ಕರಾವಳಿ

‘ಸೂಸೈಡ್ ಡ್ರಾಮಾ’ ಮಾಡಿ ಅಮಾಯಕನ ಬೆಂಕಿಯಿಟ್ಟು ಕೊಂದ‌ ಪ್ರಕರಣದ ಆರೋಪಿ ಹಿರಿಯಡ್ಕ ಜೈಲಿನಲ್ಲಿ ಆತ್ಮಹತ್ಯೆ

Pinterest LinkedIn Tumblr

ಉಡುಪಿ: ಬೈಂದೂರು ಸಮೀಪದ ಒತ್ತಿನೆಣೆ ಹೇನಬೇರು ರಸ್ತೆಯಲ್ಲಿ ಕಾರು ಸಹಿತ ವ್ಯಕ್ತಿಯನ್ನು ಸುಟ್ಟು ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ, ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ನಿವಾಸಿ ಸದಾನಂದ ಶೇರಿಗಾರ್(52) ಭಾನುವಾರ ಮುಂಜಾನೆ ಸುಮಾರಿಗೆ ಹಿರಿಯಡ್ಕ ಅಂಜಾರಿನಲ್ಲಿರುವ ಉಡುಪಿ ಜಿಲ್ಲಾ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ಸದಾನಂದ, ಜೈಲಿನ 20 ಮಂದಿ ಕೈದಿಗಳಿದ್ದ ಕೊಠಡಿಯಲ್ಲಿಯೇ ಪಂಚೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಪ್ರಕರಣವೊಂದರಲ್ಲಿ ಶಿಕ್ಷೆ ಆಗುವ ಭಯದಿಂದ ಸದಾನಂದ ಶೇರಿಗಾರ್, ತನ್ನದೇ ಕಾರಿನಲ್ಲಿ ಆತ್ಮಹತ್ಯೆಗೆ ಶರಣಾದಂತೆ ನಾಟಕದ ಸಂಚು ಮಾಡಿದ್ದು, ಅದಕ್ಕಾಗಿ ತನ್ನ ಪರಿಚಯದ ಶಿಲ್ಪಾ ಜೊತೆ ಸೇರಿ ಕಾರ್ಕಳ ಮೂಲದ ಆನಂದ ದೇವಾಡಿಗ ಎಂಬವರಿಗೆ ನಿದ್ರೆ ಮಾತ್ರೆ ಬೆರೆಸಿದ ಮದ್ಯ ನೀಡಿ ಪ್ರಜ್ಞೆ ತಪ್ಪಿಸಿದ್ದರು. ಬಳಿಕ ಆರೋಪಿಗಳು ಕಾರಿನಲ್ಲಿ ಕಾರ್ಕಳದಿಂದ ಬೈಂದೂರು ಶಿರೂರು ಸಮೀಪದ ಹೇನಬೇರು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದರು. ಅಲ್ಲಿ ಜು.12ರ ನಸುಕಿನ ವೇಳೆ ಕಾರಿಗೆ ಪೆಟ್ರೋಲ್ ಹಾಕಿ ಆನಂದ ದೇವಾಡಿಗ ಸಹಿತ ಕಾರನ್ನು ಸುಟ್ಟು ಕೊಲೆ ಮಾಡಿದ್ದರು.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಇವರಿಬ್ಬರು ಸೇರಿದಂತೆ ಆರೋಪಿಗಳಿಗೆ ಸಹಕರಿಸಿದ ಆರೋಪದಡಿ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ಆರ್. ದೇವಾಡಿಗ, ನಿತಿನ್ ದೇವಾಡಿಗ ಎಂಬವರನ್ನು ಬಂಧಿಸಲಾಗಿತ್ತು.

Comments are closed.