ಕರಾವಳಿ

ಬ್ರಹ್ಮಾವರದ ಚೇರ್ಕಾಡಿಯಲ್ಲಿ ಕೃಷಿ ಆಹಾರ ಸಸ್ಯ ಮೇಳ, ಉದ್ಯೋಗ ಮಾಹಿತಿ ಶಿಬಿರ ಉದ್ಘಾಟಿಸಿದ ಕೃಷಿ ಸಚಿವ ಚೆಲುವರಾಯ ಸ್ವಾಮಿ

Pinterest LinkedIn Tumblr

 

ರಾಜ್ಯ ಸರ್ಕಾರದಿಂದ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಬೆಂಬಲ: ಸಚಿವ ಚೆಲುವರಾಯ ಸ್ವಾಮಿ

ಉಡುಪಿ: ರಾಜ್ಯ ಸರ್ಕಾರವು ರಾಜ್ಯದ ರೈತರಿಗೆ ಕೃಷಿ ಚಟುವಟಿಕೆಗಳನ್ನು ಲಾಭದಾಯಕವಾಗಿ ಮಾಡಲು ಸಂಪೂರ್ಣ ಬೆಂಬಲ ಮತ್ತು ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತಿದೆ ಎಂದು ರಾಜ್ಯದ ಕೃಷಿ ಸಚಿವ ಚೆಲುವರಾಯ ಸ್ವಾಮಿ ಹೇಳಿದರು.

ಅವರು ಇಂದು (ಅ. 14 ಶನಿವಾರ) ಬ್ರಹ್ಮಾವರದ ಚೇರ್ಕಾಡಿಯಲ್ಲಿ, ಐ.ಸಿ.ಎ.ಆರ್, ಕೃಷಿ ವಿಜ್ಞಾನ ಕೇಂದ್ರ, ಬ್ರಹ್ಮಾವರ, ತೋಟಗಾರಿಕಾ ಇಲಾಖೆ ಉಡುಪಿ ಜಿಲ್ಲೆ, ಶ್ರೀ ಜ್ಞಾನಶಕಿ ಕ್ರೀಡಾ ಮತ್ತು ಕಲಾಸಂಘ (ರಿ), ರೋಟರಿ ರಾಯಲ್ ಬ್ರಹ್ಮಾವರ, ಲಯನ್ಸ್ ಕ್ಲಬ್ ಬಾರ್ಕೂರು -ಬ್ರಹ್ಮಾವರ ದ ಸಹಯೋಗದಲ್ಲಿ ನಡೆದ ಕೃಷಿ ಆಹಾರ ಸಸ್ಯ ಮೇಳ ಮತ್ತು ಉದ್ಯೋಗ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಕೃಷಿ ಚಟುವಟಿಕೆಯನ್ನು ಆಸಕ್ತಿ, ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಮಾಡಿದಲ್ಲಿ ಅತ್ಯಂತ ಲಾಭದಾಯಕವಾಗಿ ಮಾಡಬಹುದಾಗಿದ್ದು, ಇದಕ್ಕೆ ರಾಜ್ಯದಲ್ಲೇ ಹಲವು ಯಶಸ್ವಿ ಕೃಷಿಕರ ನಿದರ್ಶನಗಳಿವೆ. ಲಾಭದಾಯಕವಾಗುವುದರ ಜೊತೆಗೆ ಕೃಷಿಯು ಹಲವು ಮಂದಿಗೆ ಉದ್ಯೋಗ ಒದಗಿಸುವ ಕ್ಷೇತ್ರ ಸಹಾ ಆಗಿದ್ದು, ಕೃಷಿಯಿಂದ ಸ್ವಾಭಿಮಾನ ಮತ್ತು ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.

ರಾಜ್ಯಾದ್ಯಂತ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರದ ಕೊರತೆಯಾಗದಂತೆ ಸಮರ್ಪಕವಾಗಿ ವಿತರಿಸಲಾಗಿದೆ ಅಲ್ಲದೇ ನಕಲಿ ಬೀಜ ಮಾರಾಟಗಾರರು ಮತ್ತು ರಸಗೊಬ್ಬರ ಮಾರಾಟಕ್ಕೆ ಕಡಿವಾಣ ಹಾಕಲಾಗಿದೆ. ಕೃಷಿ ಯಂತ್ರಧಾರೆ ಕೇಂದ್ರಗಳನ್ನು ಬೃಹತ್ ಪ್ರಮಾಣದಲ್ಲಿ ತೆರೆಯಲು ಅನುದಾನ ಮೀಸಲಿಡಲಾಗಿದೆ. ಸಿರಿಧಾನ್ಯ ಬೆಳೆಯುವ ರೈತರಿಗೆ ಹೆಕ್ಟೇರ್ ಗೆ 10000 ರೂ ಸಹಾಯಧನ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯಗಳ ಮೂಲಕ ರೈತರಿಗೆ ಅವರ ಜಮೀನಿನ ಮಣ್ಣಿನ ಸಾರಾಂಶ ಬೆಳೆಯಬಹುದಾದ ಬೆಳೆಗಳು, ಹವಾಮಾನ ಆಧಾರಿತವಾಗಿ ಬೆಳೆಯಬಹುದಾದ ಬೆಳೆಗಳು, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಮತ್ತು ಹೆಚ್ಚು ಇಳುವರಿ ನೀಡುವಂತಹ ಬೆಳೆಯಬಹುದಾದ ಬೆಳೆಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದರು.

