಿಸಬೇಕು. ಕಾಮಗಾರಿ ಬಗ್ಗೆ ಜಿಲ್ಲಾಧಿಕಾರಿ ಮುಂದಾಳತ್ವದಲ್ಲಿ ಸಮಗ್ರ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದರು.
ಶೇಖರ್ ಪೂಜಾರಿ, ಹಿರಿಯ ಸದಸ್ಯೆ ದೇವಕಿ ಸಣ್ಣಯ್ಯ, ನಾಮನಿರ್ದೇಶಿತ ಸದಸ್ಯರಾದ ರತ್ನಾಕರ್, ಪ್ರಕಾಶ್ ಖಾರ್ವಿ ಮಾತನಾಡಿದರು. ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಸದಸ್ಯ ಗಿರೀಶ್ ಜಿ.ಕೆ., ಮುಖ್ಯಾಧಿಕಾರಿ ಮಂಜುನಾಥ್ ಆರ್. ಇದ್ದರು.
ಇದೇ ಸಂದರ್ಭದಲ್ಲಿ ನೂತನವಾಗಿ ಅಧಿಕಾರ ಸ್ವೀಕರಿಸಿದ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್ ಆರ್. ಅವರನ್ನು ಸದಸ್ಯರು ಸ್ವಾಗತಿಸಿದರು.
Comments are closed.