ಕರಾವಳಿ

ಸಂಸದನಾಗಿ ಕ್ಷೇತ್ರದ ಅಭಿವೃದ್ಧಿಯೇ ಗುರಿ; ರಾಷ್ಟ್ರ, ರಾಜ್ಯ ರಾಜಕಾರಣದ ಬಗ್ಗೆ ಆಸಕ್ತಿಯಿಲ್ಲ- ಬಿ.ವೈ ರಾಘವೇಂದ್ರ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಉಡುಪಿ: ಶಿವಮೊಗ್ಗ ಕ್ಷೇತ್ರದ ಸಂಸತ್ ಸದಸ್ಯನಾಗಿ ಕ್ಷೇತ್ರದ ಅಭಿವೃದ್ಧಿ ಮಾತ್ರವೇ ನನ್ನ ಗುರಿಯಾಗಿದ್ದು ರಾಷ್ಟ್ರ, ರಾಜ್ಯ ರಾಜಕಾರಣದ ಬಗ್ಗೆ ಹೆಚ್ಚು ಆಸಕ್ತಿಯಿಲ್ಲ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಮರವಂತೆ ಸಮೀಪದ ತ್ರಾಸಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಂವಿಧಾನದಡಿಯಲ್ಲಿ ಯಾರೂ ಕೂಡ ರಾಜಕೀಯ ಪಕ್ಷ ಕಟ್ಟಬಹುದು. ಇಂತಹ ಅಲೆಗಳು ರಾಷ್ಟ್ರ, ರಾಜ್ಯ ರಾಜಕಾರಣದಲ್ಲಿ ನಡೆದಿದೆ. ಜನಾರ್ಧನ ರೆಡ್ಡಿಯವರು ಇತ್ತೀಚೆಗಷ್ಟೇ ಪಕ್ಷ ಕಟ್ಟಿದ್ದು ಪಕ್ಷದ ಆಗು ಹೋಗುಗಳು ಬರುವ ದಿನಗಳಲ್ಲಿ ಗೊತ್ತಾಗಲಿದೆ ಎಂದರು. ಓರ್ವ ಆದರ್ಶ ಕಾರ್ಯಕರ್ತರಾಗಿ ಬಿಜೆಪಿ ಪಕ್ಷ ಕಟ್ಟಿದವರಲ್ಲಿ ರೈತ ನಾಯಕ ಯಡಿಯೂರಪ್ಪ ಒಬ್ಬರು. ವ್ಯಕ್ತಿಗೋಸ್ಕರ ಪಕ್ಷವಲ್ಲ, ದೇಶಕ್ಕೋಸ್ಕರ ಪಕ್ಷ ಎಂಬ ಧ್ಯೇಯ ಅವರದ್ದಾಗಿದ್ದು ಹೋರಾಟ, ಸಂಘಟನಾ ಚಾತುರ್ಯ ನೋಡಿ ಪಕ್ಷ ಎಲ್ಲವನ್ನೂ ನೀಡಿದೆ. ಇದರಿಂದ ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಪಕ್ಷ ಮಾಡಿತ್ತು. ಇದೀಗಾ ಪ್ರಧಾನಮಂತ್ರಿಗಳ ಜೊತೆಜೊತೆ ಕೂರುವ ಸಂಸದೀಯ ಮಂಡಳಿ ಸದಸ್ಯರಾಗಿ ಜವಬ್ದಾರಿ ಸಿಕ್ಕಿದೆ. ಬಿಜೆಪಿ ಪಕ್ಷ ಎಲ್ಲವನ್ನೂ ನೀಡಿದ್ದು ಸಂತೃಪ್ತಿಯಿದ್ದು ಜೀವನಪೂರ್ತಿ ಕೆಲಸ ಮಾಡಿದರೂ ಪಕ್ಷದ ಋಣ ತೀರಿಸಲಾಗಲ್ಲ ಎಂದವರು ಹೇಳಿದರು.

