ಕರಾವಳಿ

ಪಂಚಗಂಗಾವಳಿಗೆ ನದಿಗೆ ಕೊಳಚೆ ನೀರು ಬಿಟ್ಟಲ್ಲಿ ಪ್ರತಿಭಟನೆ ಜೊತೆಗೆ ಕಾನೂನು ಹೋರಾಟ: ಪುರಸಭೆ ಸದಸ್ಯ ಚಂದ್ರಶೇಖರ ಖಾರ್ವಿ

Pinterest LinkedIn Tumblr

ಕುಂದಾಪುರ: ಹಲವು ವರ್ಷಗಳಿಂದ ನಗರದ ಕೊಳಚೆ ನೀರನ್ನು ಜನವಸತಿ ಪ್ರದೇಶದ ಸನಿಹದ ಪಂಚಗಂಗಾವಳಿ ನದಿಗೆ ಬಿಡುವುದನ್ನು ಮುಂದುವರೆಸಿದರೆ, ಸ್ಥಳೀಯ ಜನರನ್ನು ಒಟ್ಟುಗೂಡಿಸಿ ಪುರಸಭೆಯ ವಿರುದ್ಧ ಹೋರಾಟ ಮಾಡುವುದಲ್ಲದೆ, ಕಾನೂನು ಪ್ರಕ್ರಿಯೆ ನಡೆಸುತ್ತೇವೆ ಎಂದು ಪುರಸಭೆಯ ವಿಪಕ್ಷ ನಾಯಕ ಚಂದ್ರಶೇಖರ ಖಾರ್ವಿ ಎಚ್ಚರಿಕೆ ನೀಡಿದ್ದಾರೆ.

ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ಮಂಗಳವಾರ ಸಂಜೆ ನಡೆದ ಪುರಸಭೆ ಸದಸ್ಯರ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ನಗರದಲ್ಲಿ ನೆನಗುದಿಗೆ ಬಿದ್ದ ಒಳಚರಂಡಿ ಯೋಜನೆಯ (ಯುಜಿಡಿ) ಕಾಮಗಾರಿ ಕುರಿತಂತೆ ಮಾತನಾಡಿದ ಅವರು ಕಳೆದ 10 ವರ್ಷಗಳಿಂದ ಯೋಜನೆ ಕುಂಟುತ್ತಾ ಸಾಗುತ್ತಿದ್ದು ಜನರ ಸಹನೆಯ ಕಟ್ಟೆಯೊಡೆದಿದೆ. ಜನರನ್ನು ಸಮಾಧಾನ ಮಾಡಿ ಸಾಕಾಗಿದೆ. ಇಲ್ಲಿನ ಹೊಲಸು ಹಾಗೂ ಕೊಳಚೆ ನೀರು ಎಲ್ಲಿಗೆ ಹೋಗುತ್ತಿದೆ ಎಂಬ ಬಗ್ಗೆ ಪುರಸಭೆಗೆ ಕಾಳಜಿಯಿಲ್ಲ. ದೊಡ್ಡ ಮೊತ್ತವನ್ನು ವೆಚ್ಚ ಮಾಡಿರುವ ಯುಜಿಡಿ ಯೋಜನೆಯ ವೈಫಲ್ಯದ ಬಗ್ಗೆ ಜನರಿಗೆ ನಿಜ ತಿಳಿಯಬೇಕು. ಪುರಸಭೆಯಿಂದ ಸಂಗ್ರಹವಾಗುವ ಒಂದೇ ಒಂದು ಟ್ಯಾಂಕ್ ಕೊಳಚೆ ನೀರನ್ನು ಇಲ್ಲಿನ ನದಿಗಳಿಗೆ ಬಿಟ್ಟು ಕಲುಷಿತಗೊಳಿಸಿದರೆ ನಾವು ಪ್ರತಿಭಟನೆಯ ಹಾದು ತುಳಿಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

