ಕರಾವಳಿ

ಶವ ಸಂಸ್ಕಾರಕ್ಕೆ ಮುದೂರಿಗೆ ಬಂತು ‘ಸಂಚಾರಿ ಸ್ಮಶಾನ’ | 5 ಲಕ್ಷ ವೆಚ್ಚದ ಶವ ದಹನ ಯಂತ್ರ ನೀಡಿದ ಮುದೂರು ಸೊಸೈಟಿ

Pinterest LinkedIn Tumblr

ಜಾಗವಿಲ್ಲದೆ ಕಳೆದ ವರ್ಷ ಮನೆಯಂಗಳದಲ್ಲೇ‌ ಅಂತ್ಯಕ್ರಿಯೆ ನಡೆದಿತ್ತು

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಮುದೂರು ಗ್ರಾಮದಲ್ಲಿ ಸ್ಮಶಾನ ವ್ಯವಸ್ಥೆಯಿಲ್ಲದ ಕಾರಣ ಮನೆಯಂಗಳದಲ್ಲೇ ಶವ ಸಂಸ್ಕಾರ ನಡೆಸಿದ ಘಟನೆ ಕಳೆದ ವರ್ಷ ವ್ಯಾಪಕವಾಗಿ ಸುದ್ದಿಯಾಗಿತ್ತು. ಇಲ್ಲಿನ್ನೂ ಕೂಡ ಸ್ಮಶಾನ ನಿರ್ಮಾಣವೂ ಆಗಿಲ್ಲ. ಆದರೆ ಶವ ಸಂಸ್ಕಾರದ ವಿಚಾರದಲ್ಲಿ ಊರಿನ ಜನರ ಸಂಕಷ್ಟಕ್ಕೆ ಪರ್ಯಾಯ ವ್ಯವಸ್ಥೆಯೊಂದನ್ನು ಸಹಕಾರಿ ಸಂಸ್ಥೆ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ. ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಮರಣ ಹೊಂದಿದವರನ್ನ ದಹಿಸುವ ಆಧುನಿಕ ಮಾದರಿಯ ಯಂತ್ರವನ್ನು ಈ ಮುದೂರು ಭಾಗದಲ್ಲಿ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಪರಿಚಯಿಸಿದೆ.

ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಜಡ್ಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನ ಇಲ್ಲದ ಹಿನ್ನೆಲೆ ಜಡ್ಕಲ್ ಹಾಗೂ ಮುದೂರು ಭಾಗದಲ್ಲಿ ಸಾವು ಸಂಭವಿಸಿದರೆ ಅಂತ್ಯಕ್ರಿಯೆ ನಡೆಸುವುದು ಬಾರಿ ಕಷ್ಟಕರ ವಿಚಾರ. ದೀರ್ಘಾವಧಿ ಬೆಳೆಯ ಕೃಷಿ-ತೋಟ ನೆಚ್ಚಿಕೊಂಡಿದ್ದು ಮನೆ ಬಳಿಯಿರುವುದು ತುಂಡು ಭೂಮಿ‌ ಮಾತ್ರ. ಜಾಗದ ಕೊರತೆಯಿರುವುದರಿಂದ ಶವಸಂಸ್ಕಾರ ನಡೆಸಲು ದೂರದ ಕುಂದಾಪುರಕ್ಕೆ ತೆರಳಬೇಕಾದ ಅನಿವಾರ್ಯತೆ. ಕಳೆದ ವರ್ಷ ಮೇ ತಿಂಗಳಲ್ಲಿ ಅನಾರೋಗ್ಯದಿಂದ ಮೃತಪಟ್ಟ ಮುದೂರು ಉದಯನಗರದ 50 ವರ್ಷ ಪ್ರಾಯದ ವ್ಯಕ್ತಿಯ ಶವಸಂಸ್ಕಾರ ಮನೆಯಂಗಳದಲ್ಲೇ ನಡೆಸಿದ್ದು ಚಿಕ್ಕ ಮಕ್ಕಳಿದ್ದ ಮನೆಯಲ್ಲಿ ಅಂಗಳದಲ್ಲಿಯೇ ಶವ ಸುಡುವ ಪರಿಸ್ಥಿತಿ ಒಂದೆಡೆಯಾದರೆ ಅವರ ಮನೆಯ ಐದು ಸೆಂಟ್ಸಿನ ಒಳಗೆ ಚಿತೆಯ ಅಕ್ಕಪಕ್ಕದಲ್ಲಿ ಬೆಳೆದು ನಿಂತ ಫಲಬರಿತ ಅಡಿಕೆ, ತೆಂಗಿನ ಮರ ಸುಟ್ಟು ಹೋಗಿತ್ತು. ಒಟ್ಟಾರೆ ಈ ಸಂಪೂರ್ಣ ಘಟನೆ ಮನಕಲಕುವಂತೆ ಮಾಡಿತ್ತು. ದಶಕಗಳಿಂದ ಸ್ಮಶಾನ ನಿರ್ಮಾಣಕ್ಕೆ ಬೇಡಿಕೆಯಿಟ್ಟರೂ ಕೂಡ ಸಂಬಂದಪಟ್ಟವರ ಸ್ಪಂದನೆ ಈವರೆಗೆ ಸಿಕ್ಕಿಲ್ಲ. ಆದರೆ ಈ ಸಮಸ್ಯೆಗೆ ಮುಕ್ತಿ ನೀಡಲು ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ವ್ಯವಸ್ಥೆಯೊಂದನ್ನು ಕಲ್ಪಿಸಿದೆ. ‘ಮೊಬೈಲ್ ಕ್ರಿಮೆಟೋರಿಯಮ್’ ಅಥವಾ ‘ಸಂಚಾರಿ ಸ್ಮಶಾನ’ ಎಂಬ ಶವ ದಹನ ಯಂತ್ರವನ್ನು ಲೋಕಾರ್ಪಣೆಗೊಳಿಸಿದೆ.

