ಕರಾವಳಿ

ಕುಂದಾಪುರದ ಕೊಡ್ಲಾಡಿ ಮಾರ್ಡಿ ಸರಕಾರಿ ಶಾಲೆಯ ಅಂದ ಹೆಚ್ಚಿಸಿದ ಬೆಂಗಳೂರಿನ ‘ಬೆಳಕು’ ತಂಡ..!

Pinterest LinkedIn Tumblr

(ಚಿತ್ರ, ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಗ್ರಾಮದ ಶಾಲೆಯ ಗೋಡೆಯಲ್ಲಿ ಚಿತ್ರಗಳ ಚಿತ್ತಾರ. ಕಟ್ಟಡದ ಗೋಡೆ, ಕಾಂಪೊಂಡ್ ಗೆ ಅಂದವಾದ ಸುಣ್ಣ-ಬಣ್ಣ. ಕುಂದಾಪುರ ತಾಲೂಕಿನ ಕೊಡ್ಲಾಡಿ ಗ್ರಾಮದ ಮಾರ್ಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗಾ ಸುಣ್ಣ-ಬಣ್ಣದಿಂದ ಸಿಂಗಾರಗೊಂಡು ನಳನಳಿಸುತ್ತಿದೆ. ಇದಕ್ಕೆಲ್ಲಾ ಕಾರಣವಾಗಿದ್ದು ಬೆಂಗಳೂರಿನ ಬೆಳಕು ಎಂಬ ತಂಡ.

ಬೆಳಕು ತಂಡದ 21 ಮಂದಿ ಸ್ವಯಂಸೇವಕರು ಶುಕ್ರವಾರ ರಾತ್ರಿ ಬೆಂಗಳೂರಿನಿಂದ ಹೊರಟು ಶನಿವಾರ ಆಗಮಿಸಿ ಶಾಲೆಯ ಎರಡು ದಿನಗಳ ಕಾಲ ಸೌಂದರ್ಯೀಕರಣದಲ್ಲಿ ತೊಡಗಿಸಿಕೊಂಡರು. ಸುಮಾರು 60 ಕ್ಕೂ ಅಧಿಕ ವಿದ್ಯಾರ್ಥಿಗಳಿರುವ ಶಾಲೆ ಇದಾಗಿದ್ದು ಇಡೀ ಶಾಲೆ ಕಟ್ಟಡದ ಒಳಗೆ ಮತ್ತು ಹೊರಗೆ ಸುಣ್ಣ-ಬಣ್ಣ, ಬೋರ್ಡಿಗೆ ಬಣ್ಣ ಬಳಿಯಲಾಗಿದೆ. ಶಾಲೆ ಎದುರಿನ ಗೋಡೆಗೆ ಶಿಕ್ಷಣ ಹಾಗೂ ಮಾಹಿತಿ ಆಧಾರಿತ ಚಿತ್ರಗಳು. ಹೊರಭಾಗದ ಕಾಂಪೊಂಡ್ ಹಾಗೂ ಶಾಲಾ ಸ್ವಾಗತ ಗೋಪುರಕ್ಕೆ ಬಣ್ಣ ಬಳಿಯುವ ಮೂಲಕ ಇಡೀ ಶಾಲೆಯ ಅಂದ ಹೆಚ್ಚಿಸಲಾಗಿದೆ. ಶಾಲೆಯ ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಅವರ ಕೋರಿಕೆಯಂತೆ ಬೆಳಕು ತಂಡ ಆಗಮಿಸಿ ಈ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈಗಾಗಾಲೇ ಬೆಂಗಳೂರು, ಮಂಡ್ಯ, ಉತ್ತರಕನ್ನಡ ಸಹಿತ 9 ಶಾಲೆಗಳ ಸೌಂದರ್ಯೀಕರಣ ನಡೆದಿದ್ದು ಮಾರ್ಡಿ ಶಾಲೆ ಹತ್ತನೆಯದ್ದಾಗಿದೆ. ತಂಡದ ವಿನಯ್ ಕೆ.ಆರ್ ಪೇಟೆ ಅವರ ಕೃೆಚಳಕದಿಂದ ಗೋಡೆಗಳ ಮೇಲೆ ಸುಂದರವಾದ ಚಿತ್ರಗಳು ಮೂಡಿಬಂದವು.

