ಕುಂದಾಪುರ: ಕಳೆದ ಒಂದೆರಡು ವರ್ಷಗಳಲ್ಲಿ ಮೊಬೈಲ್ ಕಳೆದುಕೊಂಡು ಸಿಇಐಆರ್ ಪೋರ್ಟಲ್ ಮೂಲಕ ಪೊಲೀಸರಿಗೆ ದೂರು ನೀಡಿದ್ದವರ 20 ಮೊಬೈಲ್ ಫೋನುಗಳನ್ನು ಕುಂದಾಪುರ ಪೊಲೀಸರು ಪತ್ತೆ ಮಾಡಿದ್ದು ಗುರುವಾರದಂದು ಪೊಲೀಸ್ ಠಾಣೆಯಲ್ಲಿ ಕಳೆದುಕೊಂಡ ಮೊಬೈಲ್ ವಾರೀಸುದಾರರಿಗೆ ಹಸ್ತಾಂತರಿಸಿದ್ದಾರೆ.
ಜಾರ್ಖಂಡ್, ಆಂಧ್ರದಿಂದ 2 ಫೋನ್ ವಾಪಾಸ್..!
ದಾಖಲಾದ ದೂರು ಆಧರಿಸಿ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ತನಿಖೆ ಕೈಗೊಂಡು 20 ಮೊಬೈಲ್ ಪತ್ತೆ ಮಾಡಿದ್ದಾರೆ. ಇದರಲ್ಲಿ ಒಂದು ಮೊಬೈಲ್ ಜಾರ್ಖಂಡ್ ಹಜಾರಿಭಾಗ್ ಎಂಬಲ್ಲಿ ಮತ್ತು ಇನ್ನೊಂದು ಮೊಬೈಲನ್ನು ಆಂಧ್ರಪ್ರದೇಶದ ಗೊಂಡ ಎಂಬಲ್ಲಿಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತೀರ್ಥಹಳ್ಳಿ, ಬೆಂಗಳೂರು ಸಹಿತ ಕರ್ನಾಟಕದ ವಿವಿಧೆಡೆಗಳಲ್ಲಿ ಉಳಿದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅನ್ ಬ್ಲಾಕ್ ಪ್ರಾತ್ಯಕ್ಷಿಕೆ:
ವಾರೀಸುದಾರರಿಗೆ ನೀಡಿದ ಮೊಬೈಲ್‌ಗಳನ್ನು ಸಿಇಐಆರ್ ಆಪ್ ಮೂಲಕ ಅನ್ ಬ್ಲಾಕ್ ಮಾಡಿ, ಮತ್ತೆ ಬಳಸುವ ಬಗ್ಗೆ ಸಾರ್ವಜನಿಕರಿಗೆ ಗುರುವಾರ ಬೆಳಿಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಪ್ರಾತ್ಯಕ್ಷಿಕೆ ನೀಡಿದರು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾರ್ಗದರ್ಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪರಮೇಶ್ವರ ಹೆಗಡೆ, ಎಸ್.ಟಿ ಸಿದ್ಧಲಿಂಗಪ್ಪ ನಿರ್ದೇಶನದಲ್ಲಿ ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ನೇತೃತ್ವದಲ್ಲಿ, ಕುಂದಾಪುರ ನಗರ ಠಾಣೆ ನಿರೀಕ್ಷಕ ನಂದಕುಮಾರ್, ಉಪ ನಿರೀಕ್ಷಕರಾದ ವಿನಯ್ ಎಂ. ಕೊರ್ಲಹಳ್ಳಿ ಹಾಗೂ ಪ್ರಸಾದ್ ಹಾಗೂ ಸಿಬ್ಬಂದಿಗಳಾದ ಸಿದ್ಧಪ್ಪ, ಮಾರುತಿ, ಅವಿನಾಶ ಕಾರ್ಯಾಚರಣೆ ನಡೆಸಿದ್ದರು.
ಕುಂದಾಪುರ ನಗರ ಠಾಣಾ ವ್ಯಾಪ್ತಿಯಲ್ಲಿ ದೂರುದಾರರು ಕಳೆದುಕೊಂಡ ಸುಮಾರು 2.50 ಲಕ್ಷ ಮೌಲ್ಯದ ಒಟ್ಟು 20 ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಿ ವಶಪಡಿಸಿಕೊಂಡು ವಾರೀಸುದಾರರಿಗೆ ಹಸ್ತಾಂತರಿಸಲಾಗಿದೆ. ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಪತ್ತೆ ಮಾಡಲು ಸಿಇಐಆರ್ ಪೋರ್ಟಲ್ ಪೊಲೀಸರಿಗೆ ಅನುಕೂಲವಾಗುತ್ತದೆ. ಅಲ್ಲದೆ ಸಾರ್ವಜನಿಕರು ಕಳೆದುಕೊಂಡ ಮೊಬೈಲ್ ಫೋನ್‌ಗಳ ದುರ್ಬಳಕೆಯನ್ನು ತಡೆಗಟ್ಟಲು ಸಹಕಾರಿ. ಸಾರ್ವಜನಿಕರು ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಲ್ಲಿ ಈ ಫೋರ್ಟಲ್ ಮೂಲಕ ದೂರು ನಮೂದಿಸಿ.
– ಡಾ. ಅರುಣ್ ಕೆ. (ಉಡುಪಿ ಜಿಲ್ಲಾ ಎಸ್ಪಿ)
Comments are closed.