ಮಾದರಿ ಕಾರ್ಯ:
ವ್ಯವಸಾಯ ಸೇವಾ ಸಹಕಾರಿ ಸಂಘವೊಂದು ತನ್ನೂರಿನ ಜನರ ಕಷ್ಟಕ್ಕೆ ಸ್ಪಂದಿಸಿ ಸಂಚಾರಿ ಸ್ಮಶಾನ ವ್ಯವಸ್ಥೆ ಮಾಡಿರುವುದು ರಾಜ್ಯದಲ್ಲೇ ಪ್ರಥಮ ಎನ್ನಲಾಗಿದೆ. ಸಂಘದ ಅಧ್ಯಕ್ಷ ಎಂ. ವಿಜಯ ಶಾಸ್ತ್ರಿ, ಉಪಾಧ್ಯಕ್ಷ ನಕ್ಷತ್ರ ಬೋವಿ ಸಹಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ ಪೂಜಾರಿಯವರು ಜನರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹಿಂದಿನ ಸಮಸ್ಯೆ ತಮ್ಮೂರಿನಲ್ಲಿ ಮರುಕಳಿಸಬಾರದೆಂಬ ಕಾಳಜಿಯಲ್ಲಿ ಸಂಘದ ಮರಣ ನಿಧಿಯಲ್ಲಿ ಇದರ ವೆಚ್ಚ ಭರಿಸಲಾಗಿದ್ದು ಶವ ಸಂಸ್ಕಾರಕ್ಕಾಗಿ ಯಂತ್ರದ ಸಾಗಾಟ, ಗ್ಯಾಸ್ ಸಹಿತ ಇತರೆ ಖರ್ಚನ್ನು ಕೂಡ ಮುದೂರು ಸೊಸೈಟಿ ಭರಿಸಲಿದೆ.

ಪರಿಸರ ಸ್ನೇಹಿ ಸಂಚಾರಿ ಸ್ಮಶಾನ:
ಅಂದಾಜು 7 ಅಡಿ ಉದ್ದ, 2 ಅಡಿ ಅಗಲ, 4 ಅಡಿ ಎತ್ತರದ ಈ ಶವದಹನ ಯಂತ್ರವು ಗ್ಯಾಸ್ ಮತ್ತು ವಿದ್ಯುತ್ ಮೂಲಕ ಕಾರ್ಯನಿರ್ವಹಿಸುತ್ತದೆ. ಒಂದೊಮ್ಮೆ ವಿದ್ಯುತ್ ಇಲ್ಲದಿದ್ದರೆ ಕೇವಲ ಗ್ಯಾಸ್ ಮೂಲಕವೇ ಶವ ದಹಿಸಲು ಸಾಧ್ಯ. ಯಂತ್ರದ ಒಳಭಾಗದಲ್ಲಿನ ಚೇಂಬರ್ ಮೇಲೆ ಶವ ಇಟ್ಟು ಕರ್ಪೂರ ಹಚ್ಚಿ ಮೇಲ್ಭಾಗ ಮುಚ್ಚಿ ಗ್ಯಾಸ್ ಸಂಪರ್ಕ ನೀಡಿದರೆ ಕೆಲವೇ ಕ್ಷಣಗಳಲ್ಲಿ ದಹನ ಪ್ರಕ್ರಿಯೆ ಮುಗಿಯುತ್ತದೆ. ಗ್ಯಾಸ್ ಮೂಲಕವೇ ದಹನ ಪ್ರಕ್ರಿಯೆ ನಡೆಯುವ ಕಾರಣ ವಾಯುಮಾಲಿನ್ಯ ರಹಿತವಾಗಿ, ಪರಿಸರ ಸ್ನೇಹಿಯಾಗಿ ಈ ಯಂತ್ರ ಕಾರ್ಯಾಚರಿಸುತ್ತದೆ. ಒಂದು ಶವ ಸಂಸ್ಕಾರಕ್ಕೆ 10 ಕಿಲೋ ಗ್ಯಾಸ್, 100 ಗ್ರಾಂ ಕರ್ಪೂರ ಬೇಕಾಗಲಿದೆ. ಈ ಯಂತ್ರಕ್ಕೆ 5 ಲಕ್ಷದ 80 ಸಾವಿರ ಹಣ ವೆಚ್ಚವಾಗಿದ್ದು ಕೇರಳ ಮೂಲದ ಸ್ಟಾರ್ ಚೇರ್ ಕಂಪೆನಿ ಈ ಯಂತ್ರ ನಿರ್ಮಿಸುತ್ತಿದೆ.

