ಕುಂದಾಪುರ: ಸರಕಾರಿ ಬಸ್ ಕೇಳುವುದು ನಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ನಾಡದಲ್ಲಿ ಇದು ಆರಂಭದ ಹೋರಾಟವಾಗಿದ್ದು ಮುಂದಿನ ದಿನಗಳಲ್ಲಿ ಡಿಸಿ ಕಚೇರಿ ಮುಂದೆ, ಆ ಬಳಿಕವೂ ಈಡೇರದಿದ್ದರೆ ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ಕಚೇರಿ ಎದುರು ಧರಣಿ ಕುಳಿತುಕೊಳ್ಳಲಾಗುವುದು. ನಾಡ-ಪಡುಕೋಣೆಯಲ್ಲಿ ಎದ್ದ ಸರಕಾರಿ ಬಸ್ ವಿಚಾರದ ಧ್ವನಿ ಇಡೀ ಕರಾವಳಿ ಹೆಣ್ಣುಮಕ್ಕಳ ಪರವಾದ ಧ್ವನಿಯಾಗಬೇಕು ಎಂದು ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕರೆ ನೀಡಿದರು.
ಬೈಂದೂರು ತಾಲೂಕಿನ ನಾಡ ಗ್ರಾಮದ ವಿವಿದೆಡೆಗೆ ಸರಕಾರಿ ಬಸ್ಸು ಓಡಿಸಲು ಹಾಗೂ ಮರವಂತೆ ಮಹಾರಾಜ ಸ್ವಾಮಿ ಬಳಿ ಬಸ್ ನಿಲುಗಡೆಗೆ ಆಹ್ರಹಿಸಿ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ಪಡುಕೋಣೆ ಘಟಕ ಹಾಗೂ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಬೈಂದೂರು ತಾಲೂಕು ವತಿಯಿಂದ ನಾಡ ಗ್ರಾ.ಪಂ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕರಾವಳಿ ಜಿಲ್ಲೆಗಳಲ್ಲಿಯೇ ಖಾಸಗಿ ಏಕಸ್ವಾಮ್ಯದಿಂದಾಗಿ ಸರಕಾರಿ ಬಸ್ಗಳ ಸಂಖ್ಯೆ ಕಡಿಮೆಯಿದೆ. ಅವಿಭಜಿತ ದ.ಕ ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುವವರು ಖಾಸಗಿ ಬಸ್ ಮಾಲಕರು. ಬಹಳ ಕಾಲದಿಂದ ಈ ಸಂಪ್ರದಾಯ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದೆ. ಸಾರಿಗೆ ಅವ್ಯವಸ್ಥೆಯ ವಿರುದ್ದ ಡಿವೈಎಫ್ಐ ಸಂಘಟನೆ ನಾಲ್ಕು ದಶಕಗಳಿಂದ ಹೋರಾಟಗಳನ್ನು ನಡೆಸುತ್ತಲೇ ಬಂದಿದೆ. ಖಾಸಗಿ ಬಸ್ಗಳಿಗೆ ನಮ್ಮ ವಿರೋಧವಿಲ್ಲ. ಆದರೆ ಅದು ಕೂಡ ಸೀಮಿತ ಸಂಖ್ಯೆಯಲ್ಲಿ ಇರುವುದರಿಂದ ಗ್ರಾಮೀಣ ಭಾಗದಿಂದ ನಗರ ಭಾಗಕ್ಕೆ ಸಂಚರಿಸುವ ಕೂಲಿ ಕಾರ್ಮಿಕರು, ಮಹಿಳೆಯರು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ಸಮಸ್ಯೆಯಾಗುತ್ತಿದೆ. ಟ್ರಿಪ್ ಕಟ್ ಮಾಡುವುದು ಅಪರಾಧ. ಪರ್ಮಿಟ್ ಇದ್ದು ಓಡಿಸದ ಇಂತಹ ಖಾಸಗಿ ಬಸ್ಸುಗಳ ವಿರುದ್ಧ ಸಂಬಂಧಿತ ಇಲಾಖೆ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಗ್ರಾಮಪಂಚಾಯತ್ ಕೂಡ ಮುತುವರ್ಜಿ ವಹಿಸಬೇಕು. ಇಂದಿನ ಸಮಾಜದಲ್ಲಿ ಅನುಕೂಲಸ್ಥರು ಹಾಗೂ ಬಡವರು ಎಂಬ ಧ್ರುವೀಕರಣ ಎದ್ದು ಕಾಣುತ್ತಿದೆ. ಗ್ರಾಮೀಣ ಭಾಗಗಳಿಗೆ ಭಾಗಶಃ ಸರಕಾರಿ ಬಸ್ಸು ಸೌಕರ್ಯ ನೀಡಿದಲ್ಲಿ ಜನರಿಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೈಂದೂರು