ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅತ್ಯಾಚಾರ ಎಸಗಿದ ಆರೋಪಿಗೆ ಮಂಗಳೂರಿನ ನ್ಯಾಯಾಲಯವು 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಕಾವೂರು ಸಮೀಪದ ಮರಕಡ ನಿವಾಸಿ, ಬಸ್ ಚಾಲಕ ದಯಾನಂದ ದಾನಣ್ಣನವರ್ (30) ಶಿಕ್ಷೆಗೊಳಗಾದ ಅಪರಾಧಿ.
ಆರೋಪಿಯು 13 ವರ್ಷದ ವಿದ್ಯಾರ್ಥಿನಿಯೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡಿದ್ದ ಎನ್ನಲಾಗಿದೆ. 2022ರ ಜ. 27ರಂದು ಹೊರಗಡೆ ತಿರುಗಾಡುವುದಕ್ಕೆ ಬರುವಂತೆ ಸಂದೇಶ ಕಳುಹಿಸಿದ್ದ. ಇದಕ್ಕೆ ಬಾಲಕಿಯು ನಿರಾಕರಿಸಿದ್ದಳು. ಆದರೂ ಆಕೆಯನ್ನು ಒತ್ತಾಯ ಮಾಡಿ ಪುಸಲಾಯಿಸಿ ಜ.28ರಂದು ಆಟೋರಿಕ್ಷಾದರಲ್ಲಿ ನಗರದ ಹಂಪನಕಟ್ಟೆಗೆ ಕರೆದೊಯ್ದು ಲಾಡ್ಜ್‌ನಲ್ಲಿ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಲಾಗಿತ್ತು.
ಕೃತ್ಯದ ಬಳಿಕ ಆರೋಪಿಯು ಬಾಲಕಿಯನ್ನು ಮನೆಯ ಬಳಿ ಕರೆತಂದು ಬಿಟ್ಟು ಹೋಗಿದ್ದ. ಅಲ್ಲದೆ ಮನೆಯಲ್ಲಿ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಅದಾಗ್ಯೂ ಬಾಲಕಿಯು ಕೃತ್ಯದ ಬಗ್ಗೆ ಮನೆಯವರಿಗೆ ತಿಳಿಸಿದ್ದಳು. ಅದರಂತೆ ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಲಾಗಿತ್ತು.
ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-2 ನ್ಯಾಯಾಲಯದ ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಆರೋಪಿಯು ತಪ್ಪಿತಸ್ಥನೆಂದು ತೀರ್ಮಾನಿಸಿ ಪೊಕ್ಸೋ ಕಲಂ 4ರಡಿ 20 ವರ್ಷ ಕಠಿನ ಸಜೆ, 50 ಸಾವಿರ ರೂ. ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದರೆ ಮತ್ತೆ 4 ತಿಂಗಳು ಕಠಿನ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಅಲ್ಲದೆ ನೊಂದ ಬಾಲಕಿಗೆ 3 ಲಕ್ಷ ಪರಿಹಾರ ನೀಡಬೇಕು. ಅದರಲ್ಲಿ 1 ಲಕ್ಷ ಹಣ ಕೂಡಲೇ ಬಿಡುಗಡೆ ಮಾಡಿ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಉಳಿದ 2 ಲಕ್ಷವನ್ನು ಆಕೆಯ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್‌ಗಳಾಗಿದ್ದ ಎಸ್.ಎಚ್.ಭಜಂತ್ರಿ ಮತ್ತು ರೇವತಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ವಾದಿಸಿದ್ದರು.
Comments are closed.