ಕುಂದಾಪುರ: ಒಂದೆಡೆ ಮಳೆಗಾಲದಲ್ಲಿ ಅಲ್ಲಲ್ಲಿ ಬಿದ್ದ ಹೊಂಡಗಳು. ಮತ್ತೊಂದೆಡೆ ಅವೈಜ್ಞಾನಿಕ ತಿರುವುಗಳು. ಈ ನಡುವೆ ಹೆದ್ದಾರಿಯ ಹಾದಿಯಲ್ಲಿ ಮಲಗುವ, ಆಸುಪಾಸಿನಲ್ಲಿ ಓಡಾಡುವ ಬೀಡಾಡಿ ಜಾನುವಾರುಗಳು ವಾಹನ ಸವಾರರ ಸುಗಮ ಸಂಚಾರಕ್ಕೆ ಸಂಚಕಾರ ತಂದೊಡ್ಡುತ್ತಿದೆ. ಕುಂದಾಪುರದಿಂದ ಬೈಂದೂರು ಮಾರ್ಗವಾಗಿ ಸಂಚರಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಅನುಭವಿಸುವ ಸಂಕಟವಿದು.
ಚತುಷ್ಪತ ಹೆದ್ದಾರಿ ಮೂಲಕ ಸುಗಮ ವಾಹನ ಓಡಾಟ ವ್ಯವಸ್ಥೆ ಕಲ್ಪಸಬೇಕೆಂಬ ನಿಟ್ಟಿನಲ್ಲಿ ಆರಂಭವಾದ ಕಾಮಗಾರಿ ಆರಂಭದ ದಿನದಿಂದಲೂ ಕುಂಟುತ್ತಾ ಸಾಗಿಬಂದಿದ್ದಲ್ಲದೆ ಅವೈಜ್ಞಾನಿಕ ಕಾಮಗಾರಿಗಳಿಂದ ಜನರ ಕೆಂಗಣ್ಣಿಗೆ ಗುರಿಯಾಗಿ ಪ್ರತಿಭಟನೆಗಳು ಕೂಡ ನಡೆದಿದ್ದವು. ಇದೀಗಾ ರಾಷ್ಟ್ರೀಯ ಹೆದ್ದಾರಿಯ ಬೈಂದೂರು-ಕುಂದಾಪುರ ನಡುವೆ, ಡಿವೈಡರ್ ಮೇಲೆ ಜಾನುವಾರುಗಳ ಓಡಾಟ ಹೆಚ್ಚಿದೆ. ಮಾತ್ರವಲ್ಲದೆ ಈ ಮಾರ್ಗದ ಹಲವೆಡೆ ಹೆದ್ದಾರಿ ಮದ್ಯೆಯೇ ಬೀಡಾಡಿ ಗೋವುಗಳು ಮಲಗಿ ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡುತ್ತಿದೆ.
ಜನ-ಜಾನುವಾರುಗಳಿಗೂ ಹಾನಿ
ಬೈಂದೂರು ಮಾರ್ಗದ ತ್ರಾಸಿ ತರುವಾಯ ನಾವುಂದದಿಂದ ಬಹುತೇಕ ಶಿರೂರು ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀಡಾಡಿ ಜಾನುವಾರುಗಳು ಎಲ್ಲೆಂದರಲ್ಲಿ ಸುಗಮ ವಾಹನ ಸಂಚಾರಕ್ಕೆ ಅಡ್ಡಿಮಾಡುತ್ತಿದೆ. ಇದರಿಂದ ದ್ವಿಚಕ್ರ ವಾಹನ ಹಾಗೂ ಕಾರು ಮೊದಲಾದ ಲಘು ವಾಹನ ಸವಾರಿಗರಿಗೆ ಬಹಳಷ್ಟು ಸಮಸ್ಯೆಯಾದರೆ, ಘನ ವಾಹನಗಳಾದ ಲಾರಿ, ಬಸ್ಸು ಮೊದಲಾದ ವಾಹನಡಿಗೆ ಸಿಕ್ಕು ಜಾನುವಾರುಗಳು ಸಾವು-ನೋವು ಅನುಭವಿಸಿದ ಉದಾಹರಣೆಗಳಾಗಿದೆ.
