ಕುಂದಾಪುರ: ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ನ.20ರಂದು ಹೆರಿಗೆ ವೇಳೆ ನವಜಾತ ಶಿಶು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸಂಜೆಯಿಂದ ನಡೆಯುತ್ತಿದ್ದ ಅಹೋರಾತ್ರಿ ಪ್ರತಿಭಟನೆ ಮಂಗಳವಾರ ಮಧ್ಯಾಹ್ನದ ವೇಳೆಗೆ ತಾತ್ಕಾಲಿಕವಾಗಿ ಅಂತ್ಯಗೊಂಡಿದೆ.
ಸೋಮವಾರ ಸಂಜೆಯಿಂದ ಅಹೋರಾತ್ರಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಯಶವಂತ ಗಂಗೊಳ್ಳಿ, ಕರುಳಬಳ್ಳಿ ಸುತ್ತಿಕೊಂಡು ಮಗು ಸಾವನ್ನಪ್ಪಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ನಾವು ಪ್ರಕರಣ ದಾಖಲಿಸುತ್ತೇವೆ ಎಂದರೆ ಮುಂದೆ ನಿಮಗೆ ತೊಂದರೆಯಾಗುತ್ತದೆ ಎಂದು ನಮ್ಮನ್ನು ಬೆದರಿಸುವ ಪ್ರಯತ್ನ ನಡೆಸಿದ್ದಾರೆ. ಹಿಂದೆಯೂ ಅನೇಕ ಪ್ರಕರಣಗಳಾದಾಗ ಅವರನ್ನು ಬೆದರಿಸಿ ಪ್ರಕರಣ ದಾಖಲಾಗದಂತೆ ನೋಡಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಹಿಂದೆಯೂ ಈ ರೀತಿಯ ಪ್ರಕರಗಳು ನಡೆದಾಗ ನ್ಯಾಯ ಸಿಕ್ಕಿಲ್ಲ. ಜಿಲ್ಲಾಧಿಕಾರಿ, ಎಸ್ಪಿ, ಡಿಎಚ್ಓ ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಒಂದು ವಾರದ ಮಟ್ಟಿಗೆ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ. ಮಾತು ಉಳಿಸಿಕೊಂಡಿಲ್ಲ ಎಂದರೆ ಮತ್ತೆ ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಒಂದು ವರ್ಷದಲ್ಲಿ ಹೀಗೆಯೇ ಬೆಳಕಿಗೆ ಬಾರದ ಸಾಕಷ್ಟು ಪ್ರಕರಣಗಳಿವೆ. ಅವೆಲ್ಲವನ್ನೂ ತನಿಖೆ ನಡೆಸಿ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಆರೋಗ್ಯ ಇಲಾಖೆ ವಿಭಾಗೀಯ ಜಂಟಿ ನಿರ್ದೇಶಕಿ ಡಾ. ರಾಜೇಶ್ವರಿ, ಜಿ.ಪಂ ಸಿಇಓ ಪ್ರಸನ್ನ ಕುಮಾರ್, ತಹಸೀಲ್ದಾರ್ ಶೋಭಾ ಲಕ್ಷ್ಮೀ ಎಚ್.ಎಸ್, ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೇಮಾನಂದ, ತಾಲೂಕು ಆಸ್ಪತ್ರೆ ಮುಖ್ಯ ಆಡಳಿತ ಶಸ್ತ್ರ ಚಿಕಿತ್ಸಕ ಡಾ. ರಾಬರ್ಟ್ ರೆಬೆಲ್ಲೋ ಇದ್ದರು.
