ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಶೈಕ್ಷಣಿಕ ಸಮಸ್ಯೆಯ ಬಗ್ಗೆ ಡಿ.15 ರಂದು ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬ್ರಹತ್ ಪ್ರತಿಭಟನೆ ನಡೆಸಿದರು. ಕುಂದಾಪುರದ ಶಾಸ್ತ್ರಿ ವೃತ್ತದಿಂದ ಮಿನಿವಿಧಾನಸೌಧದ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು.
ಈ ಸಂದರ್ಭ ಮಾತನಾಡಿದ ತಾಲೂಕು ಸಂಪರ್ಕ ಪ್ರಮುಖ್ ರಾಹುಲ್ ಶೆಟ್ಟಿ , ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸುತ್ತಿರುವುದು, ಅಂಕಪಟ್ಟಿ ಬಾರದ ಹಿನ್ನೆಲೆ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗುತ್ತಿದೆ. ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದೇ ಇರುವುದು, ಮರು ಪರೀಕ್ಷೆ ಹಾಗೂ ಮರುಮೌಲ್ಯಮಾಪನಗಳಲ್ಲಿ ಗೊಂದಲ, ಮರು ಮೌಲ್ಯಮಾಪನದಲ್ಲಿ ಶುಲ್ಕ ಮರುಪಾವತಿಗೆ ನಿಗದಿ ಪಡಿಸಿದಷ್ಟು ಅಂಕ ಬಂದರೂ ಸಹ ಕಟ್ಟಿದ ಶುಲ್ಕವು ಮರುಪಾವತಿಯಾಗದಿರುವುದು, ಈ ಎಲ್ಲಾ ಸಮಸ್ಯೆಗಳು ಒಂದು ಕಡೆಯಾದರೆ ಎನ್.ಇ.ಪಿ ಜಾರಿಯಾದ ನಂತರ ಮೊದಲನೇ ವರ್ಷಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳು ಪ್ರಸ್ತುತ ದ್ವಿತೀಯ ವರ್ಷದಲ್ಲಿ ಇದ್ದರೂ ಸಹ ಪ್ರಥಮ ಹಾಗೂ ದ್ವಿತೀಯ ಸೆಮಿಸ್ಟರ್ ನ ಮೌಲ್ಯಮಾಪನ ಈವರೆಗೂ ಆಗಿರುವುದಿಲ್ಲ. ಆದಾಗ್ಯೂ ತೃತೀಯ ಸೆಮಿಸ್ಟರ್ ನಲ್ಲಿರುವ ವಿದ್ಯಾರ್ಥಿಗಳಿಗೆ ಈ ಹಿಂದಿನ ಎರಡು ಸೆಮಿಸ್ಟರ್ ನ ಫಲಿತಾಂಶ ಇಲ್ಲದಿದ್ದರೂ ಮೂರನೇ ಸೆಮಿಸ್ಟರ್ ನ ಪರೀಕ್ಷಾ ಶುಲ್ಕವನ್ನು ಪಡೆದುಕೊಂಡಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯದ ಈ ಎಲ್ಲಾ ಬೇಜಾವಾಬ್ದಾರಿತನದಿಂದಾಗಿ ಮಕ್ಕಳು ಹಾಗೂ ಪೋಷಕರು ತಲೆತಗ್ಗಿಸುವಂತೆ ಆಗಿದೆ. ಸಾವಿರಾರು ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವಿಭಾಗಗಳಿಗೆ ಸೇರ್ಪಡೆಯಾಗಲು ಆಗದೆ ಇರುವುದು ಶೋಚನೀಯ ಎಂದವರು ಹೇಳಿದರು.
ಈ ಎಲ್ಲಾ ವಿಷಯಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಹಾಗೂ ಪರೀಕ್ಷಾಂಗ ಕುಲ ಸಚಿವರು ನೇರ ಹೊಣೆಯಾಗಿದ್ದಾರೆ. ಸಂಬಂದಪಟ್ಟವರು ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆಗಳನ್ನು ಶೀಘ್ರವೇ ಪರಿಹರಿಸಬೇಕಾಗಿ ಅವರು ಆಗ್ರಹಿಸಿದರು.
ಕುಂದಾಪುರದ ಡಾ.ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಭಂಡಾರ್ ಕಾರ್ಸ್ ಕಾಲೇಜು ಹಾಗೂ ಕಾಳಾವರ ವರದರಾಜ ಎಮ್ ಶೆಟ್ಟಿ ಸರಕಾರಿ ಪದವಿ ಕಾಲೇಜು ಕಾಗೇರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಸಂಚಾಲಕ್ ಧನುಷ್ ಪೂಜಾರಿ, ತಾಲೂಕು ಸಂಪರ್ಕ ಪ್ರಮುಖ್ ರಾಹುಲ್ ಶೆಟ್ಟಿ ,ಬಿ.ಬಿ ಹೆಗ್ಡೆ ಕಾಲೇಜು ಘಟಕದ ಅಧ್ಯಕ್ಷ ವಿಘ್ನೇಶ್ ಶೆಟ್ಟಿ, ಭಂಡಾರ್ಕಾರ್ಸ್ ಕಾಲೇಜು ಘಟಕದ ಅಧ್ಯಕ್ಷ ವೀಕ್ಷಿತ್, ಕಾಗೇರಿ ಕಾಲೇಜು ಘಟಕದ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು.
Comments are closed.