(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಮಲಶಿಲೆ ಮೂಲದ ಹಿರಿಯ ಯಕ್ಷಗಾನ ಕಲಾವಿದ ಆರ್ಗೋಡು ಮೋಹನದಾಸ್ ಶೆಣೈ ಅವರಿಗೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಆರ್ಗೋಡು ಮೋಹನದಾಸ ಶೆಣೈಯವರ ತಂದೆ ಹಿರಿಯ ಭಾಗವತ ಕೆ. ಗೋವಿಂದರಾಯ ಶೆಣೈ, ತಾಯಿ ಮುಕ್ತಾಬಾಯಿ. ಮೋಹನದಾಸ್ ಶೆಣೈ ಅವರ ಪತ್ನಿ ಕಸ್ತೂರಿ. ದಂಪತಿಗೆ ಮೂವರು ಪುತ್ರಿಯರು, ಇಬ್ಬರು ಪುತ್ರರಿದ್ದಾರೆ. ಎಂಟು ಮಂದಿ ಮೊಮ್ಮಕ್ಕಳು. ಇಡೀ ಕುಟುಂಬ ಯಕ್ಷಗಾನದ ಪ್ರೋತ್ಸಾಹಕರು ಹಾಗೂ ಆರಾಧಕರು.
ಪಿಯುಸಿ ವಿದ್ಯಾಭ್ಯಾಸದ ಬಳಿಕ ಸುಮಾರು 43 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ಹಿರಿಯಡಕ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಕುಮಟಾ, ಕೋಟ ಅಮೃತೇಶ್ವರಿ ಹಾಗೂ ಕಮಲಶಿಲೆ ಮೇಳದಲ್ಲಿ ಕಾರ್ಯ ನಿರ್ವಹಿಸಿದ್ದರು. ಸುದನ್ವ, ದಶರಥ, ಭೀಷ್ಮ, ಶ್ರೀರಾಮ, ಪರಶುರಾಮ, ಬ್ರಹ್ಮ, ವಿಷ್ಣು, ರಾವಣ, ಶಂತನು, ದೇವವೃತ, ಉಘ್ರಸೇನಾ, ಅಕ್ರೂರ, ನಾರದ, ಭೀಮ, ಹರಿಶ್ಚಂದ್ರ, ವೀರಮಣಿ, ಜಮದಗ್ನಿ, ಸಹಿತ ವಿವಿಧ ಪೌರಾಣಿಕ, ಐತಿಹಾಸಿಕ, ಸಾಮಾಜಿಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ತಂದೆ ಹಿರಿಯ ಭಾಗವತ ಕೆ. ಗೋವಿಂದರಾಯ ಶೆಣೈ ಯಕ್ಷಗಾನ ಪಾದಾರ್ಪಣೆಗೆ ಗುರುಗಳು. ದೊಡ್ಡಪ್ಪರಾದ ರಾಮಚಂದ್ರ ಶೆಣೈ, ನರಸಿಂಹ ಶೆಣೈ ಮಾತುಗಾರಿಕೆಯ ಗುರುಗಳು. ಹಾಸ್ಯ ಕಲಾವಿದ ಕಮಲಶಿಲೆ ಮಹಾಬಲ ದೇವಾಡಿಗ ಕುಣಿತದ ಗುರುಗಳು.
ಸ್ವಪ್ನಸ್ರಾಮಾಜ್ಯ, ರಕ್ತತಿಲಕ, ಮೃಗನಯನೆ, ಯಶೋಧ-ಕೃಷ್ಣ, ಪಾರ್ಥೀವಾಗೃಣಿ, ಕರ್ಣಕಥಾಮೃಂತಂ ಮೊದಲಾದ ಕೃತಿಗಳು ರಚಿಸಿದ್ದಾರೆ. ಬೆಳ್ಳಿ ನಕ್ಷತ್ರ, ಶಿವಭೈರವಿ, ವರ್ಣವೈಭವ, ವಜ್ರ ಕಿರೀಟ, ರಾಣಿಮೃಣಾಲಿನಿ, ನಾಗನಯನೆ, ಅಮರದೀಪ, ಸೌಮ್ಯ ಸೌಂದರ್ಯ, ಅವನಿ-ಅಂಬರ ಮೊದಲಾದ ಪದ್ಯ ರಚಿಸಿದ್ದಾರೆ. ಲವಕುಶ ಕಾಳಗ, ಶ್ರೀರಾಮಾಂಜನೇಯ, ಕೃಷ್ಣಾರ್ಜುನ, ಜಾಂಬವತೀ ಕಲ್ಯಾಣ, ಸುಧನ್ವ ಕಾಳಗ, ವೀರಮಣಿ, ಮಹಿಷಮರ್ದಿನಿ, ಮಧುರಾಮಹೀಂದ್ರ, ಕರ್ಣಾರ್ಜುನ ಪ್ರಸಂಗಗಳಿಗೆ ಅರ್ಥ ಬರೆದಿದ್ದಾರೆ.
ಕೆ.ಎಸ್ ನಿಡಂಬೂರು ಪ್ರಶಸ್ತಿ, ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ಶಿರಿಯಾರ ಮಂಜುನಾಯ್ಕ್ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಬೈಕಾಡ್ತಿ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಹಾಗೂ ಜಿ.ಎಸ್.ಬಿ. ಕಲಾರತ್ನ ಪ್ರಶಸ್ತಿ ಸಹಿತ ವಿವಿದೆಡೆ ಸಾವಿರಾರು ಸನ್ಮಾನಗಳು ಸಂದಿದೆ.
ನಮ್ಮದು ಹಿಂದಿನಿಂದಲೂ ಯಕ್ಷಗಾನದ ಮನೆತನ. ತಂದೆ, ದೊಡ್ಡಪ್ಪನವರು ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು ತಂದೆ ಗೋವಿಂದರಾಯ ಶೆಣೈಯವರು ನನ್ನ ಗುರುಗಳು. 7 ಮೇಳಗಳಲ್ಲಿ ಸೇವೆ ಮಾಡಿದ್ದೇನೆ. ಯಕ್ಷಗಾನದಲ್ಲಿ ಬರುವಂತೆ ಕಾಲವನ್ನು ಕಾಯಬೇಕು. ಪ್ರಶಸ್ತಿ ವಿಚಾರದಲ್ಲಿ ಹೇಳಬೇಕೆಂದರೆ ಇದು ಪರಿಶ್ರಮಕ್ಕೆ, ಮನೆತನಕ್ಕೆ ಸಿಕ್ಕ ಗೌರವವಾಗಿದ್ದು ಸಂತಸವಾಗಿದೆ. ಶುದ್ಧ, ಸರಳ, ನಿರರ್ಗಳವಾಗಿ ಯಾವುದೇ ಪೂರ್ವ ತಯಾರಿಯಿಲ್ಲದೆ ಕನ್ನಡದಲ್ಲಿ ಅಹೋರಾತ್ರಿ ಮಾತನಾಡುವವರು ಯಕ್ಷಗಾನ ಕಲಾವಿದರು.
– ಆರ್ಗೋಡು ಮೋಹನದಾಸ್ ಶೆಣೈ (2023ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದರು)
Comments are closed.