‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ
ಕುಂದಾಪುರ: ಕ್ರಿಯಾಶೀಲರಾಗಿ ಸಮಯದ ಕಟ್ಟುಪಾಡುಗಳಿಲ್ಲದೆ ಕೆಲಸ ನಿರ್ವಹಿಸುವ ಪೊಲೀಸರು ಹಾಗೂ ಪತ್ರಕರ್ತರದ್ದು ಒಂದು ರೀತಿಯ ಥ್ಯಾಂಕ್ಸ್ ಲೆಸ್ ಜಾಬ್. ಆದರೆ ಸಮುದಾಯದ ಹಿತದೃಷ್ಟಿಯಿಂದ ಇಬ್ಬರದು ಉತ್ತಮ ಕಾರ್ಯ. ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಇಬ್ಬರ ಪರಿಶ್ರಮವಿದೆ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಟಿ. ಸಿದ್ಧಲಿಂಗಪ್ಪ ಹೇಳಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕುಂದಾಪುರ, ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವದ ಅಂಗವಾಗಿ ಕನ್ನಡ ಶಾಲೆಗಳ ಉಳಿವಿಗಾಗಿ ಮತ್ತು ವಿದ್ಯಾರ್ಥಿಗಳ ಪ್ರೋತ್ಸಾಹಕ್ಕಾಗಿ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ‘ನಾ ಕಂಡಂತೆ ಪೊಲೀಸ್’ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಶನಿವಾರ ಕುಂದಾಪುರ ಬೋರ್ಡ್ ಹೈಸ್ಕೂಲಿನ ಕಲಾ ಮಂದಿರದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಸರಕಾರಿ ಶಾಲಾ ಮಕ್ಕಳಿಗೆ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ. ಕನ್ನಡ ಮಾತನಾಡುವುದರಿಂದ ಭಾವನೆ ಅರಿಯಲು ಸಾಧ್ಯ. ಕನ್ನಡ ಭಾಷೆಯಲ್ಲಿ ಕುಂದಾಪ್ರ ಕನ್ನಡ ವಿಶಿಷ್ಟ ಭಾಷೆ. ಬೇರೆ ಬೇರೆ ಕಡೆಗಳಲ್ಲಿ ಇಂತಹ ವಿಭಿನ್ನವಾದ ಭಾಷೆಗಳಿವೆ. ಗ್ರಾಮ್ಯ ಮಟ್ಟದಲ್ಲಿ ಕನ್ನಡ ಇಂದಿಗೂ ತನ್ನ ಛಾಪನ್ನು ಕಳೆದುಕೊಂಡಿಲ್ಲ. ಅದಕ್ಕೆ ಕುಂದಾಪ್ರ ಕನ್ನಡವೇ ಸಾಕ್ಷಿ. ಪೊಲೀಸ್ ಅಧಿಕಾರಿಗಳು ಸಹ ಬೇರೆ ಜಿಲ್ಲೆಗಳಿಂದ ಬಂದವರು ಸಹ ಕನ್ನಡ ಕಲಿತು ಜನರೊಂದಿಗೆ ವ್ಯವಹರಿಸುತ್ತಾರೆ ಎಂದವರು ಹೇಳಿದರು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಸರಕಾರಿ ಶಾಲೆಗಳು ಹಾಗೂ ಮಾತೃಭಾಷೆ ಉಳಿಸುವ ನಿಟ್ಟಿನಲ್ಲಿ ಹಾಗೂ ಸಮಾಜದ ಸದಾ ಕಾಳಜಿ ವಹಿಸುವ ಪೊಲೀಸರ ಬಗೆಗಿನ ವಿಷಯವನ್ನು ಆಯ್ದುಕೊಂಡಿರುವ ಪತ್ರಕರ್ತರ ಸಂಘದ ಆಯ್ಕೆ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸ್ಪರ್ಧೆಯ ಮೂಲಕ ಪೊಲೀಸರ ಬಗ್ಗೆ ಮಕ್ಕಳಿಗೆ ತಿಳಿಯುವ ಅವಕಾಶ ಒದಗಿಸಿಕೊಟ್ಟಿದ್ದಾರೆ. ಮಕ್ಕಳಲ್ಲಿ ವಿಭಿನ್ನವಾಗಿ ಯೋಚಿಸುವ, ಕ್ರಿಯಾಶೀಲತೆಯನ್ನು ಹೆಚ್ಚಿಸಲು ಸದಭಿರುಚಿ ಕಾರ್ಯಕ್ರಮ ಎಂದು ಕುಂದಾಪುರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಶೆಟ್ಟಿ ಹೇಳಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
ಕುಂದಾಪುರ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ., ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ರಜತ ಮಹೋತ್ಸವ ಸಮಿತಿ ಸಂಚಾಲಕ ಮೊಹಮ್ಮದ್ ಷರೀಫ್ ಮಾತನಾಡಿದರು.
