ಉಡುಪಿ: ನದಿಯಲ್ಲಿ ದೋಣಿ ಮಗುಚಿ ಬಿದ್ದು ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬ್ರಹ್ಮಾವರ ಠಾಣಾ ವ್ಯಾಪ್ತಿಯ ಕುಕ್ಕುಡೆ ಕುದ್ರು ಎಂಬಲ್ಲಿ ನಡೆದಿದೆ. ನೀರು ಪಾಲಾದವರನ್ನು ಹೂಡೆಯ ಫೈಝಾನ್ ಹಾಗೂ ಇಬಾದ್ ಮತ್ತು ಇವರ ಸಂಬಂಧಿ ತೀರ್ಥಹಳ್ಳಿಯ ಯುವಕರು ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ, ವಾಯು ವಿಹಾರಕ್ಕೆ ಹೋಗುತ್ತಿದ್ದ 7 ಮಂದಿ ಪೈಕಿ ಮೂವರು ಯುವಕರು ಮೃತಪಟ್ಟಿದ್ದು, ಓರ್ವ ನೀರು ಪಾಲಾಗಿ, ಮೂವರು ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ರಂಝಾನ್ ರಜೆಯ ಹಿನ್ನೆಲೆಯಲ್ಲಿ ಹೂಡೆಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೀರ್ಥಹಳ್ಳಿಯ ಯುವಕರು ಆಗಮಿಸಿದ್ದು ಒಟ್ಟು ಏಳು ಮಂದಿ ವಾಯು ವಿಹಾರಕ್ಕೆಂದು ಹೂಡೆಯ ಗುಡ್ಡೇರಿ ಕಂಬಳದಿಂದ ಕುಕ್ಕುಡೆ ಕುದ್ರುವಿಗೆ ದೋಣಿಯಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಈ ವೇಳೆ ದೋಣಿ ಮಗುಚಿ ಬಿದ್ದ ಪರಿಣಾಮ ಏಳು ಮಂದಿ ನೀರಿಗೆ ಬಿದ್ದರು. ಇದರಲ್ಲಿ ಮೂವರು ಈಜಿ ಕೊಂಡು ಕುದ್ರುವಿಗೆ ಸೇರಿಕೊಂಡಿದ್ದಾರೆನ್ನಲಾಗಿದೆ.
ಉಳಿದ ನಾಲ್ವರು ನೀರಿನಲ್ಲಿ ಮುಳುಗಿದ್ದು ಪತ್ತೆಗಾಗಿ ಹುಡುಕಾಟ ನಡೆಸಿದಾಗ ಮೂರು ಮಂದಿಯ ಮೃತ ದೇಹಗಳು ಪತ್ತೆಯಾಗಿದ್ದು, ಇನ್ನೋರ್ವನಿಗಾಗಿ ಹುಡುಕಾಟ ಮುಂದುವರೆದಿದೆ ಎನ್ನಲಾಗಿದೆ.
ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
Comments are closed.