(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ರಾಜ್ಯದ ಪದವಿ ಪೂರ್ವ ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು ಕುಂದಾಪುರದ ವೆಂಕಟರಮಣ ಆಂಗ್ಲ ಮಾಧ್ಯಮ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನೇಹಾ ಜೆ. ರಾವ್ 594 ಅಂಕಗಳನ್ನು ಪಡೆದಕೊಳ್ಳುವ ಮೂಲಕ ರಾಜ್ಯಕ್ಕೆ 3ನೇ ಸ್ಥಾನ ಪಡೆದುಕೊಂಡಿದ್ದಾರೆ.
ಒಟ್ಟು 600 ಅಂಕಗಳಲ್ಲಿ 594 ಅಂಕಗಳನ್ನು ಪಡೆದುಕೊಂಡಿರುವ ಅವರು ಸಂಸ್ಕೃತದಲ್ಲಿ ಹಾಗೂ ಕಂಪ್ಯೂಟರ್ನಲ್ಲಿ ಶೇ.100, ರಸಾಯನ ಶಾಸ್ತ್ರದಲ್ಲಿ ಹಾಗೂ ಗಣಿತದಲ್ಲಿ 99, ಇಂಗ್ಲೀಷ್ ಹಾಗೂ ಭೌತಶಾಸ್ತ್ರದಲ್ಲಿ 98 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಕುಂದಾಪುರ ನಗರದ ಮುಖ್ಯ ರಸ್ತೆಯಲ್ಲಿ ಆಶೀರ್ವಾದ ಚಿನ್ನದ ಆಭರಣ ತಯಾರಿಕಾ ಮಳಿಗೆ ಹೊಂದಿರುವ ಕುಂದಾಪುರ ಬಸ್ರೂರು ಮೂರುಕೈ ಸಮೀಪದ ನಿವಾಸಿ ಜಗದೀಶ್ ರಾವ್ ಎಚ್ ಹಾಗೂ ಸ್ಮೀತಾ ದಂಪತಿಗಳ ಇಬ್ಬರು ಮಕ್ಕಳಲ್ಲಿ ನೇಹಾ ಮೊದಲನೇಯವರು. ಅವರಿಗೆ ಒಬ್ಬ ಕಿರಿಯ ಸಹೋದರ ಇದ್ದಾರೆ. ಎಲ್.ಕೆ.ಜಿ ಯಿಂದ ಪದವಿ ಪೂರ್ವದವರೆಗಿನ ಶಿಕ್ಷಣವನ್ನು ಅವರು ನಗರದ ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಗಳಲ್ಲಿಯೇ ಪಡೆದುಕೊಂಡಿದ್ದಾರೆ.
ದಿನನಿತ್ಯ ಬೆಳಿಗ್ಗೆ ಐದು ಗಂಟೆಗೆ ಎದ್ದು ಓದುವ ಪರಿಪಾಠ ಬೆಳೆಸಿಕೊಂಡಿರುವ ನೇಹಾ ಬಳಿಕ ಕಾಲೇಜಿಗೆ ತೆರಳುತ್ತಾರೆ. ಮತ್ತೆ ಸಂಜೆ ಮನೆಗೆ ವಾಪಾಸಾಗಿ ದಿನನಿತ್ಯದ ಪಾಠಗಳನ್ನು ಆಯಾಯ ದಿನಗಳಲ್ಲಿ ಓದಿ ಮುಗಿಸುತ್ತಾರೆ. ಪರೀಕ್ಷಾ ಅವಧಿಯಲ್ಲಿ ವೇಳಾಪಟ್ಟಿ ತಯಾರಿಸಿ ಅದರಂತೆಯೇ ಓದುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಕಲಿಯುವಿಕೆಯ ಜೊತೆಯಲ್ಲಿ ಸಾಂಸ್ಕೃತಿಕ ಕ್ಷೇತ್ರದಲ್ಲಿಯೂ ಆಸಕ್ತಿ ಬೆಳೆಸಿಕೊಂಡಿರುವ ಅವರು ಉತ್ತಮ ಭಾಷಣಗಾರ್ತಿ ಹಾಗೂ ಕಾರ್ಯಕ್ರಮ ನಿರೂಪಕಿಯಾಗಿಯೂ ಗಮನ ಸೆಳೆದಿದ್ದಾರೆ. ಕಾಲೇಜಿನ ಬಿಡುವಿನ ವೇಳೆಯಲ್ಲಿ ಪೇಟಿಂಗ್ ಮಾಡುವ ಆಕೆ, ಕುಂಚದಿಂದ ಬಣ್ಣವನ್ನು ಅರಳಿಸುವ ಬಗ್ಗೆಯೂ ಹವ್ಯಾಸವನ್ನು ಇಟ್ಟುಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ನೇಹಾ ಅವರು, ಪರೀಕ್ಷೆ ತುಂಬಾ ಸುಲಭವಾಗಿದ್ದರಿಂದ ಒಳ್ಳೆಯ ಅಂಕಗಳು ಬರುವ ನಿರೀಕ್ಷೆ ಇತ್ತು. ಆದರೆ ರಾಜ್ಯಕ್ಕೆ ರಾ್ಯಂಕ್ ಬರುತ್ತೆ ಎಂದುಕೊಂಡಿರಲಿಲ್ಲ. ಮೂರನೇಯ ರಾ್ಯಂಕ್ ಬಂದಿರುವುದು ತುಂಬಾ ಖುಷಿಯಾಗಿದೆ. ಇದಕ್ಕೆಲ್ಲ ಕಾರಣ ನಮ್ಮ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು. ಯಾವುದೇ ಟ್ಯೂಷನ್ಗೂ ಹೋಗಿರಲಿಲ್ಲ. ಕಾಲೇಜಿನ ಪಾಠ, ಪ್ರವಚನ ಹಾಗೂ ಕೋಚಿಂಗ್ ತರಗತಿಯ ತರಬೇತಿ ನನಗೆ ಅಂಕವನ್ನು ಪಡೆದುಕೊಳ್ಳಲು ಸ್ಪೂರ್ತಿಯಾಗಿದೆ. ಪಿ.ಯು ತರಗತಿಯಲ್ಲಿ ವಿಜ್ಞಾನ ವಿಭಾಗದ ಪಿಸಿಎಂಸಿ ವಿಷಯದ ಆಯ್ಕೆ ಮಾಡಿಕೊಂಡಿರುವ ನನಗೆ ಮುಂದೆ ಸಾಫ್ಟ್ವೇರ್ ಇಂಜಿನಿಯರ್ ಆಗಬೇಕು ಎನ್ನುವ ಆಸೆ ಇರುವುದಾಗಿ ತಿಳಿಸಿದ್ದಾರೆ.
ನೇಹಾ ಸಾಧನೆ ಖುಷಿಯ ವಿಚಾರ. ನೇಹಾ ಸಾಧನೆಯ ಬಗ್ಗೆ ಭರವಸೆ ಇಟ್ಟುಕೊಂಡಿದ್ದೇವೆ. ಅದನ್ನು ಅವಳು ಸಾಕಾರಗೊಳಿಸಿದ್ದಾಳೆ. ತರಗತಿಯಲ್ಲೂ ತುಂಬಾ ಶ್ರಮ ಹಾಕುತ್ತಿದ್ದಳು. ಅವಳ ಶಮ್ರಕ್ಕೆ ಈ ರ್ಯಾಂಕ್ ಬಂದಿದೆ. ಮುಂದಿನ ಅವಳ ಭವಿಷ್ಯ ಉಜ್ವಲವಾಗಿರಲಿ.
– ಸಂದೀಪ್ ಗಾಣಿಗ, ಉಪನ್ಯಾಸಕ ವೆಂಕಟರಮಣ ಪಿಯು ಕಾಲೇಜು
Comments are closed.