ಕುಂದಾಪುರ: ಬೆಳೆಯುವ ನಾಯಕರ ಕಾಲೆಳೆಯುವುದು ಬಿಜೆಪಿಯ ಪರಿಪಾಠ. ಕಳೆದ ಚುನಾವಣೆಯಲ್ಲಿ ಕಾರಣಗಳಿಲ್ಲದೇ ನನಗೆ ಸೀಟನ್ನು ನಿರಾಕರಿಸಿದರು. ಬೈಂದೂರಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ನನ್ನನ್ನು ಮೂಲೆಗುಂಪು ಮಾಡಿದರು. ಇದರಿಂದ ಮಾನಸಿಕವಾಗಿ ನೊಂದಿದ್ದೇನೆ. ಮನಸ್ಸಿಗೆ ಆಘಾತವಾಗಿದೆ ಎಂದು ಬೈಂದೂರಿನ ಮಾಜಿ ಶಾಸಕ ಬಿ.ಎಮ್ ಸುಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ವಂಡ್ಸೆ ಸಮೀಪದ ನೆಂಪುವಿನ ತಮ್ಮ ನಿವಾಸದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಡಿತದಲ್ಲಿದ್ದ ಬೈಂದೂರನ್ನು ಬಿಜೆಪಿ ಹಿಡಿತಕ್ಕೆ ತಂದಿದ್ದು ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ಗೆದ್ದು ಶಾಸಕನಾಗಿ ಆಯ್ಕೆಯಾಗಿದ್ದೆ ಎಂದರು.
ಬಿಜೆಪಿಗೆ ಇನ್ನೂ ವಿರೋಧ ಪಕ್ಷದ ನಾಯಕ, ರಾಜ್ಯಾಧ್ಯಕ್ಷರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಬಿಜೆಪಿಯವರು ಹಾಗ್ ಮಾಡ್ತೇನೆ, ಹೀಗ್ ಮಾಡ್ತೇನೆ ಎಂದು ಹೇಳುತ್ತಾರೆ ಹೊರತು ಅವರಲ್ಲಿ ಏನೂ ಮಾಡಲು ಆಗುವುದಿಲ್ಲ. ಜನಮನವನ್ನು ಗೆಲ್ಲಲು ಸಾಧ್ಯವಿಲ್ಲ. ಕರಾವಳಿ ಬಿಟ್ಟರೆ ಬೇರೆಲ್ಲೆಡೆ ಬಿಜೆಪಿ ತನ್ನ ಹೆಸರನ್ನು ಹಾಳು ಮಾಡಿಕೊಂಡಿದೆ. ಬೈಂದೂರಲ್ಲಿ ದೊಡ್ಡ ಮಟ್ಟದಲ್ಲಿ ಪಕ್ಷ ಕಟ್ಟಿದ ನನ್ನನ್ನು ಜೋರಾಗಿದ್ದೇನೆ, ಸಮರ್ಥತೆ ಇದೆ ಎಂದು ತುಳಿದು ಹಾಕಿದ್ದಾರೆ. ಯಾರು ಸಮರ್ಥರಿರುತ್ತಾರೋ ಅವರಿಗೆ ಬಿಜೆಪಿಯಲ್ಲಿ ಜಾಗ ಇಲ್ಲ. ಇನ್ನುಮುಂದೆ ಇಂತಹ ಪಕ್ಷದ ನಾಯಕನಾಗಿ ನಾನಿಲ್ಲ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಭವಿಷ್ಯವಿಲ್ಲ ಎಂದರು.
ಕಾಂಗ್ರೆಸ್ ನಾಯಕರು ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಶೃಂಗೇರಿ ಶಾಸಕರ ಜೊತೆಗೆ ಡಿಕೆಶಿ ಭೇಟಿಯಾಗಿದ್ದೇನೆ. ಡಿಕೆ ಶಿವಕುಮಾರ್ ಆಹ್ವಾನ ನೀಡಿದ್ದಾರೆ. ಅವರಿಗೆ ಕಾಂಗ್ರೆಸ್ ಸೇರುತ್ತೇನೆಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದೇನೆ. ದೊಡ್ಡ ಮಟ್ಟದಲ್ಲಿ ಸಮಾರಂಭ ಮಾಡಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ. ಬೈಂದೂರಲ್ಲಿ ಬಿಜೆಪಿ ಪಕ್ಷ ಕಟ್ಟಿದ್ದೇನೆ, ನನ್ನನ್ನು ತುಳಿದು ಹಾಕಿದ್ದಾರೆ ಎಂದರು.
ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ, ಸುಕುಮಾರ್ ಶೆಟ್ಟಿ ಹಾಗೂ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ.ರಾಜೇಗೌಡ ಅವರು ಇಂದು ನನ್ನನ್ನು ಕುಮಾರ ಕೃಪಾದಲ್ಲಿ ಭೇಟಿ ಮಾಡಿದರು. ಈ ವೇಳೆ ಹಲವು ವಿಚಾರಗಳ ಕುರಿತು ಚರ್ಚಿಸಲಾಯಿತು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಟ್ವಿಟ್ ಮಾಡಿದ್ದಾರೆ.
Comments are closed.