ಕರಾವಳಿ

ಹಣ ಡ್ರಾ ಮಾಡಲು ಸಹಕರಿಸುವ ನೆಪದಲ್ಲಿ ಸಾರ್ವಜನಿಕರ ಎ.ಟಿ.ಎಂ. ಕಾರ್ಡ್ ಮೂಲಕ ಹಣ ಕಳವು ಮಾಡುತ್ತಿದ್ದ ಅಂತರ್ ರಾಜ್ಯ ಆರೋಪಿಗಳ ಬಂಧನ

Pinterest LinkedIn Tumblr

ಕುಂದಾಪುರ: ಎಟಿಎಂ ಕೇಂದ್ರದಿಂದ ಹಣ ತೆಗೆಯುಲು ಸಹಾಯ ಮಾಡುವ ನೆಪದಲ್ಲಿ ಗ್ರಾಹಕರ ಕಣ್ಣು ತಪ್ಪಿಸಿ ಅವರ ಎಟಿಎಂ ಕಾರ್ಡ್‌ ಬಳಸಿ ಹಣ ಎಗರಿಸಿದ ಮೂರು ಪ್ರತ್ಯೇಕ ಘಟನೆಗಳು ಬೈಂದೂರು ಠಾಣೆ ನಡೆದಿದ್ದು ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರ ತಂಡ ಹರಿಯಾಣ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಹರಿಯಾಣ ಬರ್ಸಿ ಜಟಾನ್ ಮೂಲದ ಸಂದೀಪ್ (36), ಹರಿಯಾಣ ಔರಂಗನರ್ ಮೂಲದ ರವಿ (27) ಬಂಧಿತ ಆರೋಪಿಗಳಾಗಿದ್ದು ಇವರಿಂದ 21 ಸಾವಿರ ನಗದು, 217 ಎಟಿಎಂ ಕಾರ್ಡ್, ಪಿಒಎಸ್ ಯಂತ್ರ, 2 ಮೊಬೈಲ್, ಒಂದು ಮೋಟಾರ್ ಸೈಕಲ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ಮೇಲೆ ವಿವಿಧ ರಾಜ್ಯಗಳಲ್ಲಿ 20ಕ್ಕೂ ಅಧಿಕ ಪ್ರಕರಣ ದಾಖಲಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಹುತೇಕ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ತಾನ ಕಡೆಗಳಲ್ಲಿ ಇಂತಹ ಕುಕೃತ್ಯಗಳನ್ನು ಎಸಗಿದ್ದು ವಿಚಾರಣೆಯಲ್ಲಿ ತಿಳಿದು ಬಂದಿದೆ ಎನ್ನಲಾಗಿದೆ.

ಶಿರೂರು ಭಾಗದ ಎರಡು ಎಟಿಎಂ ಹಾಗೂ ಬೈಂದೂರಿನ ಒಂದು ಎಟಿಎಂ ಕೇಂದ್ರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ನೈಜ ಗ್ರಾಹಕರಿಗೆ ಹಣ ವಿತ್ ಡ್ರಾ ಮಾಡಲು ಸಹಕಾರ ಮಾಡುವ ನೆಪದಲ್ಲಿ ಬೇರೆ ಎಟಿಎಂ ಕಾರ್ಡ್ ನೀಡಿ ಮೂರು ಕಡೆ ಒಟ್ಟು 2 ಲಕ್ಷದ 26 ಸಾವಿರ ಹಣ ಎಗರಿಸಿದ್ದರು. ಈ ಕುರಿತು ಮೂರು ಪ್ರತ್ಯೇಕ ಪ್ರಕರಣ ಬೈಂದೂರು ಠಾಣೆಯಲ್ಲಿ ದಾಖಲಾಗಿತ್ತು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ.ಸಿದ್ದಲಿಂಗಪ್ಪ, ಪರಮೇಶ್ವರ ಹೆಗಡೆ, ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು, ಬೈಂದೂರು ವೃತ್ತನಿರೀಕ್ಷಕ ಸವಿತ್ರ ತೇಜ್ ಸೂಚನೆಯಂತೆ, ಬೈಂದೂರು ಪೊಲೀಸ್ ಠಾಣೆ ಪಿಎಸ್ಐ ತಿಮ್ಮೇಶ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ಸುಜಿತ್‌ ಕುಮಾರ್, ಮಾಳಪ್ಪ, ಸೂರ ನಾಯ್ಕ್, ನಾಗಶ್ರೀ, ಶ್ರೀಧರ್ ಪಾಟೀಲ್ ಹಾಗೂ ಕುಂದಾಪುರ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಸಹಕರಿಸಿದ್ದರು.

Comments are closed.