ಉಡುಪಿ: ಕ್ಷುಲ್ಲಕ ಕಾರಣಕ್ಕಾಗಿ ಮನೆಯಲ್ಲಿ ನಡೆಯುತ್ತಿದ್ದ ಕಲಹಕ್ಕೆ ಪುತ್ರನೇ ತಂದೆಯನ್ನು ಕಡಿದು ಕೊಂದ ಘಟನೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಪೆಜಮಂಗೂರು ಗ್ರಾಮದ ಮೊಗವೀರಪೇಟೆ ಎಂಬಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಇಲ್ಲಿನ ನಿವಾಸಿ ಸಾಧು ಮರಕಾಲ (68) ಕೊಲೆಯಾಗಿದ್ದು ಇವರ ಪುತ್ರ ಆನಂದ (50) ಕತ್ತಿಯಿಂದ ಕಡಿದು ಕೊಲೆ ಮಾಡಿದ ಆರೋಪಿ.
ಘಟನೆ ವಿವರ: ಪೆಜಮಂಗೂರು ಗ್ರಾಮದ ಮೊಗವೀರಪೇಟೆಯಲ್ಲಿ ಪತ್ನಿಯೊಂದಿಗೆ ನೆಲೆಸಿದ್ದ ಸಾಧು ಮರಕಾಲ ದಂಪತಿಗಳ ಮಕ್ಕಳು ಇತರಡೆ ವಾಸವಿದ್ದು ಆಗಾಗ್ಗೆ ಬಂದು ಹೋಗುತ್ತಿದ್ದರು. ಹಾಗೆಯೇ ಪುತ್ರ ಆನಂದ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು ಮನೆಗೆ ಬಂದಾಗೆಲ್ಲಾ ಗಲಾಟೆ ನಡೆಯುತ್ತಿತ್ತು. ಶನಿವಾರ ಕೂಡ ಆನಂದ ಮನೆಗೆ ಬಂದಿದ್ದು ತಂದೆ ಮಗನ ನಡುವೆ ಕಲಹ ನಡೆದು ಕತ್ತಿಯಿಂದ ತಂದೆಯ ಕಾಲಿನ ಭಾಗ ಕಡಿದು ಆರೋಪಿ ಆನಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಗಾಯಾಳುವನ್ನು ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವಿಪರೀತ ರಕ್ತಸ್ರಾವದ್ದರಿಂದ ಸಾಧು ಮೃತಪಟ್ಟಿದ್ದಾರೆ.
ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿಎಂ, ಪಿಎಸ್ಐ ರಾಜಶೇಖರ್ ವಂದಲಿ ಹಾಗೂ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
Comments are closed.