ಉಡುಪಿ: ಕೋಟ ಠಾಣೆ ಉಪನಿರೀಕ್ಷಕರಾಗಿದ್ದು, ಪ್ರಸ್ತುತ ಒಒಡಿ ಮೇಲೆ ಕಾರ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಂಭುಲಿಂಗಯ್ಯ ಅವರನ್ನು ಲಂಚ ಪ್ರಕರಣ ಆರೋಪಕ್ಕೆ ಸಂಬಂಧಿಸಿ ಅಮಾನತುಗೊಳಿಸಿರುವುದಾಗಿ ತಿಳಿದು ಬಂದಿದೆ.
ಕಾಲೇಜಿನ ಆಡಳಿತ ಮಂಡಳಿಯೊಂದರ ಗಲಾಟೆಗೆ ಸಂಬಂಧಿಸಿದಂತೆ ದೂರುದಾರರಿಂದ ಲಂಚ ಪಡೆದಿರುವುದಾಗಿ ಸಾಮಾಜಿಕ ಕಾರ್ಯಕರ್ತರೋರ್ವರು ವೀಡಿಯೋ ಮೂಲಕ ದೂರಿದ್ದರು. ಈ ಕುರಿತು ತನಿಖೆ ನಡೆಸಿ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಅಚ್ಲಾಡಿಯ ಖಾಸಗಿ ಕಾಲೇಜಿನಲ್ಲಿ ಆಡಳಿತ ಮಂಡಳಿಯೊಳಗೆ ಗಲಾಟೆಗೆ ಸಂಬಂಧಿಸಿದಂತೆ ಮಧು ಭಾಸ್ಕರ್ ಹಾಗೂ ಮಹಿಮಾ ಮಧು ಭಾಸ್ಕರ್ ಅವರು ಪರಸ್ಪರ ದೂರು ದಾಖಲಿಸಿಕೊಂಡಿದ್ದರು. ಈ ವಿಚಾರವಾಗಿ ಮಧು ಭಾಸ್ಕರ್ ವಿರುದ್ದ ದೂರು ದಾಖಲಿಸಲು ಹಾಗೂ ಮಹಿಮಾ ವಿರುದ್ದದ ದೂರಿಗೆ ಬಿ.ರಿಪೋರ್ಟ್ ನೀಡುವುದಾಗಿ ಆಗ ಠಾಣಾಧಿಕಾರಿಯಾಗಿದ್ದ ಶಂಭು ಲಿಂಗಯ್ಯ ಲಂಚ ಪಡೆದಿದ್ದರು. ಅದರಲ್ಲೂ ಹತ್ತಿರದ ಸಂಬಂಧಿಯೋರ್ವರ ಖಾತೆಗೆ ಸ್ವಲ್ಪ ಮೊತ್ತದ ಹಣ ವರ್ಗಾಯಿಸಿಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳನ್ನು ನೀಡಲು ಸಿದ್ಧವಿದ್ದು ಠಾಣಾಧಿಕಾರಿಗಳನ್ನು ಅಮಾನತುಗೊಳಿಸಬೇಕು ಎಂದು ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಮುಖ ಎನ್ನಲಾದ ದಿನೇಶ್ ಗಾಣಿಗ ಕೋಟ ವೀಡಿಯೋ ಮೂಲಕ ಎಸ್.ಪಿ ಅವರನ್ನು ವಿನಂತಿಸಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿತ್ತು.
ಶಂಭುಲಿಂಗಯ್ಯ ಅವರನ್ನು ಈ ಹಿಂದೆ ಅಶಿಸ್ತಿನ ಕಾರಣಕ್ಕೆ ಒ.ಒ.ಡಿ ಮೇಲೆ ಕೋಟದಿಂದ ಕಾರ್ಕಳಕ್ಕೆ ನಿಯೋಜಿಸಲಾಗಿತ್ತು.
Comments are closed.