ಕರಾವಳಿ

ಪುತ್ರಿಯ ವಿವಾಹ ವಿನೂತನವಾಗಿ ನೆರವೇರಿಸಿದ ತಂದೆ; ಮದುವೆ ಮಂಟಪದಲ್ಲಿ ವಿಶೇಷ ವ್ಯವಸ್ಥೆ- ಮದುವೆಗೆ ಬಂದವರು ಫಿದಾ.!

Pinterest LinkedIn Tumblr

ಕುಂದಾಪುರ: ಮದುವೆ ಮರೆಯದ ಕ್ಷಣವಾಗಿ ಉಳಿಬೇಕು ಎಂದು ಬೇರೆಬೇರೆ ವ್ಯವಸ್ಥೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರಿದ್ದಾರೆ. ವಿಮಾನದಲ್ಲಿ ವಿವಾಹ, ಗಾಳಿಯಲ್ಲಿ ಮಾಂಗಲ್ಯ ಧಾರಣೆ, ಸಮುದ್ರದಾಳದಲ್ಲಿ ವಿವಾಹ ಬಂಧನ ಮೊದಲಾದಂತೆ ಥರಹೇವಾರಿ ಮದುವೆ ನಡೆದು ಹೋಗಿದೆ.

ಇಲ್ಲೊಬ್ಬರು ಮಗಳ ಮದುವೆ ಮರೆಯದ ಕ್ಷಣಕ್ಕಾಗಿ ವ್ಯವಸ್ಥೆಗಳಲ್ಲಿ ವಿನೂತನ ಬದಲಾವಣೆ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದ್ದಾರೆ. ಮದುವೆ, ಮಂತ್ರ, ತಾಳಿ ಹಾರ ಸಂಪ್ರದಾಯದಂತೆ ನಡೆದರೆ, ಮದುವೆ ವ್ಯವಸ್ಥೆಯಲ್ಲಿ ಅಚ್ಚರಿ ಬದಲಾವಣೆ ತರಲಾಗಿದೆ.
ಇಂತಾದ್ದೊಂದು ವಿನೂತನ ವ್ಯವಸ್ಥೆಗೆ ವೇದಿಕೆ ಆಗಿದ್ದು ಬೈಂದೂರು ತಾಲೂಕು, ನಾಗೂರು ಒಡೆಯರಮಠ ಶ್ರೀ ಗೋಪಾಲಕೃಷ್ಣ ಕಲಾಮಂದಿರ. ಮಂಜುನಾಥ ಉಡುಪ ಮತ್ತು ಅನ್ನಪೂರ್ಣಾ ಎಂ.ಉಡುಪ ಪುತ್ರಿ ಮನಸ್ವಿ, ಶಿವಮೊಗ್ಗ ವಿನೋಬಾ ನಗರ ಜೆ.ಆರ್.ಸತ್ಯನಾರಾಯಣ ಭಟ್ ಹಾಗೂ ಜೆ.ಎಸ್.ಸುಪ್ರಿತಾ ಭಟ್ ಪುತ್ರ ತೇಜಸ್ ವಿನೂತನ ವ್ಯವಸ್ಥೆಯಲ್ಲಿ ಬುಧವಾರ ಸತಿಪತಿಗಳಾದವರು.