ಬೆಳಕು ತಂಡ:
ಬೆಂಗಳೂರು ಮೂಲದ ಬೆಳಕು ತಂಡ 9 ಮಂದಿ ಸದಸ್ಯರೊಂದಿಗೆ ಸಮಾಜ ಸೇವೆಯ ಕಲ್ಪನೆಯಡಿ ಡಾ. ವಿಷ್ಣುವರ್ಧನ್ ಜನ್ಮದಿನದಂದು 2019ರಲ್ಲಿ ಹುಟ್ಟಿಕೊಂಡಿದ್ದು ಇದೀಗಾ ಯುವಕರು, ಮಹಿಳೆಯರು, ಯುವತಿಯರ ಸಹಿತ 210 ಮಂದಿ‌ ಸದಸ್ಯರಿದ್ದಾರೆ. ಬಹುತೇಕರು ಎಂ.ಎನ್.ಸಿ ಕಂಪೆನಿಯಲ್ಲಿ ಕೆಲಸ ಮಾಡುವವರಾಗಿದ್ದು ತಿಂಗಳಿನಲ್ಲಿ ಒಂದು ದಿನ ಸಮಾಜಸೇವೆಗೆ ಮೀಸಲಿಡುತ್ತಾರೆ. ಶಾಲಾ ಸೌಂಧರ್ಯೀಕರಣದ ಜೊತೆಗೆ ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಸ್ಲಂಗಳಿಗೆ ಭೇಟಿ ನೀಡಿ ಅಗತ್ಯ ಸೌಲಭ್ಯ ನೀಡುವುದು, ಪ್ರಾಣಿಗಳ ರಕ್ಷಣೆ ಸಹಿತ ವಿವಿಧ ಸಾಮಾಜಿಕ ಸೇವಾ ಕೈಂಕರ್ಯಗಳಲ್ಲಿ ಇವರು ತೊಡಗಿಸಿಕೊಳ್ಳುತ್ತಿದ್ದು ದುಡಿಮೆಯ ಹಣವನ್ನು ಸಮಾಜಸೇವೆಗೆ ಈ ತಂಡ ಬಳಸುತ್ತಿದೆ. ಯಾರಿಂದಲೂ ಡೊನೇಶನ್, ಫಂಡ್ ಕಲೆಕ್ಟ್ ಮಾಡುವುದಿಲ್ಲ. ಕರ್ನಾಟಕದ ವಿವಿದೆಡೆಯವರ ಸಹಿತ ಆಂದ್ರಪ್ರದೇಶ, ತಮಿಳುನಾಡು,ಒರಿಸ್ಸಾ ಮೊದಲಾದ ಹೊರರಾಜ್ಯದವರು ಕೂಡ ಬೆಳಕು ತಂಡದಲ್ಲಿದ್ದಾರೆ. ಇವರ ಸಮಾಜಸೇವೆ ಗುರುತಿಸಿ ಡಾಕ್ಟರೇಟ್, ರತ್ನಶ್ರಿ, ಸೇವಾಭೂಷಣ, ಬಾಂಧವ್ಯ ರತ್ನ, ಸುವರ್ಣ ಕನ್ನಡಿಗ ಮೊದಲಾದ ಪ್ರಶಸ್ತಿಗಳು ಲಭಿಸಿದೆ.

ಬೆಳಕು ತಂಡ ಮಾಡುವ ಕೆಲಸ ನಾಲ್ಕು ಜನರಿಗೆ ಪ್ರೇರಣೆಯಾಗಬೇಕು ಎಂಬ ನಿಟ್ಟಿನಲ್ಲಿ ‘ಪಯಣದ ಹಾದಿಗೆ ಪ್ರೇರಣೆ’ ಎಂಬ ಟ್ಯಾಗ್ ಲೈನ್ ನೀಡಲಾಗಿದ್ದು, ಇಡೀ ತಂಡ ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ. ಡಾ. ವಿಷ್ಣುವರ್ಧನ್, ಪುನೀತ್ ರಾಜಕುಮಾರ್ ಸಹಿತ ಒಳ್ಳೆ ಕೆಲಸ ಮಾಡುವವರು ನಮ್ಮ ಈ ಕಾರ್ಯಕ್ಕೆ ಪ್ರೇರಣೆ. ದುಡಿಮೆಯ ಹಣದಲ್ಲಿ ತಿಂಗಳಿಗೊಮ್ಮೆ ವಿವಿಧ ರೀತಿಯಾದ ಸಾಮಾಜಿಕ ಚಟುವಟಿಕೆಗಳನ್ನು ಮಾಡುತ್ತೇವೆ. ಸದಸ್ಯರೆಲ್ಲರ ಕುಟುಂಬದವರ ಪ್ರೋತ್ಸಾಹ ಮತ್ತು ಸಹಕಾರವಿದೆ.
– ಶಿವಕುಮಾರ್, ಬೆಳಕು ತಂಡದ ಸದಸ್ಯ