ಯಾವ ಸಂದರ್ಭ ಯಾರು ಎಲ್ಲಿ ಸ್ಪರ್ಧೆ ಮಾಡಬೇಕೆಂಬ ನಿರ್ಧಾರ ಪಕ್ಷ ಮಾಡುತ್ತದೆ. ಯಾರಿಗೆ ಜವಬ್ದಾರಿ ನೀಡಬೇಕೆಂಬುದು ಸಂಘಟನೆ ತೀರ್ಮಾನ ಮಾಡುತ್ತದೆ. ಯಡಿಯೂರಪ್ಪ ಅವರು ಚುನಾವಣೆ ರಾಜಕೀಯದಿಂದ ದೂರ ಸರಿಯುವ ಅಪೇಕ್ಷೆ ಹೊಂದಿದ್ದಾರೆ. ಅಂತೆಯೇ ಶಿಕಾರಿಪುರ ತಾಲೂಕಿನ ಮತದಾರರ ಅವಿನಾಭಾವ ಸಂಬಂಧವಿದ್ದು ಸುಮಾರು 40 ವರ್ಷಗಳಿಂದ ರಾಜ್ಯ, ರಾಷ್ಟಕ್ಕೆ ಯಡಿಯೂರಪ್ಪ ಅವರನ್ನು ಪರಿಚಯಿಸಿದ್ದಾರೆ. ಈ ಬಾರಿ ವಿಜಯೇಂದ್ರ ಅವರನ್ನು ಸ್ಪರ್ಧೆಗಿಳಿಸಲು ಕಾರ್ಯಕರ್ತರ ಒಕ್ಕೊರಲಿನ ಮನವಿಯಾಗಿದೆ. ತಾನು ಚುನಾವಣೆಗೆ ನಿಲ್ಲುತ್ತಿಲ್ಲ, ವಿಜಯೇಂದ್ರಗೆ ಅವಕಾಶ ನೀಡಲು ಯಡಿಯೂರಪ್ಪ ಅವರು ಕೂಡ ಪಕ್ಷಕ್ಕೆ ವಿನಂತಿ ಮಾಡಿಕೊಂಡಿದ್ದಾರೆ ಎಂದವರು ತಿಳಿಸಿದರು.

ಅಭಿವೃದ್ಧಿ ಕಾರ್ಯಗಳಲ್ಲಿ ರಾಜಕೀಯ ಸರಿಯಲ್ಲ: ಬಿ.ವೈ.ರಾಘವೇಂದ್ರ
ಬೈಂದೂರು ನಂಜುಂಡಪ್ಪ ವರದಿ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕು. ಈಗ ಡಬಲ್ ಇಂಜಿನ್ ಸರ್ಕಾರವಿದ್ದು ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ, ಹಾಗೂ ಪ್ರಸ್ತುತ ಬೊಮ್ಮಾಯಿ ಅವರಿದ್ದಾಗಲಾದರೂ ಮೋದಿಯವರ ಆಶೀರ್ವಾದದಿಂದಲೂ ಅನುದಾನ ಬರುತ್ತಿದೆ. ಹಾಗಾಗಿ ಅಭಿವೃದ್ಧಿ ವಿಚಾರಗಳಲ್ಲಿ ರಾಜಕಾರಣ ಬದಿಗಿಟ್ಟು ಬಂದಂತಹ ಅನುದಾನವನ್ನು ಸರಿಯಾಗಿ ಬಳಸಿಕೊಂಡರೆ ನಮ್ಮೂರಿಗೆ ಆಸ್ತಿಯಾಗುತ್ತದೆ. ಇಲ್ಲಿ ಕಚೇರಿ ಇಲ್ಲ. ಕವಿ ಅಡಿಗರ ಹೆಸರಿನಲ್ಲಿ ಸುಸಜ್ಜಿತ ವ್ಯವಸ್ಥೆಯ ಟೌನ್ ಹಾಲ್ ಆಗಬೇಕೆನ್ನುವ ಇರಾದೆ ನಮ್ಮದು. ಸಂಸದರದ್ದಾಗಲಿ, ಶಾಸಕರದ್ದಾಗಲಿ ಹೆಸರು ಇಡುವುದಿಲ್ಲ. ರಾಜಕಾರಣಕ್ಕಾಗಿ ವಿರೋಧ ಬೇಡ ಎಂದವರು ಹೇಳಿದರು.

ಒಂದು ಕಾಲದಲ್ಲಿ ಅದರಲ್ಲೂ ಜನಸಂಘದ ಕಾಲದಲ್ಲಿ ಚುನಾವಣೆಗೆ ಅಭ್ಯರ್ಥಿಯಾಗಲು ಕೈ ಹಿಡಿದು ಎಳೆದು ತರಬೇಕಿತ್ತು. ಈಗ ಸಹಜವಾಗೆ ಸ್ಪರ್ಧೆ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರೂ ಕೂಡ ಟಿಕೆಟ್ ಕೇಳಬಹುದು. ಆದರೆ ಒಮ್ಮೆ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಮೇಲೆ ವೈಮನಸ್ಸಿನಲ್ಲದೇ ಕಾರ್ಯಕರ್ತರು ದುಡಿಯುತ್ತಾರೆ ಎಂದರು.

Comments are closed.