ಮಂಗಳೂರು: ಕನ್ನಡ ಖ್ಯಾತ ಲೇಖಕಿ ಸಾರಾ ಅಬೂಬಕ್ಕರ್ ನಿಧನರಾಗಿದ್ದು ಅವರಿಗೆ 86 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾರಣಗಳಿಂದ ಅವರು ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ತಿಳಿದುಬಂದಿದೆ. ಅವರು ಮಂಗಳೂರಿನ ಹ್ಯಾಟ್ ಹಿಲ್ ಬಳಿ ನೆಲೆಸಿದ್ದು, ನಾಲ್ವರು ಪುತ್ರರು ಅಪಾರ ಬಂಧುಗಳನ್ನು ಅಗಲಿದ್ದಾರೆ.
ಗಡಿನಾಡು ಕಾಸರಗೋಡಿನ ಮಲಯಾಳಂ ಮಾತನಾಡುವ ಕುಟುಂಬದಲ್ಲಿ ವಕೀಲರಾದ ಪಿ ಅಹಮದ್ ಮತ್ತು ಝೈನಬಿ ಅವರಿಗೆ ಜೂನ್ 30, 1936 ರಂದು ಜನಿಸಿದರು. ಮಹಿಳಾ ಸಮಾನತೆ, ಮಹಿಳಾ ಸಬಲೀಕರಣದ ಚಿಂತನೆ ಹೊಂದಿದ್ದರು. ಮೊದಲ ಕಾದಂಬರಿ ಚಂದ್ರಗಿರಿಯ ತೀರದಲ್ಲಿ ಜನಪ್ರಿಯವಾಗಿ ಗಮನ ಸೆಳೆದಿದೆ. ಸುಮಾರು 10 ಕಾದಂಬರಿ, 6 ಕಥಾ ಸಂಕಲನಗಳು, 5 ಬಾನುಲಿ ನಾಟಕ, ಲೇಖನ, ಪ್ರವಾಸ ಕಥನ ಸಹಿತ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ಕೇರಳದ ಕಾಸರಗೋಡು ಜಿಲ್ಲೆಯವರಾದ ಇವರು ಚಂದ್ರಗಿರಿ ತೀರದಲ್ಲಿ ಪುಸ್ತಕವನ್ನು ಬರೆದಿದ್ದಾರೆ. ಇವರು ತಮ್ಮ ಬರಹಗಳಲ್ಲಿ ಮುಸ್ಲಿಂನ ಕೆಲವು ಸಂಪ್ರದಾಯಗಳನ್ನು ಕಟುವಾಗಿ ಟೀಕಿಸುತ್ತಿದ್ದರು. ಸಾರಾ ಅವರು 1936ರ ಜೂನ್ 30ರಂದು ಕಾಸರಗೋಡಿನ ಚಂದ್ರಗಿರಿ ತೀರದ ಗ್ರಾಮವೊಂದರಲ್ಲಿ ಜನಿಸಿದರು. ತಂದೆ ಪಿ.ಅಹಮದ್ ನ್ಯಾಯವಾದಿ. ತಾಯಿ ಚೈನಾಬಿ. ಅವರ ಹುಟ್ಟಿದೂರಿನಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ಅವರು, ಹೈಸ್ಕೂಲಿನವರೆಗೆ ಕಲಿತದ್ದು ಕಾಸರಗೋಡಿನಲ್ಲಿ.
ಎಂಜನಿಯರ್ ಆಗಿದ್ದ ಅಬೂಬಕ್ಕರ್ ಅವರೊಡನೆ ಸಾರಾ ಅವರ ವಿವಾಹ ಏರ್ಪಟ್ಟು ವಿದ್ಯಾಭ್ಯಾಸಕ್ಕೆ ವಿದಾಯ ಹೇಳುವಂತಾಯಿತು. ಆದರೆ ಓದಿನಲ್ಲಿ ನಿರಂತರ ಆಸಕ್ತರಾಗಿದ್ದ ಸಾರಾ ಅವರು ಶಿವರಾಮ ಕಾರಂತರು, ಇನಾಂದಾರ್, ಭೈರಪ್ಪ, ಅನಂತಮೂರ್ತಿ ಇವರೆಲ್ಲರ ಬರವಣಿಗೆಗೆ ಮಾರು ಹೋಗಿ ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದರು. ಮನೋವಿಜ್ಞಾನದ ಬಗ್ಗೆ ತ್ರಿವೇಣಿಯವರು ಬರೆದ ಕಾದಂಬರಿಗಳು ಸಾರಾ ಅವರಲ್ಲಿ ಆಕರ್ಷಣೆ ಹುಟ್ಟಿಸಿದವು.
ಸಾರಾ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಬಿ. ಸರೋಜಾದೇವಿ ಪ್ರಶಸ್ತಿ, ‘ಸಹನಾ’ ಕಾದಂಬರಿಗೆ ವರ್ಧಮಾನ ಪ್ರಶಸ್ತಿ, ‘ಸುಳಿಯಲ್ಲಿ ಸಿಕ್ಕವರು’ ಕೃತಿಗೆ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಹಾಗೂ ಸಂದೇಶ ಪ್ರಶಸ್ತಿ, ಅನುಪಮ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಮುಂತಾದ ಹಲವಾರು ಪ್ರಮುಖ ಪ್ರಶಸ್ತಿ ಗೌರವಗಳು ಸಂದಿವೆ.
ಅವರ ಪಾರ್ಥಿವ ಶರೀರವನ್ನು ಮಂಗಳೂರಿನ ಹಾಥಿಲ್ನಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ಇಂದು ರಾತ್ರಿ 8 ಗಂಟೆಗೆ ಅಂತಿಮ ವಿಧಿವಿಧಾನ ನಡೆಯಲಿದೆ.
Comments are closed.