ಕರಾವಳಿ

ಉಡುಪಿಯ ಕೇಂದ್ರೀಯ ವಿದ್ಯಾಲಯದ ಸ್ವಂತ ಕಟ್ಟಡ 26 ಕೋಟಿ ರೂ. ಅನುದಾನದಲ್ಲಿ ನಿರ್ಮಾಣ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಉಡುಪಿ: ಉಡುಪಿಯಲ್ಲಿನ ಕೇಂದ್ರೀಯ ವಿದ್ಯಾಲಯ ಮತ್ತು ಒಂಭತ್ತು ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣಕ್ಕೆ ಕೇಂದ್ರ ಸರಕಾರದ ಶಿಕ್ಷಣ ಮತ್ತು ಕೌಶಲ್ಯ ಇಲಾಖೆ ಸುಮಾರು 26 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ತಿಳಿಸಿದ್ದಾರೆ.

ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯ ಚಾಲನೆಯಲ್ಲಿತ್ತು. ಉಡುಪಿ ಜಿಲ್ಲೆಯಲ್ಲಿನ ಕೇಂದ್ರೀಯ ವಿದ್ಯಾಲಯ ಮತ್ತು ಸಿಬ್ಬಂದಿ ವಸತಿ ಕಟ್ಟಡಗಳ ಅವಶ್ಯಕತೆ ಬಗ್ಗೆ ಕೇಂದ್ರದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಧರ್ಮೇಂದ್ರ ಪ್ರಧಾನ್‌ ಅವರಲ್ಲಿ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಕೇಂದ್ರದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆ ಸುಮಾರು 26 ಕೋಟಿ ಅನುದಾನವನ್ನು ಮಂಜೂರು ಮಾಡಿದೆ.
ಒಂದರಿಂದ ಹತ್ತನೆಯ ತರಗತಿಗಳಿಗೆ ತಲಾ ಎರಡು ವಿಭಾಗಗಳುಳ್ಳ ತರಗತಿ ಕೊಠಡಿಗಳು ಮತ್ತು ಒಂಬತ್ತು ಸಿಬ್ಬಂದಿ ವಸತಿಗಳ ಕಟ್ಟಡದ ನಿರ್ಮಾಣಕ್ಕೆ ಈಗಾಗಲೇ ಟೆಂಡರ ಅನುಮೋದನೆಯಾಗಿದ್ದು, ಅತೀ ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆಯೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕೇಂದ್ರೀಯ ವಿದ್ಯಾಲಯದ ಹೊಸ ಕಟ್ಟಡ ಈ ಭಾಗದ ವಿದ್ಯಾರ್ಥಿಗಳಿಗೆ ಸದುಪಯೋಗವಾಗಲಿದೆ. ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಈ ಸೌಲಭ್ಯ ನೀಡಿದ ನೆಚ್ಚಿನ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರದ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಧರ್ಮೇಂದ್ರ ಪ್ರಧಾನ್‌ ರವರಿಗೆ ಉಡುಪಿ-ಚಿಕ್ಕಮಗಳೂರು ಜಿಲ್ಲೆಯ ಸಂಸದೆ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅಭಿನಂದನೆ ತಿಳಿಸಿದ್ದಾರೆ.

Comments are closed.