ತಾಲೂಕಿನ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಊರುಗಳು ಬಸ್ ಸೌಲಭ್ಯದಿಂದ ವಂಚಿತವಾಗಿದೆ. ನಾಡ ಗ್ರಾಮದ ಕೋಣ್ಕಿ ಪ್ರದೇಶ, ಬಡಾಕೆರೆ ಗ್ರಾಮ ಮತ್ತು ಹಡವು ಗ್ರಾಮದ ಜನರು ಖಾಸಗಿ ಹಾಗೂ ಸರ್ಕಾರಿ ಬಸ್ಸಿನ ಸೌಕರ್ಯ ಇಲ್ಲದೇ ಪರದಾಡಬೇಕಾಗಿದೆ. ಈ ಭಾಗದಿಂದ ನೂರಾರು ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗುತ್ತಾರೆ. ದುಡಿಯುವ ವರ್ಗದ ಜನ, ಕೃಷಿಕರು ಎಲ್ಲರೂ ಬಸ್ಸಿನ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಭಾಗದ ಜನರು ಬಸ್ಸಿಗಾಗಿ 5-6 ಕಿಲೋ ಮೀಟರ್ ದೂರ ರಿಕ್ಷಾ ಅಥವಾ ಕಾಲ್ನಡಿಗೆಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ. ಈ ಪ್ರದೇಶಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳನ್ನು ಓಡಿಸಬೇಕೆಂದು ಕಳೆದ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಲಾಗಿದೆ. ಈ ಹಿಂದೆ ಈ ಭಾಗಕ್ಕೆ ಬರುತ್ತಿದ್ದ ಸರ್ಕಾರಿ ಬಸ್ಸಿನ ಸೇವೆಯು ನಿಂತಿದೆ ಎಂದು ಪ್ರತಿಭಟನಾಕಾರರು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನಾಡ ಗ್ರಾ.ಪಂ. ಪಿಡಿಒ ಮೂಲಕ ಮನವಿ ಸಲ್ಲಿಸಲಾಯಿತು. ಡಿವೈಎಫ್ಐ ಬೈಂದೂರು ತಾಲೂಕು ಅಧ್ಯಕ್ಷ ವಿಜಯ್ ಕೊಯನಗರ, ಪಡುಕೋಣೆ ಘಟಕದ ಉಪಾಧ್ಯಕ್ಷ ನಾಗರಾಜ ಕುರು, ಮುಖಂಡರಾದ ಸುರೇಶ್ ಕಲ್ಲಾಗರ, ರಾಜು ಪಡುಕೋಣೆ, ವೆಂಕಟೇಶ ಕೋಣಿ, ಎಚ್. ನರಸಿಂಹ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನಾ ನಾಡ, ಜಿಲ್ಲಾ ಕಾರ್ಯದರ್ಶಿ ಶೀಲಾವತಿ ಪಡುಕೋಣೆ, ಮುಖಂಡರಾದ ಸುಶೀಲಾ ನಾಡ, ನಾಗರತ್ನಾ ಪಡುವರಿ, ಗ್ರಾ.ಪಂ ಸದಸ್ಯೆ ಶೋಭಾ, ಸಿಐಟಿಯು ಮುಖಂಡ ರಾಜೇಶ್ ರೊನಾಲ್ಡ್, ಸ್ಥಳೀಯರಾದ ಪಿಲಿಫ್ ಡಿಸಿಲ್ವಾ ಇದ್ದರು.
ಪ್ರಮುಖ ಬೇಡಿಕೆಗಳು:
• ಕುಂದಾಪುರ, ಸೇನಾಪುರ, ನಾಡ, ಹಡವು, ಮಹಾರಾಜ ಸ್ವಾಮಿಯಿಂದ, ಬೈಂದೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಮಾರ್ಗಸೂಚಿಸಿ ಪರ್ಮೀಟ್ ನೀಡಿ ಬಸ್ಸನ್ನು ಓಡಿಸುವುದು.
• ಕುಂದಾಪುರ, ಸೇನಾಪುರ, ನಾಡಗುಡ್ಡೆಯಂಗಡಿ, ಕೋಣ್ಕಿ, ಬಡಾಕೆರೆ, ನಾವುಂದದಿಂದ ಬೈಂದೂರಿಗೆ ಕೆ.ಎಸ್.ಆರ್.ಟಿ.ಸಿ. ಬಸ್ಸಿಗೆ ಮಾರ್ಗಸೂಚಿಸಿ ಪರ್ಮೀಟ್ ನೀಡಿ ಬಸ್ಸನ್ನು ಓಡಿಸುವುದು.
• ಮರವಂತೆ ಗ್ರಾಮದ ಮಹಾರಾಜ ಸ್ವಾಮಿ ಎಂಬ ಪ್ರೇಕ್ಷಣೀಯ ಹಾಗೂ ಯಾತ್ರಾ ಸ್ಥಳದಲ್ಲಿ ಕೆ.ಎಸ್.ಆರ್.ಟಿ.ಸಿ.ಯ ಎಲ್ಲಾ ಬಸ್ಸುಗಳ ನಿಲುಗಡೆಗೆ ಕ್ರಮ ಕೈಗೊಳ್ಳುವುದು.
