ಕರಾವಳಿ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡ್ಲಾಡಿ-ಬಾಂಡ್ಯದಲ್ಲಿ ಶಾಲಾ ವಾರ್ಷಿಕೋತ್ಸವ ‘ಕಾಮನಬಿಲ್ಲು’ ಸಂಭ್ರಮ

Pinterest LinkedIn Tumblr

ಕುಂದಾಪುರ: ಅಂಕ ಆಧಾರಿತ ಶಿಕ್ಷಣ ವ್ಯವಸ್ಥೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವ ಕೆಲಸವಾಗಬೇಕು. ಶಾಲಾ ಮಟ್ಟದಲ್ಲಿಯೇ ಜೀವನಕ್ರಮವನ್ನು ಕಲಿಸಬೇಕು. ಶಿಸ್ತು, ಸಂವಹನ, ವಿಧೇಯತೆಯ ಪಾಠವನ್ನು ಕಲಿಸಬೇಕೆಂದು ಕುಂದಾಪುರದ ಮಕ್ಕಳ ತಜ್ಞ ಡಾ. ಎಚ್.ಆರ್ ಹೆಬ್ಬಾರ್ ಹೇಳಿದರು.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡ್ಲಾಡಿ-ಬಾಂಡ್ಯದಲ್ಲಿ ವಕ್ವಾಡಿ ಗುರುಕುಲ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ‘ಕಾಮನಬಿಲ್ಲು’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯೆ ಎನ್ನುವುದು ವಿಸ್ತಾರವಾದ ಚಟುವಟಿಕೆ. ಮಕ್ಕಳಲ್ಲಿ ಪರಿಪೂರ್ಣತೆಯ ಬದುಕಿನ ಮಾರ್ಗದರ್ಶನ ನೀಡಿದಾಗ ಅವರು ಸತ್ಪ್ರಜೆಗಳಾಗುತ್ತಾರೆ. ಮಕ್ಕಳನ್ನು ಊರು, ಪ್ರದೇಶ, ಕುಟುಂಬಕ್ಕೆ ಸೀಮಿತವಾಗಿ ಬೆಳಸದೆ ಜಾಗತಿಕವಾಗಿ ಆಲೋಚಿಸುವ ಪರಿಸರ ಸೃಷ್ಟಿ ಮಾಡಬೇಕು. ಸೋಲು ಗೆಲುವಿನ ಸೋಪಾನ ಎಂಬ ಮನಸ್ಥಿತಿ ಮೂಡಿಸಿ ಆತ್ಮಸ್ಥೈರ್ಯ ಹೆಚ್ಚಿಸಬೇಕು. 8 ಮಕ್ಕಳಿದ್ದ ಗ್ರಾಮೀಣ ಭಾಗದ ಸರಕಾರಿ ಶಾಲೆ 184 ಮಕ್ಕಳು ದಾಖಲಾಗುವಷ್ಟು ಅಭಿವೃದ್ಧಿಯಾಗಲು ಗುರುಕುಲ ಸಮೂಹ ಸಂಸ್ಥೆಯು ಕಾರಣವಾಗಿದೆ ಎಂದು ಶ್ಲಾಘಿಸಿದರು.

ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಆಜ್ರಿ, ಕೊಡ್ಲಾಡಿ ಭಾಗದ ನಾಲ್ಕು ಗ್ರಾಮಗಳಿಗೆ ಏಕಶಾಲೆಯಾಗಿದ್ದ ಬಾಂಡ್ಯ ಶಾಲೆ ಶತಮಾನದ ಹೊಸ್ತಿಲಿನಲ್ಲಿದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದಾಗ ಊರಿನ ಶಾಲೆ ಮೇಲಿನ ಅಭಿಮಾನದಿಂದ, ಹಳೆ ವಿದ್ಯಾರ್ಥಿಯಾಗಿ ಋಣಸಂದಾಯ ಮಾಡುವ ನಿಟ್ಟಿನಲ್ಲಿ ಪೋಷಕರು ಹಾಗೂ ಸಮಾನಮನಸ್ಕರ ಜೊತೆಗೂಡಿ ಹಂತಹಂತವಾಗಿ ಅಭಿವೃದ್ಧಿ ಪಡಿಸಲಾಯಿತು. ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ಉಳಿವಿಗೆ ಶಿಕ್ಷಣ ಇಲಾಖೆಯ ಮುತುವರ್ಜಿ, ಇಚ್ಚಾಶಕ್ತಿ ಅಗತ್ಯ ಎಂದರು.

ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕಿ ಅನುಪಮಾ‌ ಎಸ್. ಶೆಟ್ಟಿ ಮಾತನಾಡಿ, ಅಂಕಾಧಾರಿತ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಆಧ್ಯತೆ ನೀಡಬೇಕಿದೆ. ಮಕ್ಕಳ ಆಸಕ್ತಿದಾಯಕ ಕ್ಷೇತ್ರದಲ್ಲಿ ಸ್ವಾತಂತ್ರ ನೀಡಬೇಕು. ಸಂಸ್ಕಾರ-ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಮನೆಯಿಂದಲೇ ಉತ್ತಮ ವಾತಾವರಣ ಸೃಷ್ಟಿಯಾಗಬೇಕು. ಹಿರಿಯರ ಆದರ್ಶ, ದಿನಚರಿ ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಕರೆಕೊಟ್ಟರು.

ಬೈಂದೂರು ವಲಯ ಶಿಕ್ಷಣಾಧಿಕಾರಿ ನಾಗೇಶ್ ನಾಯಕ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೈಂದೂರು ಅಧ್ಯಕ್ಷ ಶೇಖರ್ ಪೂಜಾರಿ, ಆಜ್ರಿ ಗ್ರಾ.ಪಂ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಬೈಂದೂರು ಕ್ಷೇತ್ರ ದೈಹಿಕ ಶಿಕ್ಷಣಾ ಪರಿವೀಕ್ಷಣಾಧಿಕಾರಿ ಚಂದ್ರಶೇಖರ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೃಷ್ಣ ಮಡಿವಾಳ, ಎಸ್.ಡಿ.ಎಂ.ಸಿ ಅಧ್ಯಕ್ಷ ರತ್ನಾಕರ ಆಚಾರ್ಯ ಇದ್ದರು.

ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯ ಕನ್ನಡ ಶಿಕ್ಷಕಿ ವಿಶಾಲ ಶೆಟ್ಟಿ ನಿರೂಪಿಸಿದರು. ಬಾಂಡ್ಯ ಸ.ಹಿ.ಪ್ರಾ ಶಾಲೆ ಮುಖ್ಯೋಪಾಧ್ಯಾಯ ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿ, ಶಾಲಾ ಸಹಶಿಕ್ಷಕರಾದ ಸ್ಮಿತಾ ಬಹುಮಾನ ಪಟ್ಟಿ ವಾಚಿಸಿ, ಸುಕುಮಾರ ಶೆಟ್ಟಿ ವಂದಿಸಿದರು.

Comments are closed.