ಬಂದೋಬಸ್ತ್: ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ಕುಂದಾಪುರ ನಗರ ಠಾಣಾ ನಿರೀಕ್ಷಕ ನಂದ ಕುಮಾರ್, ಪಿಎಸ್ಐ ಪ್ರಸಾದ್ ಕುಮಾರ್ ಹಾಗೂ ವಿವಿಧ ಠಾಣೆ ಪಿಎಸ್ಐಗಳು, ಸಿಬ್ಬಂದಿ ಪ್ರತಿಭಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು ಡಿಎಆರ್ ವಾಹನ ನಿಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗಂಗೊಳ್ಳಿ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಸದಸ್ಯರಾದ ಬಸವ ಖಾರ್ವಿ, ನಿರ್ಮಲಾ ಪೂಜಾರಿ, ತಾ.ಪಂ ಮಾಜಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಭಾಗದ ಪ್ರಮುಖರಾದ ಯಶವಂತ್ ಗಂಗೊಳ್ಳಿ, ವಾಸುದೇವ ಗಂಗೊಳ್ಳಿ, ನವೀನ್ ಗಂಗೊಳ್ಳಿ, ಸದಾಶಿವ ಕಂಚುಗೋಡು, ಗೋಪಾಲ ಖಾರ್ವಿ ದಾವನಮನೆ, ದಿನೇಶ್ ಖಾರ್ವಿ, ರಾಘವೇಂದ್ರ ಗಾಣಿಗ, ಚಂದ್ರ ಖಾರ್ವಿ ಲೈಟ್ ಹೌಸ್, ಸೂರಜ್ ಖಾರ್ವಿ, ರಾಜು ಖಾರ್ವಿ ಮ್ಯಾಂಗನೀಸ್ ರಸ್ತೆ, ಕುಂದಾಪುರ ಪುರಸಭಾ ಸದಸ್ಯರಾದ ಸಂದೀಪ ಖಾರ್ವಿ, ಚಂದ್ರಶೇಖರ ಖಾರ್ವಿ, ಸಂತೋಷ್ ಶೆಟ್ಟಿ, ರಾಘವೇಂದ್ರ ಖಾರ್ವಿ, ಪ್ರಭಾಕರ ವಿ, ಪ್ರಮುಖರಾದ ಶಂಕರ್ ಅಂಕದಕಟ್ಟೆ, ರಾಜೇಶ್ ಕಾವೇರಿ, ಗಿರೀಶ್ ಕುಂದಾಪುರ, ಜಯಾನಂದ ಖಾರ್ವಿ, ಕೇಶವ ಭಟ್, ಪ್ರಕಾಶ್ ಖಾರ್ವಿ, ರತ್ನಾಕರ ಶೇರುಗಾರ್ ಉಪಸ್ಥಿತರಿದ್ದರು.
ಅಹೋರಾತ್ರಿ ನಡೆದ ಧರಣಿ, ಭರವಸೆ ಬಳಿಕ ವಾಪಾಸ್
ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞ ವೈದ್ಯರ ನಿರ್ಲಕ್ಷದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಸೋಮವಾರ ಸಂಜೆ ಆಸ್ಪತ್ರೆ ಎದುರು ಜಮಾಯಿಸಿದ ಪೋಷಕರು ಹಾಗೂ ಗಂಗೊಳ್ಳಿ ಗ್ರಾಮಸ್ಥರು, ಕುಂದಾಪುರ ನಾಗರಿಕರು ಆಕ್ರೋಶ ಹೊರಹಾಕಿದ್ದು ಸ್ಥಳಕ್ಕೆ ಡಿಎಚ್ಓ, ಡಿಸಿ ಬಾರದೇ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು. ರಾತ್ರಿ ಬಳಿಕ ಪ್ರತಿಭಟನಾಕಾರರ ಜೊತೆ ಬೈಂದೂರಿನ ಶಾಸಕ ಗುರುರಾಜ್ ಗಂಟಿಹೊಳೆ ನಿಂತು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಉಪವಿಭಾಗಾಧಿಕಾರಿ, ಡಿಎಚ್ಓ ಹಾಗೂ ತಹಸೀಲ್ದಾರ್ ಆಗಮಿಸಿ ಪ್ರತಿಭಟನಾನಿರತರ ಮನವೊಲಿಸಲು ಪ್ರಯತ್ನಿಸಿದರೂ ಪಟ್ಟು ಬಿಡದ ಪ್ರತಿಭಟನಾಕಾರರು ಅಹೋರಾತ್ರಿ ಮೌನ ಪ್ರತಿಭಟನೆ ನಡೆಸಿದರು. ಮಂಗಳವಾರ ಬೆಳಿಗ್ಗೆ ಆಸ್ಪತ್ರೆ ಎದುರು ಜಮಾಯಿಸತೊಡಗಿದ ಪ್ರತಿಭಟನಾಕಾರರು ವೈದ್ಯರ ಅಮಾನತಿಗೆ ಆಗ್ರಹಿಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ನಡೆಸಿದರು. ಶೀಘ್ರವೇ ತಂಡ ರಚಿಸಿ ವಾರದೊಳಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಪ್ರತಿಭಟನಾನಿರತರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು. ಈ ಮೊದಲು ಎಸ್ಪಿ, ಡಿಸಿಯವರು ನೊಂದ ಮಹಿಳೆಯನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.