ಸುಮಾರು 10-15 ವರ್ಷದಿಂದ ಶಾಲೆಗೆ ಸುಣ್ಣ-ಬಣ್ಣವಾಗಿರಲಿಲ್ಲ. ಶಾಲೆಯ ಅಂದ ಹೆಚ್ಚಿಸುವ ಚಿಂತನೆ ಎಸ್.ಡಿ.ಎಂ.ಸಿ ಹಾಗೂ ಹಳೆ ವಿದ್ಯಾರ್ಥಿಗಳದ್ದಾಗಿತ್ತು. ಅಂತಯೇ ಶಾಲಾ ಹಳೆ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿಯವರು ಬೆಳಕು ತಂಡದವರ ಬಳಿ ಮಾತನಾಡಿದ್ದು ಅದರ ಸದಸ್ಯರು ಶಾಲೆಗೆ ಪೇಂಟಿಂಗ್ ಮಾಡುವ ಮೂಲಕ ಅಂದ ಹೆಚ್ಚಿಸಿದ್ದಾರೆ. ಇದೊಂದು ಮೆಚ್ಚುಗೆಯ ಕಾರ್ಯವಾಗಿದೆ. ಸದ್ಯ ಶಾಲೆಯ ವಾತಾವರಣ ಕಂಗೊಳಿಸುತ್ತಿದ್ದು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ವೃದ್ಧಿಯಾಗುವ ಸಾಧ್ಯತೆಗಳಿದೆ.
– ಗೌರಿ (ಶಾಲಾ ಮುಖ್ಯಶಿಕ್ಷಕಿ)

ಎರಡು ದಿನ ಶಾಲೆಯಲ್ಲಿ ಮಾದರಿ ಕಾರ್ಯ
ಶನಿವಾರ ಹಾಗೂ ಭಾನುವಾರ ಮಾರ್ಡಿ ಶಾಲೆಯಲ್ಲಿ ಸೌಂದರ್ಯೀಕರಣ ನಡೆದಿದ್ದು ರವಿವಾರ ಸಂಜೆ ಸಮಾರೋಪ ನಡೆಯಿತು. ಸ್ಥಳೀಯರಾದ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ರತ್ನಾಕರ ನಾಯ್ಕ, ಪ್ರವೀಣ್ ಕುಮಾರ್ ಶೆಟ್ಟಿ, ಯೋಗೇಂದ್ರ ನಾಯ್ಕ ಕೊಡ್ಲಾಡಿ, ವಿದ್ಯಾಧರ ಶೆಟ್ಟಿ, ನಿವೃತ್ತ ಯೋಧ ಶಿವರಾಮ ನಾಯ್ಕ, ಉದಯಕುಮಾರ್ ಇದ್ದರು. ಶಾಲೆ ಹಳೆಯ ವಿದ್ಯಾರ್ಥಿ ಸಂದೀಪ್ ಕೊಡ್ಲಾಡಿ ಅವರನ್ನಾ ಸನ್ಮಾನಿಸಲಾಯಿತು. ಇದೇ ಸಂದರ್ಭ ಬೆಳಕು ತಂಡದ ಮಾದರಿ ಕಾರ್ಯವನ್ನು ಸ್ಮರಿಸಲಾಯಿತು.

ಮುಖ್ಯೋಪಾಧ್ಯಾಯಿನಿ ಗೌರಿಬಾಯಿ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಂಕರ್ ಬಿ.ಕೆ ಪ್ರಾಸ್ತಾವಿಸಿದರು. ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರ ಗಜೇಂದ್ರ ನಾಯ್ಕ ವಂದಿಸಿದರು. ಶಿಕ್ಷಕ ಗಣೇಶ್ ಸಿ.ಎನ್ ನಿರೂಪಿಸಿದರು.

Comments are closed.