ಉಡುಪಿ: ಅಪರಿಚಿತ ವಾಹನವೊಂದು ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಚೇಂಪಿ ಸಮೀಪ ಮೂಡಹಡು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತರನ್ನು ಗದಗ ಮೂಲದ ಶಾಂತಪ್ಪ ಊಸಲ ಕೊಪ್ಪ (40) ಎಂದು ಗುರುತಿಸಲಾಗಿದೆ. ಇವರು ತನ್ನ ಜಿಲ್ಲೆಯಿಂದ ಕುಂದಾಪುರ ಮಾರ್ಗವಾಗಿ ಉಡುಪಿ ಅಜ್ಜರಕಾಡಿನಲ್ಲಿ ನಡೆಯುತ್ತಿದ್ದ ಕೆಲಸಕ್ಕೆಂದು ಬರುತ್ತಿದ್ದಾಗ ಅಪರಿಚಿತ ವಾಹನ ಢಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ ಎಂದು ತಿಳಿದುಬಂದಿದೆ.
ಅಪಘಾತದ ರಭಸಕ್ಕೆ ರಸ್ತೆಗೆ ಬಿದ್ದು ಮುಖ, ತಲೆ, ಕಾಲಿನ ಭಾಗಕ್ಕೆ ಗಂಭೀರವಾಗಿ ಗಾಯಗೊಂಡಿದ್ದ ಶಾಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಗೊಳ್ಳಿ 24*7 ಆಪತ್ಬಾಂಧವ ಅಂಬುಲೆನ್ಸ್ ಸ್ವಯಂಸೇವಕರಾದ ಇಬ್ರಾಹಿಂ ಗಂಗೊಳ್ಳಿ ಹಾಗೂ ನದೀಮ್ ಅವರು ಮೃತದೇಹವನ್ನು ಎತ್ತಿ ಸಾಸ್ತಾನ ಟೋಲ್ ವಾಹನದ ಮೂಲಕ ಮರಣೋತ್ತರ ಪರೀಕ್ಷೆಗೆ ರವಾನಿಸುವಲ್ಲಿ ಸಹಕಾರ ನೀಡಿದ್ದರು. ಮೊದಲಿಗೆ ಮೃತಪಟ್ಟರ ಗುರುತು ಪತ್ತೆಯಾಗದಿದ್ದು ಅಪಘಾತ ನಡೆದ ಸ್ಥಳದ ಪಕ್ಕದಲ್ಲಿ ಬಿದ್ದಿದ್ದ ಆಧಾರ್ ಕಾರ್ಡ್ ಮೂಲಕ ಅವರು ಶಾಂತಪ್ಪ ಊಸಲ ಕೊಪ್ಪ ಗದಗ ಎಂಬುವುದಾಗಿ ತಿಳಿದುಬಂದಿತ್ತು.
ಕೋಟ ಠಾಣಾಧಿಕಾರಿ ಮಧು ಬಿಇ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಪಘಾತಪಡಿಸಿ ನಿಲ್ಲಿಸದೆ ಪರಾರಿಯಾದ ವಾಹನದ ಪತ್ತೆಗೆ ಕ್ರಮಕೈಗೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.