ಎಲ್ಲಾ ಕನಸು ನುಚ್ಚು ನೂರಾಯಿತು: ಮೃತ ಶಿಶುವಿನ ತಂದೆ
ನ.16ರಂದು ಪತ್ನಿಗೆ ಟೆಸ್ಟ್ ಮಾಡಿಸಲು ಕರೆತಂದಾಗ ಸ್ಕ್ಯಾನಿಂಗ್ ಮಾಡುವ ಬಗ್ಗೆ ಕೇಳಿದ್ದು ವೈದ್ಯರು ನಿರಾಕರಿಸಿ ಕೇವಲ ತಪಾಸಣೆ ಮಾಡಿದ್ದರು. ಮಾರನೇ ದಿನ ಹೆರಿಗೆ ನೋವು ಕಾಣಿಸಿಕೊಂಡು ರಕ್ತಸ್ರಾವವಾಗಿದ್ದು ರಾತ್ರಿ ಆಸ್ಪತ್ರೆಗೆ ಕರೆತಂದು ದಾಖಲು ಮಾಡಲಾಯಿತು. ಅಂದು ಕೂಡ ಮುಖ್ಯ ಪ್ರಸೂತಿ ತಜ್ಞರಿರಲಿಲ್ಲ. ಮಾಮೂಲಿ ಹೆರಿಗೆ ನಡೆಸುವುದಾಗಿ ಎರಡು ದಿನ ಕಾಯಿಸಿದ್ದು ನ.20ರಂದು ಹೆರಿಗೆಯಾಗಿದ್ದು ಮಗು ಮೃತಪಟ್ಟ ಬಗ್ಗೆ ವೈದ್ಯರು ತಿಳಿಸಿ ಕರಳುಬಳ್ಳಿ ಸುತ್ತಿಕೊಂಡು ಘಟನೆ ನಡೆದಿದ್ದಾಗಿ ತಿಳಿಸಿದರು. ಶಸ್ತ್ರ ಚಿಕಿತ್ಸೆ ಮೂಲಕ ಪ್ರಸೂತಿಯಾಗಿದ್ದರೆ ಮಗು ಉಳಿಯುತ್ತಿತ್ತು. ಮದುವೆಯಾಗಿ 4 ವರ್ಷದ ಬಳಿಕ ಹುಟ್ಟಿದ ಮಗು. ನಾವು ಕಟ್ಟಿಕೊಂಡ ಕನಸು ನುಚ್ಚುನೂರಾಗಿದೆ. ವೈದ್ಯರ ಬೇಜವಬ್ದಾರಿಯಿಂದ ಈ ದುರ್ಘಟನೆ ನಡೆದಿದ್ದು 9 ತಿಂಗಳು ಹೊತ್ತು ಹೆತ್ತ ಪತ್ನಿ ನೊಂದಿದ್ದಾರೆ. ನಮಗಾದ ಪರಿಸ್ಥಿತಿ ಯಾರಿಗೂ ಆಗಬಾರದು.