• ಸೌಪರ್ಣಿಕ ನದಿಯ ಮಹಾರಾಜ ಸ್ವಾಮಿ ಸೇತುವೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕೆಲಸ ಶೀಘ್ರ ಪೂರ್ಣಗೊಳಿಸುವುದು.
ಈ ಭಾಗದ ಗೀತಾ ಎನ್ನುವರ ಪುತ್ರಿ 13 ವರ್ಷ ಪ್ರಾಯದ ಬಾಲಕಿ ವಿಕಲಚೇತನೆಯಾಗಿದ್ದು ನಾವುಂದ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ದಿನಕ್ಕೆ 300 ರೂ. ವ್ಯಯಿಸಿ ರಿಕ್ಷಾದಲ್ಲಿ ಬೆಳಿಗ್ಗೆ ಕರೆದೊಯ್ದು ಸಂಜೆ ವಾಪಾಸ್ ಕರೆತರಬೇಕು ಎಂದು ಬಾಲಕಿ ಅಜ್ಜಿ ರತ್ನಮ್ಮ ನೊಂದು ನುಡಿದರು.
ಸೇನಾಪುರದಲ್ಲಿ ರೈಲು ನಿಲ್ದಾಣವಿದ್ದರೂ ರೈಲು ನಿಲ್ಲಲ್ಲ. ನಾಡ ಭಾಗ ಸಹಿತ ಬಸ್ ಸಮಸ್ಯೆಯಿರುವ ಕುಗ್ರಾಮಗಳ ಬಗ್ಗೆ ಈ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ ಅಗತ್ಯ ಕ್ರಮವಹಸಿಬೇಕು. ಆಡಳಿತ ವಿರೋಧಿ ಅಲೆಯ ನಡುವೆಯೂ ಬೈಂದೂರಿನಲ್ಲಿ ಬಿಜೆಪಿಯನ್ನು ಜನರು ಗೆಲ್ಲಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರಕಾರದ ಉಚಿತ ಯೋಜನೆಗಳು ಇಲ್ಲಿನವರಿಗೆ ಸಿಗುವಂತಾಗಬೇಕು. ಬಾಯಲ್ಲಿ ಹೇಳಿಯೋ, ಪೋನ್ ಕರೆಯಿಂದಲೋ ಕೆ.ಎಸ್.ಆರ್.ಟಿ.ಸಿ ಬಸ್ ಬಿಡೋದಿಲ್ಲ. ಸರ್ಕಾರಿ ಬಸ್ ಸಂಪರ್ಕ ಪಡೆಯಲು ಅದರದ್ದೇ ಆದ ಹಲವು ನಿಯಮಗಳಿದೆ. ಶಾಸಕರು ಈ ಬಗ್ಗೆ ಕಾರ್ಯಪ್ರವೃತ್ತರಾಗಬೇಕು. ಜನರು ಇದನ್ನು ಚಳುವಳಿ ರೀತಿ ಗಟ್ಟಿ ಧ್ವನಿಯಲ್ಲಿ ಕೇಳಬೇಕು.
– ಮುನೀರ್ ಕಾಟಿಪಳ್ಳ ಡಿವೈಎಫ್ಐ ರಾಜ್ಯಾಧ್ಯಕ್ಷಕುಂದಾಪುರ, ಬೈಂದೂರಿನ ವಿವಿದೆಡೆ ಕುಗ್ರಾಮಗಳಿಗೆ ಸರಕಾರಿ ಬಸ್ಸು ಸಂಚಾರ ಆರಂಭಿಸಿದಲ್ಲಿ ಬಡವರಿಗೆ, ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಈ ಹಿನ್ನೆಲೆ ಡಿವೈಎಫ್ಐ ವತಿಯಿಂದ ಪ್ರತಿಭಟನೆಗೆ ಮುಂದಾಗಿದ್ದು ನಾಡದಿಂದ ಆರಂಭಗೊಂಡ ಈ ಹೋರಾಟವು ಹಕ್ಲಾಡಿ, ಗುಲ್ವಾಡಿ ಸಹಿತ ಕುಂದಾಪುರದ ಇನ್ನೂ ಹಲವು ಊರುಗಳಿಗೂ ವಿಸ್ತರಿಸಲಿದ್ದು, ಬಸ್ ಸೇವೆ ಒದಗಿಸುವವರೆಗೆ ಈ ಪ್ರತಿಭಟನೆ ನಿರಂತರವಾಗಿರಲಿದೆ.
– ಸುರೇಶ್ ಕಲ್ಲಾಗರ, ಡಿವೈಎಫ್ಐ ಮುಖಂಡರು
Comments are closed.