ಪ್ರಮುಖ ವರದಿಗಳು

ಲೋಕಸಭೆಯಲ್ಲಿ ಭಾರೀ ಭದ್ರತಾ ವೈಫಲ್ಯ: ಸಂಸತ್ ಭವನ ಒಳ-ಹೊರಗೆ ಆತಂಕ ಸೃಷ್ಟಿಸಿದ ನಾಲ್ವರು ದುಷ್ಕರ್ಮಿಗಳು ವಶಕ್ಕೆ

Pinterest LinkedIn Tumblr

ನವದೆಹಲಿ: ದುಷ್ಕರ್ಮಿಗಳಿಬ್ಬರು ಸಂಸತ್ತಿನ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸದಸ್ಯರ ಪೀಠಕ್ಕೆ ಜಿಗಿದು ಹಳದಿ ಬಣ್ಣದ ಆಶ್ರುವಾಯು ಸಿಡಿಸುತ್ತಾ ಓಡಾಡಿದ ಘಟನೆ ಬುಧವಾರ ಲೋಕಸಭೆಯಲ್ಲಿ ನಡೆದಿದೆ.

ಭಾರೀ ಭದ್ರತಾ ಲೋಪವುಂಟಾಗಿ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಸದನವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಯಿತು. ಸಂದರ್ಶಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದು ಬೆಂಚುಗಳ ಮೇಲೆ ಘೋಷಣೆ ಕೂಗುತ್ತಾ ಇಬ್ಬರು ಹಾರುತ್ತಿರುವುದು ಕಂಡುಬಂದಿತು.

ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳುವಂತೆ ಇಬ್ಬರು ಸಾರ್ವಜನಿಕ ಗ್ಯಾಲರಿಯಿಂದ ಜಿಗಿದಿದ್ದಾರೆ. ಶೂನ್ಯ ವೇಳೆಯಲ್ಲಿ ಒಬ್ಬರು ಅಶ್ರುವಾಯು ಎರಚುತ್ತಾ ಸಾರ್ವಜನಿಕ ಗ್ಯಾಲರಿಯಿಂದ ಜಿಗಿದರೆ ಮತ್ತೊಬ್ಬ ಲೋಕಸಭೆಯ ಬೆಂಚುಗಳ ಮೇಲೆ ಹಾರುತ್ತಿರುವುದು ಕಂಡುಬಂದಿದೆ ಎಂದು ಚೌಧರಿ ಹೇಳಿದರು.

ಕೂಡಲೇ ಇಬ್ಬರು ವ್ಯಕ್ತಿಗಳನ್ನು ಅಲ್ಲಿದ್ದ ಲೋಕಸಭಾ ಸದಸ್ಯರು ಮತ್ತು ಸಿಬ್ಬಂದಿ ನಿಯಂತ್ರಿಸಲು ಹೋಗಿ ತಳ್ಳಾಟ ನಡೆದಿದೆ. ಲೋಕಸಭಾಧ್ಯಕ್ಷರ ಸ್ಥಾನದಲ್ಲಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರವಾಲ್ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದರು.

ಇದು ಭದ್ರತಾ ಉಲ್ಲಂಘನೆಯಾಗಿದೆ. ಇಂದು ನಾವು 2001 ರಲ್ಲಿ ನಡೆದ ಸಂಸತ್ತಿನ ದಾಳಿಯ 22ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ದುರದೃಷ್ಟಕರ ಎಂದು ಅಧೀರ್ ರಂಜನ್ ಚೌಧರಿ ಹೇಳಿದರು.

ನಾಲ್ವರು ಪೊಲೀಸರ ವಶಕ್ಕೆ: ಘಟನೆಗೆ ಸಂಬಂಧಿಸಿದಂತೆ ಸದನದೊಳಗೆ ನುಗ್ಗಿ ದಾಂಧಲೆ ನಡೆಸಿದ ಇಬ್ಬರು ಹಾಗೂ ಹಳದಿ ಬಣ್ಣದ ಹೊಗೆಯನ್ನು ಹೊರಸೂಸುವ ಕ್ಯಾನ್‌ಗಳನ್ನು ಹೊತ್ತು ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆ ಸೇರಿ ಮತ್ತೊಬ್ಬ ಯುವಕ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸಾಗರ್ ಶರ್ಮಾ, ಮನೋರಂಜನ್, ನೀಲಂ ಮತ್ತು ಅಮೋಲ್ ಶಿಂಧೆ ಎಂದು ವಶಕ್ಕೆ ಪಡೆದ ಆರೋಪಿಗಳು ಎಂದು ಗುರುತಿಸಲಾಗಿದ್ದು, ನಾಲ್ವರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ನಂತರ ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

 

Comments are closed.