ವಿವಾಹ ಸಭಾಭವದ ಹೊರಗೆ ವಿಶಾಲ ಜಾಗದಲ್ಲಿ ಶಾಮಿಯಾನದಡಿ ಹತ್ತು ಹಲವು ವಿನೂತ ವ್ಯವಸ್ಥೆಗಳು. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಹರಟೆಕಟ್ಟೆ, ಓದುಗರ ಚಾವವಡಿ (ಪತ್ರಿಕೆ ಸ್ಥಳಾಂತರಕ್ಕೆ ಅವಕಾಶವಿಲ್ಲ ಎನ್ನುವ ಕಂಡೀಶನ್), ಉಡಾವಣೆಗೆ ಸಿದ್ದವಾದ ರಾಕೆಟ್‌ಗಳು, ವ್ಯಂಗ್ಯ ಚಿತ್ರಗಳ ಸಾಲು, ವಿವಾಹ ಸಭಾಂಗಣ ದ್ವಾರದ ಬಳಿ ಊಟದ ಮೆನು, ಫಲಹಾರದ ಸಂಪೂರ್ಣ ಮಾಹಿತಿ, ಪುಸ್ತಕ ಪ್ರದರ್ಶನ ಮಾರಾಟ, ಓದುಗರ ಚಾವಡಿಯಲ್ಲಿ ಎಲ್ಲಾ ದಿನಪತ್ರಿಕೆಗಳ ಲಭ್ಯತೆ, ಚಿನಕುರಳಿ ಪ್ರಪಂಚ, ದಿಬ್ಬಣದಲ್ಲಿ ಯಕ್ಷಗಾನ ವೇಷ, ಮಾನಿನಿಯರ ಮಾತಿನ ಮಂಟಪ,
ಊಟದ ನಂತರ ತೂಕದ ಅಳತೆ, ಭೋಜನ ನಂತರೆ ತಲೆ ದಿಂಬಿನ ಜೊತೆ ಶಯನಾಸನ! ಚುನಾವಣೆ ಗುರುತು ಚೀಟಿ, ಆಧಾರ ಕಾರ್ಡ್, ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಆರೋಗ್ಯ ದೃಢೀಕರಣ.

ಲಕ್ಕಿಡಿಪ್ ಗೆದ್ದವರಿಗೆ ರಾಜಮರ್ಯಾದೆ :
ಲಕ್ಕಿಡಿಪ್ ಹೆಸರಲ್ಲಿ ಮದುವೆಗೆ ಬಂದವರಿಗೆ ಕೆಂಪು ಚೀಟಿ ನೀಡಿ ಲಕ್ಕಿಡಿಪ್ ಟಿಕೆಟ್ ವಿತರಣೆ. ಮದುವೆಗೆ ಬಂದ ಎಲ್ಲರಿಗೂ ಸಿಕ್ಕ ಟಿಕೆಟ್ ನೀಡಲಾಗಿತ್ತು. ಮಧ್ಯಾಹ್ನ ಲಕ್ಕಿಡಿಪ್ ಡ್ರಾ ಮಾಡಿ ಅದೃಷ್ಟವಂತರ ಘೋಷಣೆ. ಲಕ್ಕಿಡಿಪ್ ವಿಜೇತರ ವಿವಾಹ ಸಭಾಂಗಣದ ದ್ವಾರ ಬಾಗಿಲಿಂದ ಛತ್ರಚಾಮರಾಧಿಗಳ ಜೊತೆ ವಿನ್ನರ್ ವಿವಾಹ ಮಂಟಕ್ಕೆ ಕರೆತಂದು ವಿಶೇಷ ಬಹುಮಾನ ನೀಡಿ ಸತ್ಕರಿಸಲಾಯಿತು. ಲಾಟರಿ ವಿಜೇತ ಪುರುಷರಿಗೆ ಪಂಚೆ, ಶಾಲು ಹಣ್ಣು ಹಂಪಲು ನೀಡಿ ಗೌರವಿಸಿದರೆ, ಮಹಿಳೆಯರಿಗೆ ಫಲತಾಂಬೂಲ, ಸೀರೆ ನೀಡಿ ಗೌರವಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಾಯಿತು.

