ಕರ್ನಾಟಕ

ಅಯೋಧ್ಯೆ ರಾಮ ಮಂದಿರ ಉದ್ಘಾಟನೆ: ನಾಳೆ ರಾಜ್ಯದಲ್ಲಿ ಸರ್ಕಾರಿ ರಜೆ ಇಲ್ಲ- ಸಿಎಂ ಸಿದ್ದರಾಮಯ್ಯ

Pinterest LinkedIn Tumblr

ತುಮಕೂರು: ಅಯೊಧ್ಯೆ ರಾಮಮಂದಿರದಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಜನವರಿ 22ರಂದು (ನಾಳೆ) ನಡೆಯಲಿದ್ದು ನಾಳೆ ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಸರ್ಕಾರಿ ರಜೆ ಘೋಷಿಸಬೇಕು ಎಂದು ಬಿಜೆಪಿ ಸೇರಿದಂತೆ ಹಿಂದೂ ಸಂಘಟನೆಗಳು ಹಾಗೂ ವಿವಿಧ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರ್ವತ್ರಿಕ ರಜೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ನಾಳೆ ಮುಜರಾಯಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಆದರೆ ಸರ್ಕಾರಿ ರಜೆ ಇಲ್ಲ. ನಾಳೆ ಮುಜರಾಯಿ ದೇಗುಲಗಳಲ್ಲಿ ದಾಸೋಹ, ಪಾನಕ-ಫಲಹಾರ ವ್ಯವಸ್ಥೆ ಬಗ್ಗೆ ನನಗೆ ಮಾಹಿತಿ ಇಲ್ಲ. ನಾಳೆ ಮಹದೇವಪುರದಲ್ಲಿ ರಾಮನ ದೇವಸ್ಥಾನ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದು ಅಲ್ಲಿಗೆ ತೆರಳಿ ಉದ್ಘಾಟನೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಇತ್ತೀಚೆಗೆ ಸಿದ್ದರಾಮಯ್ಯನವರಿಗೆ ಪತ್ರ ಬರೆದು ರಜೆ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು. ಅಲ್ಲದೆ ಹಿಂದೂಪರ ಸಂಘಟನೆಗಳು, ಬೆಂಗಳೂರು ವಕೀಲರ ಸಂಘವು ಸಹ ರಜೆ ನೀಡುವಂತೆ ಮನವಿ ಮಾಡಿತ್ತು. ಆದರೆ ಇದೀಗ ಸಿದ್ದರಾಮಯ್ಯನವರು ರಜೆ ಘೋಷಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.

 

Comments are closed.