ಕೃಷಿಯ ಬೆಳವಣಿಗೆಯ ಮೂಲಕ ರಾಜ್ಯದ ಮತ್ತು ರಾಜ್ಯದ ಜನತೆಯ ಆರ್ಥಿಕ ಬೆಳವಣಿಗೆ ಸಾಧ್ಯವಾಗಲಿದ್ದು ಅದಕ್ಕಾಗಿ ರಾಜ್ಯಾದ್ಯಂತ ಕೃಷಿ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿನ ರೈತರು ವರ್ಷದ ಎಲ್ಲಾ ಕಾಲದಲ್ಲೂ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗುವಂತೆ ಅಗತ್ಯವಿರುವ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕುರಿತಂತೆ ಸಣ್ಣ ನೀರಾವರಿ ಸಚಿವರು ಮತ್ತು ಉಪ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಈ ಭಾಗದಲ್ಲಿ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದ ಸಚಿವರು ಬ್ರಹ್ಮಾವರದಲ್ಲಿ ಕೃಷಿ ಕಾಲೇಜು ಆರಂಭಿಸುವ ಕುರಿತಂತೆ ಅಧಿಕಾರಿಗಳು ಮತ್ತು ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಕಾರಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ಈ ಭಾಗದಲ್ಲಿ ಕೃಷಿ ಕಾಲೇಜು ಸ್ಥಾಪನೆಯ ಅಗತ್ಯತೆಯ ಬಗ್ಗೆ ತಿಳಿಸಿದರು. ಕೃಷಿ ವಿಜ್ಞಾನಿಗಳು ಮಾಡುವ ಯಶಸ್ವಿ ಪ್ರಯೋಗಗಳು ಪ್ರಯೋಗಶಾಲೆಯಿಂದ ರೈತರ ಜಮೀನುಗಳಿಗೆ ಬರಬೇಕು, ರೈತರು ಕೃಷಿ ವಿಜ್ಞಾನಿಗಳು ನೀಡುವ ಸಲಹೆಗಳನ್ನು ಸ್ವೀಕರಿಸಿ, ಅವುಗಳನ್ನು ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳುವ ಮೂಲಕ ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳಬೇಕು ಎಂದರು.

ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ, ಬ್ರಹ್ಮಾವರ ಕೃಷಿ ಕೇಂದ್ರದ ಆವರಣದಲ್ಲಿನ 350 ಎಕ್ರೆ ಪ್ರದೇಶದಲ್ಲಿ ಕೃಷಿ ಕಾಲೇಜು ಮತ್ತು ಕೃಷಿ ಅಭಿವೃದ್ಧಿಗೆ ಸಂಬ೦ಧಿಸಿದ ಚಟುವಟಿಕೆಗಳನ್ನು ಆರಂಭಿಸುವ ಮೂಲಕ ಜಿಲ್ಲೆಯಲ್ಲಿ ಕೃಷಿಗೆ ಹೆಚ್ಚಿನ ಬೆಂಬಲ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪ್ರಯೋಜನಗಳನ್ನು ರೈತರು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಚೇರ್ಕಾಡಿ ಗ್ರಾ.ಪಂ. ಅಧ್ಯಕ್ಷ ನಾರಾಯಣ ನಾಯ್ಕ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ. ಜಗದೀಶ್, ಬ್ರಹ್ಮಾವರ ವಲಯ ಕೃಷಿ ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಲಕ್ಷ್ಮಣ, ಹಿರಿಯ ವಿಜ್ಞಾನಿ ಡಾ.ಬಿ.ಧನಂಜಯ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ ಮತ್ತಿತರರು ಉಪಸ್ಥಿತರಿದ್ದರು.

ಪ್ರಗತಿಪರ ಕೃಷಿಕರು ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಅಖಿಲ್ ಹೆಗ್ಡೆ ಸ್ವಾಗತಿಸಿದರು.

Comments are closed.