ಮೋದಿ ಬ್ಯಾನರ್..!
ಮದುವೆ ಮನೆಗೆ ಪ್ರವೇಶ ದ್ವಾರದಲ್ಲಿ ಹಾಕಿದ ಮೋದಿ ಬ್ಯಾನರ್ ವ್ಯವಸ್ಥೆಯ ಮೊದಲ ಅಚ್ಚರಿ. ಒಂದು ಬದಿಯಲ್ಲಿ ತಲೆಗೆ ರುಮಾಲು ಸುತ್ತಿ ಕೈಮುಗಿದ ಭಂಗಿಯಲ್ಲಿ ಮೋದಿ ಚಿತ್ರವಿದ್ದರೆ, ಮತ್ತೊಂದು ಕಡೆ ವಧೂವರರನ್ನು ಹರಸಿ, ಮೋದಿಯನ್ನು ಮತ್ತೊಮ್ಮೆ ಮೆರಸಿ ಎನ್ನುವ ನುಡಿಕಟ್ಟು ಮೋದಿ ಬೆಂಬಲಿಗರಿಗೆ ಖುಷಿ ಕೊಟ್ಟಿತು. ಇನ್ನು ಕಲ್ಯಾಣ ಮಂಟಪ ಪ್ರವೇಶದ ಬಳಿ ಅಲಂಕರಿಸಿದ ತೊಟ್ಟಿಲು, ಅದರ ನೆತ್ತಿಯಲ್ಲಿ ತೂಗುಹಾಕಿದ ಚಿತ್ರ ಮತ್ತೊಂದು ಅಚ್ಚರಿ. ವಧೂವವರ ಬ್ಲಾಕ್ ಎಂಡ್ ವೈಟ್ ಚಿತ್ರದ ಮೇಲ್ಗಡೆ ನಮ್ಮ ಹೊಸಾ ಚಿತ್ರದ ಬಿಡುಗಡೆ ದಿನಾಂಕ ನಿರೀಕ್ಷಿಸಿ! ಚಂದ್ರಯಾನದ ಯಶಸ್ಸಿನಿಂದ ಪ್ರೇರಿತ ಚಂದ್ರಯಾನಕ್ಕೆ ಸಿದ್ದವಾದ ಉಡುಪ ರಾಕೆಟ್. 75 ಕೆಜಿ ಒಳಗಿನವರಿಗೆ ಮಾತ್ರ ಪ್ರವೇಶದ ಕಂಡೀಶನ್. ಸಭಾಭವನದ ಸುತ್ತಾಮುತ್ತಾ ಉತ್ತರ ಭೂಪನ (ಬೀಚಿ) ಪಂಚಿಂಗ್ ಡೈಲಾಗ್ ಮತ್ತೊಂದು ಅಚ್ಚರಿ. ಇನ್ನು ಮದುವೆ ಮನೆಯಲ್ಲಿ ಚಟಗಳಿಗೂ ಮಣೆ ಹಾಕಲಾಗಿದೆ. ಕವಳ (ಎಲೆ ಅಡಕೆ) ಗಂಡಸರಿಗೆ ನಶ್ಯ, ಹೆಂಗಸರಿಗೆ ನಶ್ಯ, ಪುರೋಹಿತರಿಗೆ ನಂಜಿನಗೂಡು ನಶ್ಯ.

ಮದುವೆ ಎಲ್ಲರ ಜೀವನದಲ್ಲೂ ಮರೆಯದ ಕ್ಷಣವಾಗಿದ್ದು, ಮಗಳ ಮದುವೆ ವಿನೂತನವಾಗಿ ಮಾಡಬೇಕು ಎನ್ನುವ ಕಲ್ಪನೆಯೇ ಈ ವ್ಯವಸ್ಥೆಗೆ ಪ್ರೇರಣೆ, ಮದುವೆ ಸಮಾರಂಭದಲ್ಲಿ ಬೇರೆ ಬೇರೆ ಕಡೆಯಿಂದ ಬರುವವರಿರುತ್ತಾರೆ, ಸಂಬಂಧಿಕರು, ಸ್ನೇಹಿತರು ಅಪರೂಪಕ್ಕೆ ಭೇಟಿ ಮಾಡುವುದರಿಂದ ಅವರು ಪ್ರತ್ಯೇಕ ಕೂತು ಮನಸಾರೆ ಹರಟೆ ಹೊಡೆಯಲು ಮಹಿಳೆ ಮತ್ತು ಪರಿಷರಿಗೆ ಪ್ರತ್ಯೇಕ ಹರಟೆಕಟ್ಟಿ ನಿರ್ಮಿಸಿ ಟೈಮ್ ಪಾಸ್ ಮಾಡುವುದಕ್ಕೆ ನೆಲಗಡಲೆ ಕರಿದ ಹಪ್ಪಳ ಇಡಲಾಯಿತು. ಮದುವೆ ವದೂವರರಿಗೆ ಹರಸುವುದು ಮಂತ್ರಗಳು ಮಾಮೂಲಾಗಿದ್ದು, ಅದಲ್ಲದೆ ಉಳಿದ ವ್ಯವಸ್ಥೆ ನೆನಪಾಗಿ ಉಳಿಯಲಿ ಎನ್ನುವ ಉದ್ದೇಶವಾಗಿದೆ.
-ಮಂಜುನಾಥ ಉಡುಪ, ಮದುವೆಗೆ ವಿನೂತನ ವ್ಯವಸ್ಥೆ ಮಾಡಿದ ವಧುವಿನ ತಂದೆ

Comments are closed.