ದುಬೈ: ಕರಾವಳಿಯ ರಂಗಭೂಮಿಯಲ್ಲಿ ದಾಖಲೆ ಬರೆದಿರುವ ವಿಜಯಕುಮಾರ್ ಕೊಡಿಯಾಲಬೈಲ್ ಇವರ ನಿರ್ದೇಶನದ ‘ಶಿವದೂತೆ ಗುಳಿಗೆ’ ನಾಟಕವು ಮೊದಲ ಬಾರಿ ವಿದೇಶದ ನೆಲದಲ್ಲೂ ಅಬ್ಬರಿಸಿದೆ.
423 ಮತ್ತು 424ನೇ ಪ್ರದರ್ಶನ ರವಿವಾರ ದುಬೈನ ಅಲ್ ನಸರ್ ಲಿಸರೆ ಲ್ಯಾಂಡ್ನಲ್ಲಿ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖದಲ್ಲಿ ಪ್ರದರ್ಶನಗೊಂಡಿತು. ಒಂದೇ ದಿನ ನಡೆದ ಎರಡು ಪ್ರದರ್ಶನವನ್ನು 5 ಸಾವಿರಕ್ಕೂ ಅಧಿಕ ಪ್ರೇಕ್ಷಕರು ವೀಕ್ಷಿಸಿದರು.
ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವುದರೊಂದಿಗೆ ಅಭೂತಪೂರ್ವ ನಾಟಕ ಪ್ರದರ್ಶನಕ್ಕೆ ಚಾಲನೆ ಸಿಕ್ಕಿತು. ನಾಟಕ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರನ್ನು ತೌಳವ ರಂಗ ಚಾಣಕ್ಯೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರಾವಳಿಯ ದೈವಾರಾಧನೆಯ ಕಥಾ ಹಂದರವನ್ನು ಹೊಂದಿರುವ ಈ ನಾಟಕವು ಅತ್ಯದ್ಭುತ ನಟನೆ, ರೋಮಾಂಚಕ ಸನ್ನಿವೇಶಗಳು, ವಿಭಿನ್ನ ಸೆಟ್ ಮತ್ತು ಧ್ವನಿ ಹಾಗೂ ಬೆಳಕಿನ ತಾಂತ್ರಿಕತೆಯೊಂದಿಗೆ ನಾಟಕ ಅದ್ಭುತವಾಗಿ ಮೂಡಿ ಬಂದಿದೆ.
ಪರ್ದಾನದ ಸೊಗಸು, ಗಗ್ಗರ ಧ್ವನಿ, ದೈವದ ಮಹತ್ವವನ್ನು ಜಗತ್ತಿಗೆ ಸಾರಿ ಹೇಳುವ, ಶಿವನ ಅಂಶಾವತಾರವಾಗಿರುವ ಗುಳಿಗನ ಮಹಿಮೆಯನ್ನು ಲೋಕಕ್ಕೆ ಸಾರುವ ಅತ್ಯದ್ಭುತ ನಾಟಕ ಇದಾಗಿದೆ ಎಂದು ನಾಟಕ ವೀಕ್ಷಿಸಿದ ಪ್ರೇಕ್ಷಕರು ಶ್ಲಾಘಿಸಿದರು.
ನಾಟಕ ಕಲಾವಿದರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಇದೇ ವೇಳೆ ನಾಟಕ ತಂಡವು ವಿದೇಶದಲ್ಲಿ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿರುವುದಕ್ಕೆ ಆಯೋಜಕರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ನಮ್ಮ ಕುಡ್ಲದ ನಿರೂಪಕಿ ಡಾ.ಪ್ರಿಯಾ ಹರೀಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ, ರಾಜೇಶ್ ಕುತ್ತಾರ್ ಸ್ವಾಗತಿಸಿದರು.
Comments are closed.