ನವದೆಹಲಿ: ಸಂಸತ್ ಭವನದ ಭದ್ರತಾಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಸೆಲ್ ಐದನೇ ಆರೋಪಿಯನ್ನು ಗುರುವಾರ (ಡಿ.14) ಬೆಳಗ್ಗೆ ಬಂಧಿಸಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
2001ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ್ದ ಸಂದರ್ಭದ 9 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯ 22ನೇ ವರ್ಷವಾದ ದಿನ(ಬುಧವಾರ ಡಿ.13)ದಂದೇ ಕಲಾಪ ನಡೆಯುತ್ತಿದ್ದಾಗಲೇ ಇಬ್ಬರು ಸಂಸತ್ ನೊಳಗೆ ನುಗ್ಗಿ ದುಷ್ಕೃತ್ಯ ಎಸಗಿದ್ದರು. ಈ ಪ್ರಕರಣದಲ್ಲಿ ಆರು ಮಂದಿ ಶಾಮೀಲಾಗಿದ್ದು, ಅದರಲ್ಲಿ ನಾಲ್ವರನ್ನು ಬುಧವಾರ ಬಂಧಿಸಲಾಗಿತ್ತು.
ತನಿಖೆಯಲ್ಲಿ ಆರು ಮಂದಿ ಆರೋಪಿಗಳು ನಾಲ್ಕು ವರ್ಷಗಳ ಹಿಂದೆಯೇ ಪರಿಚಿತರಾಗಿದ್ದು, ಡಿ.13ರಂದು ಸಂಸತ್ ಭವನದೊಳಕ್ಕೆ ನುಗ್ಗಿ ದುಷ್ಕೃತ್ಯ ಎಸಗುವ ಬಗ್ಗೆ ಯೋಜನೆ ರೂಪಿಸಿರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ಸಂವಹನ ನಡೆಸುತ್ತಿದ್ದ ಆರು ಮಂದಿ, ಸಂಸತ್ ಕಲಾಪದ ವೇಳೆ ಒಳಹೋಗಿ ಹೊಗೆ ಬಾಂಬ್ ಎಸೆಯುವ ಕುರಿತು ಸ್ಕೆಚ್ ಹಾಕಿದ್ದರು.
ಪ್ರಕಣದಲ್ಲಿ ಮೈಸೂರು ಮೂಲದ ಮನೋರಂಜನ್, ಲಕ್ನೋದ ಇ-ರಿಕ್ಷಾ ಚಾಲಕ ಸಾಗರ್ ಶರ್ಮಾ, ಗುರುಗ್ರಾಮದ ಲಲಿತ್ ಝಾ, ಹರಿಯಾಣದ ನೀಲಂ, ಮಹಾರಾಷ್ಟ್ರ ಲಾತೂರ್ ನ ಅಮೋಲ್ ಶಿಂಧೆ ಹಾಗೂ ಗುರುಗ್ರಾಮದ ವಿಕ್ರಮ್ ಸೇರಿ ಆರು ಮಂದಿ ಆರೋಪಿಗಳು ಶಾಮೀಲಾಗಿದ್ದರು.
ಐದನೇ ಆರೋಪಿ ವಿಕ್ರಮ್ ಎಂಬಾತನನ್ನು ಬಂಧಿಸಲಾಗಿದ್ದು, ಲಲಿತ್ ಝಾ ಬಂಧನಕ್ಕೆ ಬಲೆ ಬೀಸಲಾಗಿದೆ. ಆರು ಮಂದಿ ಆರೋಪಿಗಳ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ವರದಿ ವಿವರಿಸಿದೆ.
ಆರೋಪಿಗಳ ವಿರುದ್ಧ ಅತಿಕ್ರಮ ಪ್ರವೇಶ, ಅಪರಾಧ ಸಂಚು, ಗಲಭೆ ಪ್ರಚೋದನೆ ಸಂಚು, ಯುಎಪಿಎ ಸೇರಿದಂತೆ ಭಯೋತ್ಪಾದನಾ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Comments are closed.