ಕುಂದಾಪುರ: ಜಿಲ್ಲೆಯ ಕುಂದಾಪುರ ತಾಲೂಕಿನ ಬೈಂದೂರು ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಭಾಗಿಮನೆ ಗ್ರಾಮದ ಗ್ರಾಮಸ್ಥರು ಮುಂಬರುವ ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಲ್ಲದೆ ಮತಯಾಚನೆಗೆ ಬರಬೇಡಿ ಎಂದು ರಾಜಕೀಯ ವ್ಯಕ್ತಿಗಳಿಗೆ ಬ್ಯಾನರ್ ಅಳವಡಿಕೆ ಮೂಲಕ ಖಡಕ್ ಸಂದೇಶ ರವಾನಿಸಿದ್ದಾರೆ.
ಭಾಗಿಮನೆ ಪ್ರದೇಶದಲ್ಲಿ ಸುಮಾರು 70 ಕ್ಕೂ ಅಧಿಕ ಮನೆಗಳಿದ್ದು ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಪ್ರಮುಖ ಬೇಡಿಕೆಯಾಗಿರುವ ಮೊಬೈಲ್ ನೆಟ್‌ವರ್ಕ್ ಸಮಸ್ಸೆಯನ್ನು ನೀವಾರಿಸಲು ಪಕ್ಷ ಭೇದ ಮರೆತು ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್, ಶಾಸಕ, ಸಂಸದರ ಸಹಿತ ಬೇಡಿಕೆ ಇಟ್ಟಿದ್ದರೂ ಈವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ, ಜನರ ಬವಣೆಯೂ ನೀಗಿಲ್ಲ. ಊರಿನ ನೆಟ್‌ವರ್ಕ್ ಸಮಸ್ಸೆಗೆ ಮುಕ್ತಿ ದೊರೆಯದ ದಿನಗಳಲ್ಲಿ ಬರುವ ಯಾವುದೆ ಚುನಾವಣೆಯಲ್ಲಿ ಮತ ಚಲಾಯಿಸದಿರಲು ನಿರ್ಧರಿಸಿದ ಗ್ರಾಮಸ್ಥರು ರಾಜಕಾರಣಿಗಳಿಗೆ ಚುನಾವಣಾ ಪ್ರಚಾರಕ್ಕೆ ಭಾಗಿಮನೆ ಊರಿಗೆ ನಿಷೇಧಿಸಿ, ಊರಿನ ಗ್ರಾಮಸ್ಥರು ಸೇರಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿ ‘ನಾವು ಯಾವುದೆ ರಾಜಕೀಯ ಪಕ್ಷದ ಪರ ಹಾಗೂ ವಿರೋಧಿಗಳಲ್ಲ’ ಎಂಬ ವಾಕ್ಯದಡಿಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಭಾಗಿಮನೆ ಗ್ರಾಮಸ್ಥರ ಹೆಸರಿನಲ್ಲಿ ಈ ಬ್ಯಾನರ್ ಅಳವಡಿಸಲಾಗಿದೆ.
ಯಾರಿಗಾದರೂ ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಒಂದು ಆಟೋ ರಿಕ್ಷಾಕ್ಕೆ ಕರೆ ಮಾಡಿ ಬರಲು ಹೇಳಬೇಕೆಂದರೆ ಅಸಾಧಗಯ ಪರಿಸ್ಥಿತಿ. ಮೂಲಭೂತ ಸೌಕರ್ಯದಷ್ಟೆ ಅತಿ ಅವಶ್ಯಕವಾಗಿರುವ ನೆಟ್‌ವರ್ಕ್ ನಿಂದ ವಂಚಿತರಾಗಿದ್ದು, ನಮ್ಮ ಊರಿನ ಬಹು ದಿನದ ಬೇಡಿಕೆಯಾಗಿರುವ ಈ ಸಮಸ್ಯೆಯನ್ನು ಸಂಬಂಧ ಪಟ್ಟ ಚುನಾಯಿತ ಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರು ಯಾವುದೆ ಫಲ ದೊರೆಯದ ಹಿನ್ನೆಲೆಯಲ್ಲಿ ನಾವು ಮುಂಬರುವ ಚುನಾವಣೆಯನ್ನು ಬಹಿಸ್ಕರಿಸಲು ತೀರ್ಮಾನ ಮಾಡಲು ನಿರ್ಧರಿಸಿದ್ದೇವೆ.
– ಮಹೇಶ್ ರಾಜ್ ಶೆಟ್ಟಿ, ಭಾಗಿಮನೆ
ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಹೆಚ್ಚಾಗಿ ಪರಿಶಿಷ್ಟ ಪಂಗಡದ ಮರಾಠಿ ಜನಾಂಗದ ಮನೆಗಳಿರುವ ಹೊಸಂಗಡಿ ಗ್ರಾಮದ ಬಾಗೀಮನೆ ಎಂಬ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇಂದು ನಿನ್ನೆಯದಲ್ಲ. ಈ ವಿಷಯವಾಗಿ ಹಲವಾರು ಬಾರಿ ಶಾಸಕರು ಸಂಸದರು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು ಚುನಾವಣಾ ಸಮಯದಲ್ಲಿ ಈ ಭಾಗದ ಜನರ ಬೇಡಿಕೆ ಈಡೇರಿಸುವ ಭರವಸೆ ಇನ್ನೂ ಈಡೇರಿಲ್ಲ. ನೆಟ್ವರ್ಕ್ ಸಮಸ್ಯೆ ಊರನ್ನೇ ಕಾಡುತ್ತಿದೆ. ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರಹೋಗಿ ದೂರದ ಗುಡ್ಡ ಹತ್ತಿ ಕರೆ ಮಾಡಬೇಕಾದ ಅನಿವಾರ್ಯತೆಯಿದ್ದು ಸಮಸ್ಯೆ ಬಗೆಹರಿಸದಿದ್ದರೆ ಈ ಬಾರಿ ಚುನಾವಣೆಗೆ ಮತ ಹಾಕಲು ಹೋಗುವುದಿಲ್ಲ ಮತ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ತೀರ್ಮಾನಿಸಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಾದರೂ ಈ ಜನರ ಬಗ್ಗೆ ಕಾಳಜಿ ವಹಿಸಿ ತುರ್ತುಕ್ರಮ ವಹಿಸಲಿ.
-ಕೆ. ಆನಂದ ಕಾರೂರು (ದಲಿತ ಮುಖಂಡರು, ಹೊಸಂಗಡಿ)
Comments are closed.