(ಕಳೆದ ವರ್ಷ ಮನೆಯೆದುರೆ ನಡೆದ ಮೃತರ ಶವಸಂಸ್ಕಾರ)

ಹಿಂದುಳಿದವರು, ದಲಿತರು ವಾಸಿಸುವ ಈ ಭಾಗದಲ್ಲಿ ಐದು ಸೆಂಟ್ಸ್ ಜಾಗವಿರುವ ಕುಟುಂಬಗಳ ಮನೆಯಲ್ಲಿ ಸಾವಿಗೀಡಾದರೆ ಸ್ಮಶಾನಕ್ಕೆ ದೂರದ ಕುಂದಾಪುರಕ್ಕೆ ಹೋಗಬೇಕು. ಅಷ್ಟು ಖರ್ಚು ವೆಚ್ಚವನ್ನ ನಿಭಾಯಿಸುವ ಶಕ್ತಿ ಇಲ್ಲಿನವರಿಗಿಲ್ಲ. ಈ ಹಿಂದೆ ಮನೆಯಂಗಳದಲ್ಲಿಯೇ ಹೆಣವನ್ನ ಸುಟ್ಟ ಘಟನೆ ಇದಕ್ಕೆ ಸಾಕ್ಷಿ. ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ ಶವದಹನ ಯಂತ್ರವನ್ನ ಲೋಕಾರ್ಪಣೆ ಮಾಡಿದ್ದು ಉತ್ತಮ ವಿಚಾರ. ಆದರೆ ಮುದೂರು ಗ್ರಾಮದ ಸರ್ವೇ ನಂ.108ರಲ್ಲಿ ಸ್ಮಶಾನ ಜಾಗಕ್ಕೆ ಕಾದಿರಿಸಿದ ಭೂಮಿಯಿದ್ದು ಅದು ಒತ್ತುವರಿಯಾದ ಕಾರಣ ಸ್ಮಶಾನ ನಿರ್ಮಾಣ ಕಾರ್ಯ ನಡೆದಿಲ್ಲ. ಸರ್ಕಾರ ಹಾಗೂ ಜಿಲ್ಲಾಡಳಿತ ಈ ಬಗ್ಗೆ ಮುತುವರ್ಜಿ ವಹಿಸಬೇಕು.
– ವಾಸುದೇವ ಮುದೂರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲಾ ಸಂಚಾಲಕ

ಸ್ಮಶಾನವೂ ಇಲ್ಲ, ಜಾಗವೂ ಇಲ್ಲದ ಪರಿಸ್ಥಿತಿಯಲ್ಲಿ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾದ ಸಂಚಾರಿ ಸ್ಮಶಾನ ಇದಾಗಿದೆ. ಕೆಲವರಿಗೆ ಅವರ ಸ್ಥಳದಲ್ಲೇ ಅಂತ್ಯಕ್ರಿಯೆ ನಡೆಯಬೇಕೆಂಬ ಆಸೆಯಿರುತ್ತದೆ. ಆ ಸಮಯದಲ್ಲಿ ಮೃತರ ಮನೆ ಅಥವಾ ಜಾಗದ ಬಳಿ ಈ ಯಂತ್ರವನ್ನು ಕೊಂಡೊಯ್ದು ಸಂಪ್ರದಾಯಬದ್ಧವಾಗಿ ಶವ ಸಂಸ್ಕಾರ ನಡೆಸಲು ಸಾಧ್ಯ. ಸೊಸೈಟಿ ಈ ವೆಚ್ಚ ಭರಿಸಲಿದೆ.
ವಿಜಯ ಶಾಸ್ತ್ರಿ- ಅಧ್ಯಕ್ಷರು, ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘ

Comments are closed.