ಬೆಂಗಳೂರು: ಗಣಿ-ಭೂವಿಜ್ಞಾನ ಇಲಾಖೆಯ ಅಧಿಕಾರಿಯ ಮನೆಗೆ ದುಷ್ಕರ್ಮಿಗಳು ನುಗ್ಗಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಈ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಣಿ-ಭೂವಿಜ್ಞಾನ ಇಲಾಖೆ ಡೆಪ್ಯುಟಿ ಡೈರೆಕ್ಟರ್ ಪ್ರತಿಮಾ (37) ಕೊಲೆಯಾದ ಅಧಿಕಾರಿ.
ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಡಕಲ್ಲಸಂದ್ರದ ಗೋಕುಲ್ ಅಪಾರ್ಟ್ಮೆಂಟ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳಾ ಅಧಿಕಾರಿ ಪ್ರತಿಮಾ ಒಬ್ಬರೇ ಇದ್ದಾಗ ದುಷ್ಕರ್ಮಿಗಳು ಬಂದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಬೆಂಗಳೂರಿನ ಗ್ರಾಮಾಂತರ ಭೂಗರ್ಭ ಶಾಸ್ತ್ರ ವಿಭಾಗದ ಹಿರಿಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿಮಾ ದೊಡ್ಡಕಲ್ಲಸಂದ್ರದ ಕುವೆಂಪು ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದರು.
ಶನಿವಾರ ರಾತ್ರಿ 8 ಗಂಟೆಗೆ ಪ್ರತಿಮಾ ಅವರನ್ನು ಕಛೇರಿಯಿಂದ ಮನೆಗೆ ಚಾಲಕ ಬಿಟ್ಟು ಹೋದ ಬಳಿಕ ಈ ಕೊಲೆ ನಡೆದಿದೆ ಎನ್ನಲಾಗಿದೆ. ರಾತ್ರಿ ಪ್ರತಿಮಾ ಅವರಿಗೆ ಅವರ ಅಣ್ಣ ಕರೆ ಮಾಡಿದ್ದು ಕರೆ ಸ್ವೀಕರಿಸಿರಲಿಲ್ಲ. ಬೆಳಿಗ್ಗೆ ಮನೆ ಬಳಿ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಯಾವುದೇ ವಸ್ತುಗಳು ಕಾಣೆಯಾಗಿಲ್ಲ. ಹೀಗಾಗಿ ಇದೊಂದು ಪೂರ್ವ ನಿಯೋಜಿತ ಹತ್ಯೆ ಎಂಬುದು ಸ್ಪಷ್ಟವಾಗಿದೆ. ಪರಿಚಿತರಿಂದಲೇ ಕೊಲೆಯಾಗಿರುವ ಅನುಮಾನ ಇರುವ ಹಿನ್ನೆಲೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಪ್ರತಿಮಾ ಅವರ ಪತಿ ಮತ್ತು ಮಗ ತೀರ್ಥಹಳ್ಳಿಯ ತುಡುಕಿ ಗ್ರಾಮದಲ್ಲಿ ವಾಸವಿದ್ದಾರೆ. 18 ವರ್ಷಗಳ ಹಿಂದೆ ಪ್ರತಿಮಾ ಹಾಗೂ ಸತ್ಯನಾರಾಯಣ ವಿವಾಹವಾಗಿದ್ದರು. ಗಣಿ ಇಲಾಖೆ ಕರ್ತವ್ಯದಡಿ ಬೆಂಗಳೂರಿಗೆ ವರ್ಗವಾಗಿದ್ದರು. ಕಳೆದ 8 ವರ್ಷಗಳಿಂದ ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
Comments are closed.