(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ, ಕುಂದಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಮಡಾಮಕ್ಕಿ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಚುನಾವಣಾ ಬಹಿಷ್ಕಾರದ ಕೂಗು ಕೇಳಿಬಂದಿದೆ.
ನಕ್ಸಲ್ ಪೀಡಿತ ಪ್ರದೇಶವೆಂಬ ಹಣೆಪಟ್ಟಿಹೊತ್ತಿರುವ ಅರಣ್ಯ ತಪ್ಪಲು ಭಾಗದ ಮಡಾಮಕ್ಕಿ ಪಂಚಾಯತ್ ವ್ಯಾಪ್ತಿಯ ಕುಂಟಾಮಕ್ಕಿ, ಹಂಜ, ಕಾರಿಮನೆ, ಹಾಗೂ ಎಡಮಲೆ ಜನರು ಕಳೆದ ಐದಾರು ದಶಕಗಳಿಂದ ಮೂಲಸೌಕರ್ಯ ವಂಚಿತರಾಗಿದ್ದಾರೆ. ಸುಮಾರು 8 ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆಯೇ ಇಲ್ಲ. ಮೊಬೈಲ್ ನೆಟ್ವರ್ಕ್ ಸಿಗೋದು ಇಲ್ಲ. ಬಸ್ ಸಂಪರ್ಕ ಇನ್ನೂ ಈ ಭಾಗಕ್ಕೆ ಸಿಕ್ಕಿಲ್ಲ.
ಪರಿಶಿಷ್ಟ ಜಾತಿ-ಪಂಗಡದ 8 ಮನೆಗಳು ಸಹಿತ 60 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು ಕೃಷಿ-ಕೂಲಿ ನೆಚ್ಚಿಕೊಂಡ ಬಹುತೇಕ ಹಿಂದುಳಿದ ವರ್ಗದವರು. ಐವತ್ತ ಅಧಿಕ ವಿದ್ಯಾರ್ಥಿಗಳು, ಬಹಳಷ್ಟು ಹಿರಿಯ ನಾಗರಿಕರು, ಅನಾರೋಗ್ಯ ಬಾಧಿತರು ಈ ಭಾಗದಲ್ಲಿದ್ದು ಹಲವು ದಶಕಗಳಿಂದ ರಸ್ತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಬೇಡಿಕೆ ನೀಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯ ಪೇಟೆಗೆ ಹೆಬ್ರಿಗೆ 25ಕಿ.ಮೀ ಸಾಗಬೇಕು. ಶಿಕ್ಷಣಕ್ಕಾಗಿ ದೂರದ ಕಾರ್ಕಳ, ಹೆಬ್ರಿ, ಹಾಲಾಡಿಗೆ ಸಾಗಬೇಕು. ಕೊರೋನಾ ಸಂದರ್ಭ ನೆಟ್ವರ್ಕ್ ಸಮಸ್ಯೆಯಿಂದ ಇಲ್ಲಿನ ವಿದ್ಯಾರ್ಥಿಗಳು ಆನ್ಲೈನ್ ತರಗತಿಯಿಂದಲೂ ವಂಚಿತರಾಗಿದ್ದರು. ಇನ್ನು ಅನಾರೋಗ್ಯ ಪೀಡಿತರು ಬೆಳ್ವೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೇ ಹೋಗಬೇಕಾಗಿದ್ದು ಇಲ್ಲಿನ ರಸ್ತೆ ಅವ್ಯವಸ್ಥೆಯಿಂದಾಗಿ ಯಾವುದೇ ವಾಹನ, ರಿಕ್ಷಾ ಬರೊದಿಲ್ಲ. ಜೋಲಿ ಬಳಸಿ ಅಂತವರನ್ನು ಹೊತ್ತು ಒಯ್ಯಬೇಕಾದ ದುಸ್ಥಿತಿಯೂ ಇಲ್ಲಿ ನಡೆದಿತ್ತು. ಉಳಿದಂತೆ ಹಕ್ಕು ಪತ್ರ ಸಮಸ್ಯೆ ಬಗೆಹರಿದಿಲ್ಲ. ಕಾಡುಪ್ರಾಣಿ ಉಪಟಳಕ್ಕೆ ಜನರು ಹೈರಾಣಾಗಿದ್ದಾರೆ. ತನ್ನ ಮಗು ಅನಾರೋಗ್ಯದ ವೇಳೆ ಸಂಕಷ್ಟ ಪಟ್ಟಿದ್ದು ಬಡವರ ಸಮಸ್ಯೆಗೆ ಸ್ಪಂದನೆ ಸಿಗುತ್ತಿಲ್ಲ ಎಂದು ರೇಷ್ಮಾ ಕಾರಿಮನೆ ತಿಳಿಸಿದ್ದಾರೆ. ತಮ್ಮೂರಿನ ಸಮಸ್ಯೆ ಬಗ್ಗೆ ಹಿರಿಯ ಮಹಿಳೆಯರು, ನಾಗರಿಕರು, ವಿದ್ಯಾರ್ಥಿಗಳು ಅವಲತ್ತುಕೊಂಡರು. ಮೂಲಸೌಕರ್ಯ ವೃದ್ಧಿಗೆ ಮಾಡಿದ ಮನವಿ ನೀರಿನಲ್ಲಿ ಮಾಡಿದ ಹೋಮದಂತಾಗಿದ್ದು ಇದೀಗಾ ಚುನಾವಣೆ ಬಹಿಷ್ಕಾರ ಮಾಡುವ ಒಮ್ಮತದ ನಿರ್ಧಾರ ಮಾಡಿದ್ದೇವೆ ಎಂದು ಯುವಕರಾದ ನವೀನ್ ಯಡಮಲೆ, ಸುಮಂತ್ ಶೆಟ್ಟಿ ತಿಳಿಸಿದರು. ಸ್ಥಳೀಯ ಆಟೋ ಚಾಲಕರಾದ ಪ್ರಸಾದ್ ಹಾಗೂ ಲೋಕೇಶ್ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡರು.
