(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಪರಿಸರ ಸ್ವಚ್ಚತೆ ಪ್ರತಿಯೊಬ್ಬ ನಾಗರಿಕರ ಜವಬ್ದಾರಿಯಾಗಬೇಕು. ವೈಯಕ್ತಿಕ ಸ್ವಚ್ಚತೆ ಜೊತೆಗೆ ಪರಿಸರದ ಕಾಳಜಿ ಮೈಗೂಡಿಸಿಕೊಂಡಾಗ ಉತ್ತಮ ಆರೋಗ್ಯದ ಜೊತೆಗೆ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಅಬ್ದುಲ್ ಹುಸೇನ್ ರಹೀಮ್ ಶೇಖ್ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ಕುಂದಾಪುರ ವಕೀಲರ ಸಂಘ, ಪುರಸಭೆ ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ, ತಾಲ್ಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸ್ವಚ್ಚತಾ ಕಾರ್ಯಕ್ರಮದ ಅಂಗವಾಗಿ ಜ.30 ಸೋಮವಾರದಂದು ಕುಂದಾಪುರದಲ್ಲಿ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶುಚಿತ್ವವು ದೈವಭಕ್ತಿಯಷ್ಟು ಶ್ರೇಷ್ಟ ಎಂಬ ಮಹಾತ್ಮ ಗಾಂಧೀಜಿಯವರ ತತ್ವಾದರ್ಶಗಳನ್ನು ಪಾಲಿಸಿ ಸುಂದರ ಪರಿಸರ ನಿರ್ಮಿಸುವುದು ನಮ್ಮ ಕರ್ತವ್ಯ ಆಗುವ ಜೊತೆಗೆ ನಿತ್ಯನಿರಂತರವಾಗಿ ಈ ಕಾರ್ಯಕ್ರಮಗಳನ್ನು ನಡೆಸಿ ಮುಂದಿನ ಪೀಳಿಗೆಗೆ ಪರಿಸರ ಕಾಳಜಿಯನ್ನು ಪಸರಿಸಬೇಕು ಎಂದವರು ಕರೆ ನೀಡಿದರು.
ಇದೇ ಸಂದರ್ಭ ನ್ಯಾಯಾಧೀಶರು, ನ್ಯಾಯಾಲಯ, ಕಂದಾಯ ಇಲಾಖೆ, ಪುರಸಭೆಯ ಸಿಬ್ಬಂದಿಗಳು, ಪೌರ ಕಾರ್ಮಿಕರು ಕುಂದಾಪುರದ ನ್ಯಾಯಾಲಯದ ಆವರಣ ಹಾಗೂ ಬ್ಲೂವಾಟರ್ ಬಳಿಯಿಂದ ಫೆರ್ರಿ ಪಾರ್ಕ್ ತನಕ ಪಂಚ ಗಂಗಾವಳಿ ನದಿ ತೀರದಲ್ಲಿ ಸ್ವಚ್ಚತಾ ಕಾರ್ಯ ನಡೆಸಿದರು.
ಈ ಸಂದರ್ಭ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜು ಎನ್., ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ರೋಹಿಣಿ ಡಿ., ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಕುಂದಾಪುರ ತಹಶಿಲ್ದಾರ್ ಕಿರಣ್ ಗೌರಯ್ಯ, ಉಪತಹಶಿಲ್ದಾರ್ ವಿನಯ್, ಕಂದಾಯ ನಿರೀಕ್ಷಕ ದಿನೇಶ್, ಆಹಾರ ನಿರೀಕ್ಷಕ ಸುರೇಶ್ ಕೆ. ಇದ್ದರು.
Comments are closed.