ನವದೆಹಲಿ: ನೂತನ ಸಂಸತ್ ಭವನ ಕೇವಲ ಕಟ್ಟಡವಲ್ಲ, ಇದು ಭಾರತದ 140 ಕೋಟಿ ಜನರ ಆಕಾಂಕ್ಷೆಯ ಸಂಕೇತ. ಇದು ಇಡೀ ಜಗತ್ತಿಗೆ ಸಂದೇಶ ನೀಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿದ್ದಾರೆ.
ನೂತನ ಸಂಸತ್ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿಯವರು, ಪ್ರತಿಯೊಂದು ದೇಶದ ಅಭಿವೃದ್ಧಿ ಪಯಣದಲ್ಲಿ ಕೆಲವು ಕ್ಷಣಗಳು ಅಮರವಾಗುತ್ತವೆ. ಮೇ 28 ಕೂಡ ಭಾರತಕ್ಕೆ ಅಂತಹ ದಿನವಾಗಿದೆ. ಹೊಸ ಸಂಸತ್ ಭವನ ಕೇವಲ ಕಟ್ಟಡವಲ್ಲ, ಇದು ಭಾರತದ 140 ಕೋಟಿ ಜನರ ಆಕಾಂಕ್ಷೆಯ ಸಂಕೇತವಾಗಿದೆ. ಇದು ಭಾರತದ ಸಂಕಲ್ಪ ಕುರಿತು ಜಗತ್ತಿಗೆ ಸಂದೇಶ ನೀಡುತ್ತದೆ. ಈ ನೂತನ ಸಂಸತ್ತು ಸ್ವಾವಲಂಬಿ ಭಾರತದ ಉದಯಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.
ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನೂತನ ಸಂಸತ್ ಭವನ ಉದ್ಘಾಟನೆ ನೆರವೇರಿಸಿದರು. ಬೆಳಿಗ್ಗೆ 7.30ಕ್ಕೆ ಹೊಸ ಸಂಸತ್ ಕಟ್ಟಡಕ್ಕೆ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ಪೂಜೆಗೆ ಕುಳಿತರು. ಅದಕ್ಕೂ ಮುನ್ನ ಮಹಾತ್ಮ ಗಾಂಧಿ ಪ್ರತಿಮೆಗೆ ವಂದನೆ ಸಲ್ಲಿಸಿದರು. ಪೂಜೆ ಮುಗಿದ ಬಳಿಕ ಮೋದಿ ಅವರು ಐತಿಹಾಸಿಕ ರಾಜದಂಡಕ್ಕೆ ಸಾಷ್ಟಾಂಗ ನಮಸ್ಕಾರ ಮಾಡಿದರು.
ತಮಿಳುನಾಡಿನ ಅಧೀನಂ ಸ್ವಾಮೀಜಿಗಳು ‘ಸೆಂಗೋಲ್’ ಅನ್ನು ಪ್ರಧಾನಿಗೆ ಹಸ್ತಾಂತರ ಮಾಡಿದರು, ವಿಶೇಷ ಸಂದರ್ಭದಲ್ಲಿ ಅವರಿಗೆ ಆಶೀರ್ವಾದ ಮಾಡಿದರು. ಬಳಿಕ ಮೋದಿ ಅವರು ಐತಿಹಾಸಿಕ ರಾಜದಂಡವನ್ನು ಲೋಕಸಭೆ ಚೇಂಬರ್‌ಗೆ ಕರೆದೊಯ್ದು, ಸ್ಪೀಕರ್ ಆಸನದ ಪಕ್ಕದಲ್ಲಿ ಪ್ರತಿಷ್ಠಾಪಿಸಿದರು.
ಭವ್ಯ ನೂತನ ಸಂಸತ್ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಭಾಗಿಯಾದ ನಿರ್ಮಾಣ ಕಾರ್ಮಿಕರ ಗುಂಪನ್ನು ಪ್ರಧಾನಿ ಮೋದಿ ಸತ್ಕರಿಸಿದರು. ದೇಶದ ವಿವಿಧ ಭಾಗಗಳಿಂದ ಆಹ್ವಾನಿತರಾಗಿದ್ದ ಪುರೋಹಿತರು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಇದೇ ವೇಳೆ ಹಲವು ಧರ್ಮಗಳ ಪ್ರತಿನಿಧಿಗಳು ಬಹು- ಧಾರ್ಮಿಕ ಪ್ರಾರ್ಥನಾ ಗೀತೆಗಳನ್ನು ಹಾಡಿದರು.
Comments are closed.