ಶಿರೂರು ಟೋಲ್ ನಲ್ಲಿ ಕಳೆದ ವರ್ಷ ನಡೆದಿತ್ತು ದುರಂತ
ಕಳೆದ ವರ್ಷ ಜುಲೈ ತಿಂಗಳಿನಲ್ಲಿ ಉತ್ತರಕನ್ನಡ ಜಿಲ್ಲೆ ಹೊನ್ನಾವರದಿಂದ ರೋಗಿಯನ್ನು ಹಾಗೂ ಅವರ ಕುಟುಂಬಿಕರನ್ನು ಸಾಗಿಸುತ್ತಿದ್ದ ಖಾಸಗಿ ಆಸ್ಪತ್ರೆಯ ಅಂಬುಲೈನ್ಸ್ ಚಾಲಕನ ನಿಯಂತ್ರಣ ತಪ್ಪಿ ಶಿರೂರು ಟೋಲ್ ಫ್ಲಾಜಾ ಬಳಿ ಪಲ್ಟಿಯಾಗಿತ್ತು. ಈ ದುರ್ಘಟನೆಯಲ್ಲಿ ಉ.ಕ ಜಿಲ್ಲೆಯ ಹೊನ್ನಾವರ ಮೂಲದ ನಾಲ್ವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದರು. ಟೋಲ್ ಕೇಂದ್ರದ ವಾಹನ ಸಂಚಾರ ಮಾರ್ಗದಲ್ಲಿ ಜಾನುವಾರುಗಳು ಮಲಗಿದ್ದು, ಅದನ್ನು ಸಿಬ್ಬಂದಿ ಬದಿಗೆ ಕಳಿಸಿ ಬ್ಯಾರಿಕೇಡ್ ತೆಗೆಯಲು ಹೋದಾಗ ನಿಯಂತ್ರಣ ಕಳೆದುಕೊಂಡ ಅಂಬುಲೆನ್ಸ್ ಪಲ್ಟಿಯಾಗಿದ್ದು ಸಿಸಿ ಟಿವಿ ದೃಶ್ಯದಲ್ಲಿ ಕಂಡುಬಂದಿತ್ತು.
ಕುಂದಾಪುರ-ಬೈಂದೂರಿನ ರಾಷ್ಟ್ರೀಯ ಹೆದ್ದಾರಿ ನಡುವೆ ಹಲವೆಡೆ ಜಾನುವಾರುಗಳು ಮಲಗುವ ಕಾರಣ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು ಸಾವು -ನೋವಿಗೆ ಕಾರಣವಾಗುತ್ತಿದೆ. ಬೀಡಾಡಿ ಗೋವುಗಳಿಗೆ ಸೂಕ್ತ ನೆಲೆ ಕಲ್ಪಿಸುವ ಕಾರ್ಯಕ್ಕೆ ಸಂಬಂದಪಟ್ಟವರು ಮುಂದಾಗಬೇಕು. ಈ ಹಿಂದೆ ಆಶ್ವಾಸನೆ ನೀಡಿದಂತೆ ಗೋಶಾಲೆ ನಿರ್ಮಾಣವಾಗಬೇಕು. ಬೀಡಾಡಿ ಗೋವುಗಳಿಂದ ಎಷ್ಟೋ ಕೃಷಿ ಭೂಮಿ ಹಾಳಾಗುತ್ತಿದೆ. ರಾತ್ರಿಯ ಸಮಯದಲ್ಲಿ ವಾಹನ, ಬೈಕ್ ಹಾಗೂ ವಾಹನ ಸವಾರರಿಗೆ ತೊಂದರೆ ಆಗದಂತೆ ಕ್ರಮವಹಿಸಬೇಕು.
– ಸುಬ್ರಹ್ಮಣ್ಯ ಬಿಜೂರು (ಸಾಮಾಜಿಕ ಕಾರ್ಯಕರ್ತ)
Comments are closed.