ಕರಾವಳಿ

ಸಾಹಿತಿ, ಪತ್ರಕರ್ತ ಶೇಖರ್ ಅಜೆಕಾರ್ ನಿಧನ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ

Pinterest LinkedIn Tumblr

ಉಡುಪಿ: ಪತ್ರಕರ್ತ, ಸಾಹಿತಿ, ಲೇಖಕ ಶೇಖರ್ ಅಜೆಕಾರ್ ಹೃದಯಘಾತದಿಂದ ಅ.31 ಮಂಗಳವಾರ ಬೆಳಗ್ಗೆ ನಿಧನ ಹೊಂದಿದರು. ಶೇಖರ್ ಅಜೆಕಾರ್ ಅವರು 22 ಪುಸ್ತಕಗಳನ್ನು ಬರೆದಿದ್ದು ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಸಂಘಟಿಸಿದ್ದರು.

ಶೇಖರ್ ಅವರು ಕುಂದಾಪುರದಿಂದ ಪ್ರಕಟವಾಗುವ ಕುಂದಪ್ರಭ ವಾರಪತ್ರಿಕೆಯಲ್ಲಿ ಬರಹಗಾರರಾಗಿ ಕಾರ್ಯ ನಿರ್ವಹಿಸಿದರು. ಮುಂಬೈನ ‘ಕರ್ನಾಟಕ ಮಲ್ಲ’, ಜನವಾಹಿನಿ, ಡೈಜಿವರ್ಲ್ಡ್, ಕನ್ನಡಪ್ರಭ ಮತ್ತು ಉಷಾ ಕಿರಣಗಳಲ್ಲೂ ಸೇವೆ ಸಲ್ಲಿಸಿದ್ದಾರೆ. 10 ವರ್ಷಗಳ ಕಾಲ ಪತ್ರಕರ್ತರ ವೇದಿಕೆ ಬೆಂಗಳೂರಿನ ಉಡುಪಿ ಶಾಖೆಯ ಉಪಾಧ್ಯಕ್ಷರಾಗಿದ್ದರು.

ಇವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಬಸವಶ್ರೀ ಅವಾರ್ಡ್ 2018, ಅಮಂತ್ರನ ಪ್ರಶಸ್ತಿ 2019, ಕೃಷಿ ಬಂಧು 2019, ರಾಷ್ಟ್ರೀಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2019, ವಿಶ್ವ ದರ್ಶನ ಸಾಹಿತ್ಯ ಪ್ರಶಸ್ತಿ 2019, ಶಿಖಾ ಭಾರತ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆಗಾಗಿ 1995 ರಲ್ಲಿ ಪ್ರಶಸ್ತಿ ಲಭಿಸಿದೆ.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಂತಾಪ
ವಿವಿಧ ಪತ್ರಿಕೆಗಳಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಶೇಖರ್ ಅಜೆಕಾರ್ ಅವರ ನಿಧನಕ್ಕೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ರಾಷ್ಟ್ರೀಯ ಸಮಿತಿ ಸದಸ್ಯ ಅರುಣ್ ಕುಮಾರ್ ಶಿರೂರು, ರಜತ ಮಹೋತ್ಸವ ಸಮಿತಿಯ ಸಂಚಾಲಕ ಶರೀಫ್ ಕಾರ್ಕಳ, ಪ್ರಧಾನ ಕಾರ್ಯದರ್ಶಿ ಜಯಕರ ಸುವರ್ಣ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Comments are closed.