*ಚುನಾವಣೆ ಬಹಿಷ್ಕಾರ ಎಚ್ಚರಿಕೆ*
ಪ್ರತಿ ಬಾರೀ ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳು ಬಂದು ಮೂಲಸೌಕರ್ಯ ಒದಗಿಸುವ ಭರವಸೆ ಈವರೆಗೆ ಈಡೇರಿಲ್ಲ. ನಮ್ಮದು ಯಾವುದೇ ಪಕ್ಷ,ಯಾವುದೇ ವ್ಯಕ್ತಿ ವಿರುದ್ಧದ ಹೋರಾಟವಲ್ಲ. ನಮ್ಮ ಬೇಡಿಕೆ ಪೂರೈಸಿ. ಆಶ್ವಾಸನೆ ಬೇಡ. ಬದಲಾಗಿಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಂಡು ಚುನಾವಣೆ ಪ್ರಚಾರಕ್ಕೆ ಬನ್ನಿ. ‘ಜನಪ್ರತಿನಿಧಿಗಳೇ, ಅಧಿಕಾರಿಗಳೇ..ನಿಮ್ಮ ಗಮನ ನಮ್ಮ ಹಳ್ಳಿಯತ್ತ ಇರಲಿ’, ‘ನಮ್ಮ ರಸ್ತೆ ನಮ್ಮ ಹಕ್ಕು, ನಮ್ಮ ಮತ ನಮ್ಮ ಹಕ್ಕು’, ‘ರಸ್ತೆಯಾಗದ ಹೊರತು ಮತ ಕೇಳಲು ಬರಬೇಡಿ’, ಎಂಬ ವಾಕ್ಯದೊಂದಿಗೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ.
ನಕ್ಸಲ್ ಪೀಡಿತ ಪ್ರದೇಶ ಹಣೆಪಟ್ಟಿ ಹೊತ್ತ ಗ್ರಾಮದಲ್ಲಿ ಅಭಿವೃದ್ಧಿ ಹಿನ್ನೆಡೆಯಾಗಿದೆ. 60 ಕುಟುಂಬ ವಾಸವಿರುವ ಈ ಪ್ರದೇಶದಲ್ಲಿ ರಸ್ತೆಯಿಲ್ಲ. ನೆಟ್ವರ್ಕ್ ಸಿಗೋದಿಲ್ಲ. ಅನಾರೋಗ್ಯಕ್ಕೊಳಗಾದವರನ್ನು ಆಸ್ಪತ್ರೆಗೆ ಸಾಗಿಸಲು, ಮೃತಪಟ್ಟವರ ಶವ ಹೊತ್ತೊಯ್ಯಲು ಜೋಲಿ ಗತಿ. ನಮ್ಮ ಸಮಸ್ಯೆಗೆ ಸ್ಪಂದನೆ ನೀಡುತ್ತಿಲ್ಲ. ಹೀಗಾಗಿ ವಿಧಾನಸಭೆ ಸಹಿತ ಮುಂಬರುವ ಎಲ್ಲಾ ಚುನಾವಣೆಯಲ್ಲಿ ಮತದಾನ ಮಾಡದಿರುವ ತೀರ್ಮಾನಕ್ಕೆ ಬಂದಿದ್ದೇವೆ.
– ಅಮ್ಮಣಿ ಕಾರಿಮನೆ, ಸ್ಥಳೀಯ ಹಿರಿಯ ಮಹಿಳೆಮಡಾಮಕ್ಕಿಯ ಕುಂಟಾಮಕ್ಕಿ, ಹಂಜ, ಕಾರಿಮನೆ, ಹಾಗೂ ಎಡಮಲೆ ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕುಂದಾಪುರ ಶಾಸಕರು ಹಾಗೂ ಜನಪ್ರತಿನಿಧಿಗಳು ಮುತುವರ್ಜಿ ವಹಿಸಿದ್ದೇವೆ. ಆದರೆ ವೈಲ್ಡ್ ಲೈಫ್ ಎಂದು ರಸ್ತೆ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಎರಡು ಬಾರಿ ರಸ್ತೆ ನಿರ್ಮಾಣಕ್ಕೆ ಬಂದ ಕೋಟ್ಯಾಂತರ ರೂ. ಅನುದಾನ ವನ್ಯಜೀವಿ ಅರಣ್ಯ ವಲಯ ಎಂಬ ಕಾರಣಕ್ಕಾಗಿ ತಾಂತ್ರಿಕ ಅಡಚಣೆಯಿಂದ ವಾಪಾಸ್ಸಾಗಿದೆ. ಸರಕಾರ ಮಟ್ಟದಲ್ಲಿ ಮೂಲ ಸೌಕರ್ಯ ವಂಚಿತ ಭಾಗಕ್ಕೆ ರಸ್ತೆ, ಅಗತ್ಯ ಸೌಕರ್ಯವಾಗಬೇಕಿದೆ.
– ಚಂದ್ರಶೇಖರ ಶೆಟ್ಟಿ ಸೂರ್ಗೋಳಿ, ತಾ.ಪಂ ಮಾಜಿ ಸದಸ್ಯ
Comments are closed.