2018 ರಲ್ಲಿ ಹುಂಚಾರಬೆಟ್ಟು ಎಂಬಲ್ಲಿ ನಿರ್ಮಿಸಲು ಉದ್ದೇಶಿಸಿರುವ ಎಸ್‌ಟಿಪಿ ಗೆ ಕೋಟ್ಯಾಂತರ ರೂ. ವೆಚ್ಚದಲ್ಲಿ 1.54 ಸೆಂಟ್ಸ್ ಜಾಗ ಖರೀದಿಸಲಾಗಿದ್ದು, ಇದೀಗ ಸ್ಥಳೀಯರ ಆಗ್ರಹಕ್ಕೆ ಮಣಿದು ಸ್ಥಳೀಯ ಸದಸ್ಯರು ಎಸ್‌ಟಿಪಿ ಯನ್ನು ಸ್ಥಳಾಂತರಿಸಲು ಒತ್ತಾಯಿಸುತ್ತಿರುವುದರಿಂದ ಒಳಚರಂಡಿ ಯೋಜನೆಯ ಕಾಮಗಾರಿಗಳಿಗೆ ತೊಡಕಾಗುತ್ತಿದೆ ಎಂದು ಪಕ್ಷಬೇಧ ಮರೆತು ಪ್ರಬಲವಾಗಿ ಆಕ್ಷೇಪಿಸಿದ ಸದಸ್ಯರು ಖಾರ್ವಿಕೇರಿಯನ್ನು ಕೊಳಚೆ ಮುಕ್ತವನ್ನಾಗಿಸಿ ಎಂದು ಆಗ್ರಹಿಸಿದರು.

ಸ್ಥಳೀಯ ಸಮಸ್ಯೆಗಳಿಗೆ ಆಡಳಿತ ಸ್ಪಂದಿಸುತ್ತಿಲ್ಲ ಎನ್ನುವ ಆರೋಪಕ್ಕೆ ಪ್ರತಿ ಸ್ಪಂದಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ ಅವರು ಸ್ಥಳೀಯ ಸಮಸ್ಯೆಗಳಿಗೆ ಕಿವಿಯಾಗುವ ಪ್ರಯತ್ನ ಪುರಸಭೆಯ ಆಡಳಿತದಿಂದ ಆಗಿದೆ ಎಂದರು. ಇದೇ ವಿಚಾರದ ಕುರಿತು ಮಾತನಾಡಿದ ಅಧ್ಯಕ್ಷೆ ವೀಣಾ ಭಾಸ್ಕರ್ ಅವರು ಶೀಘ್ರದಲ್ಲಿ ಶಾಸಕರೊಂದಿಗೆ ವಿಶೇಷ ಸಭೆ ನಡೆಸಿ, ಪ್ರಸ್ತುತ ಇರುವ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರು ಒಟ್ಟಾಗಿ ಪ್ರಯತ್ನಿಸೋಣ ಎಂದರು.

ನಗರದ ಜನರಿಗೆ ಕುಡಿಯುವ ನೀರಿಗಾಗಿ ಅನುಷ್ಠಾನಗೊಂಡಿರುವ ಜಲಸಿರಿ ನೀರಿನ ಯೋಜನೆಯ ನಿರ್ವಹಣೆಗಾಗಿ ನೀಡುತ್ತಿರುವ ವೆಚ್ಚ ಪುರಸಭೆಗೆ ಹೊರೆಯಾಗಿದ್ದು, ಇದನ್ನು ಕೂಡಲೇ ನಿಲ್ಲಿಸುವಂತೆ ಸದಸ್ಯರು ಆಗ್ರಹಿಸಿದರು.

ಪತ್ರಿಕೆಯಲ್ಲಿ ಬಂದಿರುವ ಹೇಳಿಕೆಯೊಂದರ ಅಡಿಯಲ್ಲಿ ಖಂಡನಾ ನಿರ್ಣಯ ಮಾಡುವಂತೆ ಆಗ್ರಹಿಸಿದ ಕಾಂಗ್ರೆಸ್ ಸದಸ್ಯರಿಗೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಪತ್ರಿಕಾ ಹೇಳಿಕೆಯನ್ನು ಆಧರಿಸಿ ಖಂಡನಾ ನಿರ್ಣಯ ಮಾಡದಂತೆ ಆಕ್ಷೇಪಿಸಿದರು. ಕುಂದಾಪ್ರ ಕನ್ನಡ ಭಾಷಾ ಅಕಾಡೆಮಿ ಸ್ಥಾಪಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಪುರಸಭೆಯಿಂದ ನಿರ್ಣಯ ಮಂಡಿಸಲು ಚಂದ್ರಶೇಖರ ಖಾರ್ವಿ ಒತ್ತಾಯಿಸಿದರು.

ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಜಿ.ಕೆ ಹಾಗೂ ಮುಖ್ಯಾಧಿಕಾರಿ ಮಂಜುನಾಥ ಇದ್ದರು.

Comments are closed.