ತೀರ್ಪುಗಾರರಾದ ಡಾ| ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಚೇತನ್ ಕುಮಾರ್ ಶೆಟ್ಟಿ ಕೋವಾಡಿ, ಲೇಖಕಿ ಪೂರ್ಣಿಮಾ ಕಮಲಶಿಲೆ ಹಾಗೂ ಹೆಸ್ಕತ್ತೂರು ಸರಕಾರಿ ಹಿ.ಪ್ರಾ. ಶಾಲಾ ಶಿಕ್ಷಕ ಅಶೋಕ ತೆಕ್ಕಟ್ಟೆ ಅನುಭವ ಹಂಚಿಕೊಂಡರು. ಬಹುಮಾನ ವಿಜೇತರಾದ ಪ್ರಗತಿ ಆರ್. ಅಮಿನ್, ಪ್ರತೀಕ್ಷಾ, ಹರ್ಷಿಣಿ ಅನಿಸಿಕೆ ವ್ಯಕ್ತಪಡಿಸಿದರು.
ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಲೋಕೇಶ್ ಆಚಾರ್ ತೆಕ್ಕಟ್ಟೆ ಉಪಸ್ಥಿತರಿದ್ದರು. ಸಂಘದ ಸದಸ್ಯ ಪ್ರಶಾಂತ್ ಪಾದೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಣೇಶ ಬೀಜಾಡಿ ವಂದಿಸಿದರು. ಪತ್ರಕರ್ತರಾದ ಶ್ರೀಕಾಂತ್ ಹೆಮ್ಮಾಡಿ ಬಹುಮಾನಿತರ ಪಟ್ಟಿ ವಾಚಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.
ಬಹುಮಾನ ವಿಜೇತರು
ಹೆಸ್ಕತ್ತೂರು ಸರಕಾರಿ ಪ್ರೌಢಶಾಲೆಯ ಪ್ರಗತಿ ಆರ್. ಅಮಿನ್ ಪ್ರಥಮ, ಬಸ್ರೂರು ಸರಕಾರಿ ಪ್ರೌಢಶಾಲೆಯ ಪ್ರತೀಕ್ಷಾ ದ್ವಿತೀಯ ಹಾಗೂ ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಹರ್ಷಿಣಿ ತೃತೀಯ ಬಹುಮಾನ ಪಡೆದಿದ್ದಾರೆ. ಕಾಳಾವರ ಸರಕಾರಿ ಪ್ರೌಢಶಾಲೆಯ ರಾಧಿಕಾ, ದೀಕ್ಷಾ, ಸಾಹಿತ್ಯ, ಆರ್ಡಿ- ಅಲ್ಬಾಡಿ ಸರಕಾರಿ ಪ್ರೌಢಶಾಲೆಯ ಶ್ರಾವ್ಯ, ಶಂಕರನಾರಾಯಣ ಸರಕಾರಿ ಪ.ಪೂ. ಕಾಲೇಜಿನ ಪ್ರೌಢಶಾಲಾ ವಿಭಾಗದ ಅನನ್ಯ, ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ಸ್ಪಂದನಾ ಉಳ್ಳೂರು, ಶ್ರೀಶಾಂತ್, ವಕ್ವಾಡಿ ಸರಕಾರಿ ಪ್ರೌಢಶಾಲೆಯ ಸೃಷ್ಟಿ, ಬಸ್ರೂರು ಸರಕಾರಿ ಪ್ರೌಢಶಾಲೆಯ ನವ್ಯಾ, ಕೋಟೇಶ್ವರ ಕೆಪಿಎಸ್ನ ಶ್ರೀಲಕ್ಷ್ಮಿ, ಕೆದೂರು ಸರಕಾರಿ ಪ್ರೌಢಶಾಲೆಯ ಅನುಶ್ರೀ, ಗಂಗೊಳ್ಳಿ ಸ್ಟೆಲ್ಲಾ ಮೇರಿಸ್ ಪ್ರೌಢಶಾಲೆಯ ಶ್ರಾವ್ಯ, ಕುಂದಾಪುರ ಸೈಂಟ್ ಮೇರಿಸ್ ಪ್ರೌಢಶಾಲೆಯ ಅರ್ಚನಾ ಸಮಾಧಾನಕರ ಬಹುಮಾನ ಗಳಿಸಿದ್ದಾರೆ. ಭಾಗವಹಿಸಿದ 99 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರದ ಜೊತೆಗೆ ಕಲಿಕಾ ಪರಿಕರಗಳ ಕಿಟ್ ನೀಡಿ ಪ್ರೋತ್ಸಾಹಿಸಲಾಯಿತು.
Comments are closed.