ಬೆಂಗಳೂರು: ಪ್ರಮಾಣ ವಚನ ಸ್ವೀಕಾರದ ಬೆನ್ನಲ್ಲೇ ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾವು ನೀಡಿದ ಐದು ಗ್ಯಾರಂಟಿಗಳಿಗೆ ತಾತ್ವಿಕ ಅನುಮೋದನೆ ಪಡೆಯಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಪ್ರಥಮ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ಅವರು, ಐದು ಗ್ಯಾರಂಟಿ ಯೋಚನೆಗಳ ಅನುಷ್ಠಾನ ಕುರಿತಂತೆ ಹೆಚ್ಚಿನ ವಿವರಗಳು ಹಾಗೂ ಗ್ಯಾರಂಟಿಗಳಿಗೆ ಇರುವ ಷರತ್ತುಗಳು ಮತ್ತು ನಿಯಮಗಳನ್ನು ಮುಂದಿನ ಕ್ಯಾಬಿನೆಟ್ ಸಭೆಗಳಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯಡಿ ಗೃಹಿಣಿಯರಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲಾಗುವುದು. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳಿಗೆ 3000 ರೂಪಾಯಿ, ನಿರುದ್ಯೋಗಿ ಡಿಪ್ಲೋಮಾ ಪದವೀಧರರಿಗೆ ತಿಂಗಳಿಗೆ 1500 ರೂ. ನೀಡಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದರು.
ಸುದ್ದಿಗೋಷ್ಠಿ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ನ ಗ್ಯಾರಂಟಿಗಳ ವಿರುದ್ಧ ಠೀಕಿಸಿದ್ದರು. ಈ ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇ ಆದರೆ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿಗರು ಆರೋಪಿಸಿದ್ದರು. ಆದರೆ ಯಾವುದೇ ಆರ್ಥಿಕ ದಿವಾಳಿ ಆಗದಂತೆ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದರು.
ಐದು ಗ್ಯಾರಂಟಿಗಳಿಗೆ ಸುಮಾರು 50 ಸಾವಿರ ಕೋಟಿ ಆಗಬಹುದು. ಕಟ್ಟುನಿಟ್ಟಾದ ತೆರಿಗೆ ಸಂಗ್ರಹ ಮೂಲಕ ನಾವು ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳುತ್ತೇವೆ. ಕೇಂದ್ರದಿಂದ ಈ ವರ್ಷ 50 ಸಾವಿರ ಕೋಟಿ ರೂ. ಬರಬೇಕಿದೆ. ಕರ್ನಾಟಕದಿಂದ 4 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತೇವೆ. ನಮ್ಮ ರಾಜ್ಯದ ಬಜೆಟ್ ಗಾತ್ರ 3.10 ಲಕ್ಷ ಕೋಟಿ ರೂ. ಇದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ದೂರಿದರು.
Comments are closed.