ಕರಾವಳಿ

ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಜೀವನದ ಗುರಿ ಮುಖ್ಯ: ಡಾ. ಗೋವಿಂದ ಬಾಬು ಪೂಜಾರಿ

Pinterest LinkedIn Tumblr

ಕುಂದಾಪುರ: ಶಿಕ್ಷಣದ ಬಳಿಕ ಉದ್ಯೋಗ ಪಡೆಯುವ ಗುರಿ ಮುಖ್ಯ. ಉದ್ಯೋಗ ಸೃಷ್ಟಿ ಇಂದಿನ ಸವಾಲಾಗಿದ್ದು ಅದನ್ನು ನೀಗಿಸಲು ಸಂಘಸಂಸ್ಥೆಗಳು ಹಾಗೂ ಸರಕಾರ ಕ್ರಮವಹಿಸಬೇಕು. ಈಗಾಗಾಲೇ ಟ್ರಸ್ಟ್ ಮೂಲಕ ಶಿಕ್ಷಣ, ಆರೋಗ್ಯ, ಬಡವರಿಗೆ ಮನೆ ನಿರ್ಮಾಣ ಸಹಿತ ಹಲವು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಡಾ. ಗೋವಿಂದ ಬಾಬು ಪೂಜಾರಿ ಹೇಳಿದರು.

ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯನ್ನು ಅನುಷ್ಟಾನಗೊಳಿಸುತ್ತಿರುವ ಬೈಂದೂರು ಮೂಕಾಂಬಿಕಾ ಕಾಂಪ್ಲೆಕ್ಸ್ ನಲ್ಲಿರುವ ಲೀನ್ ಆರ್ಗನೈಸೇಶನ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿಯಲ್ಲಿನ ಯೋಜನೆಯ ಪ್ರಶಿಕ್ಷಣಾರ್ಥಿಗಳಿಗೆ ಉಚಿತ ಸಮವಸ್ತ್ರ ಕಿಟ್ ವಿತರಿಸಿ ಮಾತನಾಡಿದರು.

ಶಿಕ್ಷಣದ ಜೊತೆಗೆ ಜೀವನದಲ್ಲಿ ಗುರಿ ಮುಖ್ಯ. ಗುರಿಯಿದ್ದರೆ ಯಾವುದೇ ಕಾರ್ಯವನ್ನು ಸಾಧಿಸಲು ಸಾಧ್ಯ. ವಿದ್ಯಾರ್ಥಿಗಳು ಟಿವಿ, ಮೊಬೈಲ್, ಇಂಟರ್ನೆಟ್ ಬಳಕೆ ಒಳ್ಳೆ ಕೆಲಸಕ್ಕೆ ಮಾತ್ರ ಸೀಮಿತವಾಗಿರಲಿ. ಛಲ ಹಾಗೂ ಆತ್ಮವಿಶ್ವಾಸದೊಂದಿಗೆ ಇಂತಹ ಯೋಜನೆ ಸದುಪಯೋಗಿಸಿಕೊಂಡು ಜೀವನದಲ್ಲಿ ಉತ್ತಮ ಹಂತಕ್ಕೆ ಬನ್ನಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಅವರು ಕರೆ ನೀಡಿದರು.

ಈ ಸಂದರ್ಭ ಸುರಭಿ ಸಂಸ್ಥೆ ಅಧ್ಯಕ್ಷ ನಾಗರಾಜ ದೇವಾಡಿಗ, ಲೀನ್ ಆರ್ಗನೈಸೇಶನ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿ ಸ್ಥಾಪಕರಾದ ಭಾಸ್ಕರ್ ಬಿಲ್ಲವ, ಹರ್ಷಿತಾ ಭಾಸ್ಕರ್ ಬಿಲ್ಲವ, ಸಂಸ್ಥೆಯ ಶಿಕ್ಷಕರಾದ ಸರಸ್ವತಿ, ನಿರ್ಮಲಾ, ಸುಜಾತಾ, ಅಂಕಿತಾ, ವಸಂತ ಪೂಜಾರಿ ಇದ್ದರು.

ಪ್ರಶಿಕ್ಷಣಾರ್ಥಿಗಳಾದ ಅಕ್ಷತಾ ನಿರೂಪಿಸಿ, ಅಶ್ವಿನಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ವಿನುತಾ ಸ್ವಾಗತಿಸಿ, ಅನುಷಾ ವಂದಿಸಿದರು.

Comments are closed.