-ಶ್ರೀನಿವಾಸ ಖಾರ್ವಿ (ಮೃತ ನವಜಾತ ಶಿಶುವಿನ ತಂದೆ)ನುರಿತರ ತನಿಖಾ ತಂಡ ರಚನೆ: ಡಿಸಿ
ಮಗು ಸಾವಿನ ಪ್ರಕರಣದಲ್ಲಿ ತನಿಖಾ ತಂಡ ರಚಿಸಿಕೊಂಡು ತನಿಖೆ ನಡೆಸಿ ವೈದ್ಯರ ನಿರ್ಲಕ್ಷವಿದ್ದರೆ ಕ್ರಮಕೈಗೊಳ್ಳುತ್ತೇವೆ. ಸ್ತ್ರೀ ತಜ್ಞರ ಸಂಖ್ಯೆ ವಿರಳ ಇದೆ. ಯಾವುದೇ ಒಬ್ಬ ವೈದ್ಯರ ಮೇಲೆ ಕ್ರಮಕೈಗೊಳ್ಳಬೇಕಾದರೆ ನಿಯಮಾನುಸಾರ ಕ್ರಮಕೈಗೊಳ್ಳಬೇಕು. ತನಿಖೆ ನಡೆಸಿ ಸರ್ಕಾರದ ಗಮನಕ್ಕೆ ತರಲಾಗುತ್ತದೆ. ತಾತ್ಕಾಲಿಕವಾಗಿ ಸಂಬಂಧಪಟ್ಟ ವೈದ್ಯರನ್ನು ಬೇರೆಡೆಗೆ ವರ್ಗಾಯಿಸುತ್ತೇವೆ. ಇಲ್ಲಿ ಬೇರೆ ವೈದ್ಯರ ನೇಮಕ ಮಾಡುತ್ತೇವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ತಾಯಿ, ಶಿಶುವಿನ ಮರಣ ಸಂಖ್ಯೆ ಕಡಿಮೆ ಇದೆ. ಆಗಬಾರದ ಘಟನೆ ಆಗಿ ಹೋಗಿದೆ. ನಿಯಮಾನುಸಾರ ಕ್ರಮ ಜರಗಿಸುತ್ತೇವೆ.
-ವಿದ್ಯಾಕುಮಾರಿ (ಉಡುಪಿ ಜಿಲ್ಲಾಧಿಕಾರಿ)ಕುಟುಂಬದವರು ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಿಯಮದನ್ವಯ ಆ ದೂರನ್ನು ಮೆಡಿಕಲ್ ಬೋರ್ಡ್ಗೆ ಹಸ್ತಾಂತರಿಸಿ ಅವರಿಂದ ವರದಿ ಬಂದ ಬಳಿಕ ಕಾನೂನು ಕ್ರಮಕೈಗೊಳ್ಳುತ್ತೇವೆ. ನಾವು ಕಾನೂನು, ನಿಯಮದಡಿ ಕೆಲಸ ಮಾಡುತ್ತಿದ್ದೇವೆ.
-ಡಾ. ಅರುಣ್ ಕೆ. (ಉಡುಪಿ ಜಿಲ್ಲಾ ಎಸ್ಪಿ)ಮಗು ಮೃತಪಟ್ಟಿದ್ದು ದುರದೃಷ್ಟಕರ. ಘಟನೆ ಕುರಿತು ಆರೋಗ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಬಗ್ಗೆ ಮಾತನಾಡಲಾಗುತ್ತದೆ. ಈ ಬಗ್ಗೆ ನಿಸ್ಪಕ್ಷಪಾತ ತನಿಖೆಯಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶೀಘ್ರ ಸಭೆ ನಡೆಸಿ ತಾಲೂಕು ಸಾರ್ವಜನಿಕ ಆಸ್ಪತ್ರೆ ಕುಂದುಕೊರತೆಗಳನ್ನು ಪರಿಶೀಲಿಸಿ ಕ್ರಮಗೈಗೊಳ್ಳುವ ಬಗ್ಗೆ ಉಸ್ತುವಾರಿ ಸಚಿವರ ಬಳಿ ಮನವಿ ಮಾಡಲಾಗುತ್ತದೆ.
– ದಿನೇಶ್ ಹೆಗ್ಡೆ (ಕಾಂಗ್ರೆಸ್ ಮುಖಂಡರು)
Comments are closed.