ಕರಾವಳಿ

ಗಂಗೊಳ್ಳಿಯಲ್ಲಿ ಹೊತ್ತಿ ಉರಿದ 9 ಮೀನುಗಾರಿಕಾ ಬೋಟುಗಳು; ಕೋಟ್ಯಾಂತರ ರೂ. ನಷ್ಟ (Video)

Pinterest LinkedIn Tumblr

ಕುಂದಾಪುರ: ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯ ವಾರ್ಪ್ ಪ್ರದೇಶದಲ್ಲಿ ಲಂಗರು ಹಾಕಿದ್ದ ಒಂಬತ್ತಕ್ಕೂ ಅಧಿಕ ಮೀನುಗಾರಿಕಾ ಬೋಟುಗಳಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಸುಟ್ಟು ಕರಕಲಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದ್ದು ಈ ದುರ್ಘಟನೆಯಿಂದ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ.

ಮಳೆಗಾಲಕ್ಕೂ ಮುಂಚೆ ಈ ಭಾಗದಲ್ಲಿ ಬೋಟುಗಳನ್ನು ಲಂಗರು ಹಾಕಿ ಬೋಟ್ ಸಂಬಂಧಿತ ಕೆಲಸ ಕಾರ್ಯ, ರಿಪೇರಿ ಕೆಲಸ ನಿರ್ವಹಿಸಲಾಗುತ್ತದೆ. ಹಾಗಾಗಿ ಈ ಬೋಟುಗಳು ಕೆಲ ತಿಂಗಳುಗಳಿಂದ ಇಲ್ಲಿಯೇ ಇದ್ದು ಮುಂದೆ ಒಂದೆರಡು ದಿನದಲ್ಲಿ ಮೀನುಗಾರಿಕೆಗೆ ತೆರಳಲು ಅಣಿಯಾಗಿತ್ತು. ಬೆಂಕಿ ಅವಘಡದಿಂದ ಹೊತ್ತಿ ಉರಿದ 9 ಬೋಟುಗಳಲ್ಲಿ ಪರ್ಶೀನ್, 370 ಮೊದಲಾದ ದುಬಾರಿ ಬೋಟುಗಳಿದ್ದು ಉಳಿದಂತೆ ಸಣ್ಣ ದೋಣಿಗಳು, ಬಲೆಗಳು, ವಾರ್ಪ್ ಪ್ರದೇಶದಲ್ಲಿದಲ್ಲಿದ್ದ ಮೂರಕ್ಕು ಅಧಿಕ ಬೈಕುಗಳ ಸಹಿತ ವಿವಿಧ ಪರಿಕರಗಳು ನಷ್ಟವಾಗಿದೆ. ಮೇಲ್ನೋಟಕ್ಕೆ ನಷ್ಟದ ಪ್ರಮಾಣ 10 ಕೋಟಿಗೂ ಅಧಿಕ ಎನ್ನಲಾಗುತ್ತಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಶ್ರೀಗುರು, ಮೂಕಾಂಬಿಕಾ, ಪ್ರಿಯದರ್ಶಿನಿ, ಯಕ್ಷೇಶ್ವರಿ, ಶ್ರೀ ಮಂಜುನಾಥ, ಸೀ ಫರ್ಲ್, ಮಧುಶ್ರೀ, ಗುರುಪ್ರಸಾದ್, ಜಲರಾಣಿ ಹೆಸರಿನ ಬೋಟುಗಳು ಅಗ್ನಿಗಾಹುತಿಯಾಗಿದೆ. ಅಣ್ಣಪ್ಪ ಸ್ವಾಮಿ ಹೆಸರಿನ ದೋಣಿಗೆ‌ ಸಂಬಂಧಿಸಿದ 50 ಲಕ್ಷ ಮೌಲ್ಯದ ಬಲೆ ಸೆಟ್ ಹಾಗೂ ಒಂದಷ್ಟು ಸಣ್ಣ ದೋಣಿಗಳು ಹಾನಿಗೀಡಾಗಿದೆ‌. ಕುಂದಾಪುರ, ಬೈಂದೂರು, ಉಡುಪಿಯಿಂದ ಅಗ್ನಿಶಾಮಕ ದಳದ ನಾಲ್ಕು ವಾಹನಗಳು, 4 ಪಂಪ್ ಸೆಟ್ ಮೂಲಕ ನದಿಯಿಂದ ನೀರು, ಖಾಸಗಿ ವಾಹನಗಳಲ್ಲಿ ಟ್ಯಾಂಕ್ ಮೂಲಕ ನೀರು ಉಪಯೋಗಿಸಿಕೊಂಡು ಮೀನುಗಾರರು, ಸಾರ್ವಜನಿಕರು, ಪೊಲೀಸರು ಅಗ್ನಿ ಹತೋಟಿಗೆ ತರಲು ಹರಸಾಹಸ ಪಟ್ಟರು.

ಕುಂದಾಪುರ ಉಪವಿಭಾಗಾಧಿಕಾರಿ ರಶ್ಮೀ ಎಸ್.ಆರ್., ಡಿವೈಎಸ್ಪಿ ಬೆಳ್ಳಿಯಪ್ಪ, ಬೈಂದೂರು ವೃತ್ತನಿರೀಕ್ಷಕ ಸವಿತ್ರತೇಜ್, ಮೀನುಗಾರಿಕೆ ಇಲಾಖೆ ಉಪನಿರ್ದೇಶಕಿ ಅಂಜನಾದೇವಿ, ಗಂಗೊಳ್ಳಿ ಠಾಣಾ ಪೊಲೀಸರು, ಕರಾವಳಿ ಕಾವಲು ಪಡೆ, ಕಂದಾಯ, ಮೆಸ್ಕಾಂ ಇಲಾಖೆಯವರಿದ್ದರು.

Comments are closed.