ಕರಾವಳಿ

ತಾನು ಕಲಿತ ಕೆರಾಡಿ ಕನ್ನಡ ಶಾಲೆ ದತ್ತು ಪಡೆದ ನಟ ರಿಷಬ್ ಶೆಟ್ಟಿ; ರಿಷಬ್ ಫೌಂಡೇಶನ್‌ನಿಂದ ಕನ್ನಡ ಶಾಲೆಗಳ ಉಳಿಸಿ ಅಭಿಯಾನ

Pinterest LinkedIn Tumblr

ಕುಂದಾಪುರ: ತಾನು ಪ್ರಾಥಮಿಕ ಶಿಕ್ಷಣವನ್ನು ಕಲಿತ ಕೆರಾಡಿಯ ಸರಕಾರಿ ಹಿ.ಪ್ರಾ. ಕನ್ನಡ ಮಾಧ್ಯಮ ಶಾಲೆಯನ್ನು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಮುಂದಿನ ಐದು ವರ್ಷಗಳ ಅವಧಿಗೆ ದತ್ತು ಪಡೆದಿದ್ದಾರೆ.

ಸರಕಾರಿ ಹಿ.ಪ್ರಾ. ಶಾಲೆಯ ಕಾಸರಗೋಡು ಚಿತ್ರ ಮಾಡಿದಾಗಿನಿಂದಲೂ ಕನ್ನಡ ಶಾಲೆಗಳ ಉಳಿಸಿ, ಬೆಳೆಸಿ ಅಭಿಯಾನ ಕೈಗೊಂಡಿರುವ ಅವರು ಈಗ ತನ್ನ ಹುಟ್ಟೂರಿನ ಶಾಲೆಯ ಅಭಿವೃದ್ಧಿ ನಿಟ್ಟಿನಲ್ಲಿ ಪಣ ತೊಟ್ಟಿದ್ದಾರೆ.ಕೆರಾಡಿಯ ಈ ಶಾಲೆಯನ್ನು ದತ್ತು ಪಡೆಯುವ ಮೂಲಕ ಶಾಲೆಯ ಸಂಪೂರ್ಣ ಅಭಿವೃದ್ಧಿ ಜವಾಬ್ದಾರಿಯನ್ನು ರಿಷಬ್ ಫೌಂಡೇಶನ್‌ನಿಂದ ಮಾಡುವ ಯೋಜನೆಯನ್ನು ಅವರು ಹೊಂದಿದ್ದಾರೆ. ಇದರೊಂದಿಗೆ ಈ ಫೌಂಡೇಶನ್ ಮೂಲಕ ಕನ್ನಡ ಶಾಲೆ ಉಳಿಸಿ ಅಭಿಯಾನವನ್ನು ಸಹ ಅವರು ಕೈಗೊಂಡಿದ್ದಾರೆ.

ಕೆರಾಡಿ ಶಾಲೆಗೆ ಭೇಟಿ
ಕಾಂತಾರ ಪ್ರೀಕ್ವೆಲ್ ಚಿತ್ರದ ಚಿತ್ರೀಕರಣದ ಸಿದ್ಧತೆಯಲ್ಲಿ ತೊಡಗಿಸಿಕೊಂಡಿರುವ ರಿಷಬ್ ಶೆಟ್ಟಿ ಅವರು ಸದ್ಯ ಹುಟ್ಟೂರಾದ ಕೆರಾಡಿಯಲ್ಲಿಯೇ ಬೀಡು ಬಿಟ್ಟಿದ್ದಾರೆ. ರವಿವಾರ ತಾನು ಕಲಿತ ಶಾಲೆಗೆ ಭೇಟಿ ನೀಡಿದರು. ಶಾಲೆ ದತ್ತು ಪಡೆಯುವ ಬಗ್ಗೆ ಪೂರ್ವಭಾವಿ ನಡೆಸಿದ್ದಲ್ಲದೆ, ಅಲ್ಲಿನ ಮಕ್ಕಳು, ಶಿಕ್ಷಕರೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ತಾನು ಕಲಿತ ಶಾಲೆಯನ್ನು ದತ್ತು ಪಡೆಯುವುದಾಗಿ ಘೋಷಿಸಿದರು.

