ಕೊಚ್ಚಿ: ಕೇರಳದ ಪೆಟ್ಶಾಪ್ನಿಂದ ಸುಮಾರು 15000 ರೂಪಾಯಿ ಮೌಲ್ಯದ ನಾಯಿ ಮರಿಯನ್ನು ಕಳ್ಳವುಗೈದ ಆರೋಪದಲ್ಲಿ ಉಡುಪಿ ಮೂಲದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ವಿದ್ಯಾರ್ಥಿಗಳು ಬೆಲೆ ಬಾಳುವ ನಾಯಿ ಮರಿಯನ್ನು ಕಳ್ಳತನ ಮಾಡಿದ್ದು, ಪೆಟ್ ಶಾಪ್ ಮಾಲೀಕ ನೀಡಿದ ದೂರಿನಡಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಳೆದ ಶನಿವಾರ ಸಂಜೆ ಈ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿತ್ತು. ಬೆಕ್ಕು ಮಾರುವ ನೆಪದಲ್ಲಿ ನೆಟ್ಟೂರಿನಲ್ಲಿರುವ ಪೆಟ್ ಶಾಪ್ಗೆ ಬೈಕ್ನಲ್ಲಿ ಬಂದ ಉಡುಪಿ ಮೂಲದ ನಿಖಿಲ್ ಮತ್ತು ಶ್ರೇಯಾ ಅವರು ಪೆಟ್ ಶಾಪ್ ಮಾಲೀಕನ ಜೊತೆ ಬೆಕ್ಕು ಮಾರುವ ಕುರಿತು ಮಾತನಾಡಿದ್ದಾರೆ. ಹೀಗೆ ಮಾತನಾಡುತ್ತಿದ್ದಂತೆ ಅಂಗಡಿ ಮಾಲೀಕನ ಗಮನ ಬೇರೆಡೆಗೆ ಸೆಳೆದ ವಿದ್ಯಾರ್ಥಿನಿ ಪಂಜರದಲ್ಲಿ ಇಟ್ಟಿದ್ದ ನಾಯಿ ಮರಿಯನ್ನು ತೆಗೆದುಕೊಂಡು ನಿಖಿಲ್ನ ಹೆಲ್ಮೆಟ್ಗೆ ಹಾಕಿದ್ದಾಳೆ.
ಇತ್ತೀಚೆಗೆ ಕೇರಳದ ಎಡಪಲ್ಲಿಯಿಂದ ಅಂಗಡಿ ಮಾಲಿಕ ಮೂರು ನಾಯಿ ಮರಿಗಳನ್ನು ಖರೀದಿಸಿ ತನ್ನ ಪೆಟ್ ಶಾಪ್ಗೆ ತಂದು ಇಟ್ಟಿದ್ದರು. ಆ ಪೈಕಿ ಒಂದು ನಾಯಿ ಮರಿಯನ್ನು ಆಲಪ್ಪುರ ಮೂಲದ ವ್ಯಕ್ತಿಗೆ ಮಾರಾಟ ಮಾಡಲು ನಿಗದಿ ಮಾಡಿ ಅಡ್ವಾನ್ಸ್ ತೆಗೆದುಕೊಂಡಿದ್ದರು. ಶನಿವಾರ ಆಲಪ್ಪುರದ ಗ್ರಾಹಕ ನಾಯಿ ಮರಿ ಖರೀದಿಗೆ ಪೆಟ್ ಶಾಪ್ಗೆ ಬಂದಿದ್ದು, ಆಗ ನಾಯಿ ಮರಿಯನ್ನು ಕೊಡಲು ಅಂಗಡಿ ಮಾಲೀಕ ಪಂಜರ ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕೂಡಲೇ ತನ್ನ ಪೆಟ್ ಶಾಪ್ನಲ್ಲಿದ್ದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದಾರೆ. ಆಗ ಎರಡು ದಿನದ ಹಿಂದೆ ಅಂಗಡಿಗೆ ಬಂದಿದ್ದ ಯುವಕ ಮತ್ತು ಯುವತಿ ನಾಯಿ ಮರಿಯನ್ನು ಕದ್ದು ಬೈಕ್ನ ಹೆಲ್ಮೆಟ್ ಒಳಗೆ ಹಾಕಿಕೊಂಡು ಪರಾರಿಯಾಗಿರುವ ದೃಶ್ಯ ಸಿಸಿ ಟಿವಿ ದೃಶ್ಯದ ಮೂಲಕ ತಿಳಿದು ಬಂದಿದೆ.
ನಿಖಿಲ್ ಮತ್ತು ಶ್ರೇಯಾ ಸಾಗಿರುವ ಮಾರ್ಗದಲ್ಲಿನ ಇತರ ಸಿಸಿ ಟಿವಿ ದೃಶ್ಯಗಳನ್ನು ಅಂಗಡಿ ಮಾಲೀಕ ಪರಿಶೀಲನೆ ಮಾಡಿದ್ದಾರೆ. ಆಗ ಅವರು ವೈಟ್ಟಿಲದ ಮತ್ತೊಂದು ಪೆಟ್ ಶಾಪ್ನಿಂದ ನಾಯಿಗೆ ಕೊಡುವ ಆಹಾರವನ್ನೂ ಕದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಎಚ್ಚೆತ್ತ ಎರಡೂ ಪೆಟ್ ಶಾಪ್ನ ಮಾಲೀಕರು ಕಳ್ಳತನ ಆಗಿರುವ ಬಗ್ಗೆ ಪಣಂಗಾಡ್ ಪೊಲೀಸ್ ಠಾಣೆಯಲ್ಲಿ ನಿಖಿಲ್ ಮತ್ತು ಶ್ರೇಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪಣಂಗಾಡ್ ಠಾಣೆ ಪೊಲೀಸರು ನಿಖಿಲ್ ಮತ್ತು ಶ್ರೇಯಾ ಚಲಿಸುತ್ತಿದ್ದ ಬೈಕ್ ನಂಬರ್ನ, ಸಿಸಿ ಟಿವಿ ಪೂಟೇಜ್ ಪರಿಶೀಲನೆ ನಡೆಸಿದಾಗ ಇಬ್ಬರೂ ಕಳ್ಳರು ಉಡುಪಿ ಮೂಲದವರು ಎಂದು ತಿಳಿದು ಬಂದಿದ್ದು ಕೇರಳದ ಪೊಲೀಸರು ಉಡುಪಿಯ ಅವರ ನಿವಾಸದಲ್ಲಿ ಶ್ರೇಯಾ ಮತ್ತು ನಿಖಿಲ್ನನ್ನು ಬಂಧನ ಮಾಡಿದ್ದಾರೆ. ಜೊತೆಗೆ ಕದ್ದ ನಾಯಿ ಮರಿಯನ್ನು ಕೊಂಡು ಹೋಗಿ ಪೆಟ್ ಶಾಪ್ ಮಾಲೀಕನಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
Comments are closed.