ಬೆಂಗಳೂರು: ಕಾವೇರಿ ನೀರಿನ ಸಮಸ್ಯೆ ಬಗ್ಗೆ ಹಿಂದಿನಿಂದಲೂ ನಾವು ಹೋರಾಡುತ್ತಿದ್ದೇವೆ. ಕಾವೇರಿ ಎಲ್ಲರಿಗೂ ಅಗತ್ಯ. ಆ ತಾಯಿ ಪವರ್ ಅಂಥದ್ದು. ಕಾವೇರಿ ವಿಚಾರದ ಪ್ರತಿಭಟನೆಗೆ ಕಲಾವಿದರು ಬರಲ್ಲ ಎನ್ನುವರು, ಕಲಾವಿದರು ಬಂದು ಏನ್ ಮಾಡಬೇಕು. ನಾವು ಹೋರಾಟದಲ್ಲಿ ಭಾಗಿಯಾದರೆ ಕಾವೇರಿ ಸಮಸ್ಯೆ ಬಗೆಹರಿಯುತ್ತಾ ಎಂದು ನಟ ಶಿವರಾಜ್ ಕುಮಾರ್ ಪ್ರಶ್ನಿಸಿದ್ದಾರೆ.
ಕಾವೇರಿ ಪರ ಕನ್ನಡಿಗರ ಹೋರಾಟಕ್ಕೆ ಸ್ಯಾಂಡಲ್ ವುಡ್ ನಿಂದ ಬೆಂಬಲ ವ್ಯಕ್ತಪಡಿಸಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ನಮ್ಮ ಜೀವನಾಡಿ, ರೈತರ ಜೀವನಾಡಿ. ರೈತರ ಬಾಳು ಹಸನಾದರೆ ನಾವೆಲ್ಲರೂ ಬದುಕುತ್ತೇವೆ. ನಾಡು, ನುಡಿ, ನೆಲ ಮತ್ತು ಜಲ ವಿಚಾರವಾಗಿ ಕನ್ನಡ ಚಿತ್ರರಂಗದ ಕಲಾವಿದರು ಎಲ್ಲರೂ ಒಗ್ಗಟ್ಟಾಗಿರುತ್ತೇವೆ. ನಮ್ಮ ಬೆಂಬಲ ಸರ್ಕಾರಕ್ಕಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಎರಡೂ ರೈತರ ಹಿತ ಕಾಪಾಡಬೇಕು ಎಂದು ಹೇಳಿದರು.
ಹೋರಾಟದಲ್ಲಿ ನಾವು ಬಂದು ನಿಂತರೆ ಏನು ಆಗುತ್ತೆ ಹೇಳಿ? ನಾವು ಬಂದು ಮಾತನಾಡಿ ಹೋದರೇ ಸಮಸ್ಯೆ ಬಗೆಹರಿಯುತ್ತಾ… ಎಲ್ಲ ನಾಯಕರು ಕೂತು ಮಾತನಾಡಿ ಚರ್ಚೆ ಮೂಲಕ ಬಗೆಹರಿಸಬೇಕು. ಎಲ್ಲರೂ ರೈತರೇ, ಸರ್ಕಾರಗಳು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಬಸ್ ಹೊಡೆದು ಹಾಕಿದರೇ ಹೋರಾಟ ಆಗುತ್ತಾ ಎಂದು ಕೇಳಿದರು.
ಕಾವೇರಿ ವಿಚಾರದಲ್ಲಿ ಕರ್ನಾಟಕ, ತಮಿಳುನಾಡು ಸರ್ಕಾರ ಚರ್ಚೆ ಮಾಡಲಿ. ನಾವು ಆಯ್ಕೆ ಮಾಡಿರುವ ಸರ್ಕಾರ ವಿವಾದ ಬಗೆಹರಿಸಲು ಮುಂದಾಗಬೇಕು. ನಮ್ಮ ಅನುಕೂಲಕ್ಕಾಗಿ ಪರಿಸ್ಥಿತಿ ಲಾಭ ಪಡೆದುಕೊಳ್ಳಬಾರದು ಎಂದು ಶಿವರಾಜ್ ಕುಮಾರ್ ಹೇಳಿದರು.
Comments are closed.