ಕೈರಂಗಳ ಶಾಲೆ ಅಭಿವೃದ್ಧಿ
ಸರಕಾರಿ ಹಿ.ಪ್ರಾ. ಶಾಲೆಯ ಕಾಸರಗೋಡು ಚಿತ್ರದ ಚಿತ್ರೀಕರಣಕ್ಕಾಗಿ ಬಂಟ್ವಾಳ ತಾಲೂಕಿನ ಕೈರಂಗಳ ಸರಕಾರಿ ಹಿ.ಪ್ರಾ. ಶಾಲೆಯನ್ನು ಬಳಸಿದ್ದರು. ಈ ಚಿತ್ರದಲ್ಲಿ ಗಡಿನಾಡ ಕನ್ನಡ ಶಾಲೆಗಳ ದುಸ್ಥಿತಿ ಬಗ್ಗೆ ಬೆಳಕು ಚೆಲ್ಲಿದ್ದರು. ಆಗ 42 ಮಕ್ಕಳಿದ್ದು, ಆ ಬಳಿಕ ಮಕ್ಕಳ ಸಂಖ್ಯೆ 17ಕ್ಕೆ ಕುಸಿದು, ಮುಚ್ಚುವ ಹಂತದಲ್ಲಿತ್ತು ಈ ಶಾಲೆ. ಆದರೆ ತನ್ನ ಸಿನೆಮಾಕ್ಕಾಗಿ ಬಳಸಿ, ಕೈ ಕಟ್ಟಿ ಕುಳಿತುಕೊಳ್ಳದೇ, ಈ ಕೈರಂಗಳ ಶಾಲೆಯನ್ನು ದತ್ತು ಪಡೆದು, ಮಾದರಿ ಶಾಲೆಯಾಗಿ ರೂಪಿಸುವ ಪಣ ತೊಟ್ಟಿದ್ದರು. ಅದರಂತೆ ಶಾಲೆಗೆ ಹೊಸ ರೂಪ ನೀಡಿ, ಮಕ್ಕಳ ಸಂಖ್ಯೆಯನ್ನು ವರ್ಷದೊಳಗೆ 84 ಕ್ಕೆ ಏರಿಸುವಲ್ಲಿ ಯಶಸ್ವಿಯಾಗಿದ್ದರು. ಈಗ ತಾನು ಕಲಿತ ಶಾಲೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ದತ್ತು ಪಡೆದುಕೊಳ್ಳಲು ಮುಂದಾಗಿದ್ದಾರೆ.

ಈ ಶಾಲೆಯಲ್ಲಿ 71 ಮಂದಿ ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿದ್ದು, ಒಬ್ಬರು ಖಾಯಂ ಶಿಕ್ಷಕರಿದ್ದಾರೆ. ಉಳಿದವರು ಗೌರವ ಶಿಕ್ಷಕರಾಗಿದ್ದಾರೆ. ನಾನು ಸ್ವತಃ ಈ ಶಾಲೆಯ ಸ್ಥಿತಿಗತಿಯನ್ನು ತಿಳಿದುಕೊಂಡಿದ್ದು, ರಿಷಬ್ ಫೌಂಡೇಶನ್ ಮುಂದಿನ ಶೈಕ್ಷಣಿಕ ವರ್ಷದಿಂದ 5 ವರ್ಷಗಳ ಅವಧಿಗೆ ಈ ಶಾಲೆಯನ್ನು ದತ್ತು ಪಡೆದಿದೆ. ಮೂಲ‘ತ ಸೌಕರ್ಯ ಸಹಿತ ಕೊಠಡಿ, ಪ್ರತೀ ತರಗತಿಗೆ ಶಿಕ್ಷಕರು, ಆವರಣ ಗೋಡೆ, ಅಗತ್ಯವಿದ್ದರೆ ವಾಹನದ ವ್ಯವಸ್ಥೆ ಕಲ್ಪಿಸಲಿದೆ. ಇದಲ್ಲದೆ ಎಲ್‌ಕೆಜಿ – ಯುಕೆಜಿ, ಸ್ಪೋಕನ್ ಇಂಗ್ಲಿಷ್ ಕಲಿಕೆ ಆರಂಭಿಸುವ ಯೋಜನೆಯಿದೆ ಎನ್ನುವುದಾಗಿ ರಿಷಬ್ ಶೆಟ್ಟಿ ಇದೇ ವೇಳೆ ತಿಳಿಸಿದ್ದಾರೆ.

ಬೈಂದೂರು ವಲಯದ ಕ್ಷೇತ್ರ ಶಿಕ್ಷಣಾಽಕಾರಿ ನಾಗೇಶ್ ನಾಯ್ಕ್ ಮಾತನಾಡಿ, ಕನ್ನಡ ಮಾತ್ರವಲ್ಲದೆ ದೇಶದ ಚಲನಚಿತ್ರ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ರಿಷಬ್ ಶೆಟ್ಟಿ ಅವರು ಕನ್ನಡ ಶಾಲೆಗಳ ಮೇಲೆತ್ತುವಿಕೆ ನಿಟ್ಟಿನಲ್ಲಿ ತಾನು ಕಲಿತ ಶಾಲೆಯನ್ನು ದತ್ತು ಪಡೆದಿರುವುದು ನಿಜಕ್ಕೂ ಮಾದರಿ ಕಾರ್ಯ. ಇಲಾಖೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಕೆರಾಡಿ ಗ್ರಾ.ಪಂ. ಅಧ್ಯಕ್ಷ ಸುದರ್ಶನ ಶೆಟ್ಟಿ, ಉಪಾಧ್ಯಕ್ಷೆ ಕುಸುಮಾ ಪೂಜಾರಿ, ವರಸಿದ್ಧಿ ವಿನಾಯಕ ಪ.ಪೂ. ಕಾಲೇಜಿನ ನಿರ್ದೇಶಕ ಪ್ರದೀಪ್ ಶೆಟ್ಟಿ, ವಕೀಲ ಪ್ರಸನ್ನ ಕುಮಾರ್ ಶೆಟ್ಟಿ ಕೆರಾಡಿ, ಸಿ.ಎ. ಬ್ಯಾಂಕ್ ನಿರ್ದೇಶಕ ಭುಜಂಗ ಶೆಟ್ಟಿ, ಉದ್ಯಮಿ ಬಿ.ಎಸ್. ಸುರೇಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಅ‘ಕ್ಷ ಸತೀಶ್ ಕೊಠಾರಿ ಸ್ವಾಗತಿಸಿ, ಶಾಲೆಯ ಮುಖ್ಯ ಶಿಕ್ಷಕ ವಿಜಯ ಶೆಟ್ಟಿ ನಿರೂಪಿಸಿದರು.

ಕನ್ನಡ ಶಾಲೆಗಳು ಮುಚ್ಚುತ್ತಿವೆ ಎನ್ನುವುದನ್ನು ಮನಗಂಡು ಸರಕಾರಿ ಹಿ.ಪ್ರಾ. ಶಾಲೆ ಕಾಸರಗೋಡು ಚಿತ್ರ ಮಾಡಿದೆ. ಅದರ ಮುಂದುವರಿದ ಭಾಗವಾಗಿ ಈ ಕೈಂಕರ್ಯವನ್ನು ನಮ್ಮಿಂದ ಕೈಗೊಂಡಿದ್ದೇವೆ. ಕನ್ನಡ ಶಾಲೆಗಳ ಉನ್ನತೀಕರಣ ರಿಷಬ್ ಫೌಂಡೇಶನ್‌ನ ಉದ್ದೇಶ. ಅದರ ಮೊದಲ ಹಂತವಾಗಿ ನನ್ನ ಹುಟ್ಟೂರಿನ ಶಾಲೆಯನ್ನು 5 ವರ್ಷಗಳ ಅವಧಿಗೆ ದತ್ತು ಪಡೆದಿದ್ದೇನೆ. ಇನ್ನು ಮುಂದಿನ ದಿನಗಳಲ್ಲಿ ಮುಚ್ಚುವ ಹಂತದಲ್ಲಿರುವ, ಹಿಂದುಳಿದಿರುವ ಕನ್ನಡ ಶಾಲೆಗಳನ್ನು ಉಳಿಸಿ, ಬೆಳೆಸುವ ಯೋಜನೆ ಈ ಫೌಂಡೇಶನ್‌ನದ್ದಾಗಿದೆ.
– ರಿಷಬ್ ಶೆಟ್ಟಿ, ನಟ, ನಿರ್ದೇಶಕ

Comments are closed.