ಕರಾವಳಿ

ದೆಹಲಿಯಲ್ಲಿ ನಡೆಯುವ ಗಣರಾಜೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಕೊಡೆ, ಚಪ್ಪಲಿ ರಿಪೇರಿ ಮಾಡುವ ಕುಂದಾಪುರದ ಮಣಿಕಂಠ

Pinterest LinkedIn Tumblr

(ವಿಶೇಷ ವರದಿ: ಯೋಗೀಶ್ ಕುಂಭಾಸಿ)

ಕುಂದಾಪುರ: ನಗರದ ಹೃದಯಭಾಗವಾದ ಶಾಸ್ತ್ರೀ ವೃತ್ತದ ಸಮೀಪದಲ್ಲಿ ಚಿಕ್ಕದೊಂದು ಪೆಟ್ಟಿಗೆ ಅಂಗಡಿಯಲ್ಲಿ ಕೊಡೆ, ಚಪ್ಪಲಿ ಮೊದಲಾದ ವಸ್ತುಗಳನ್ನು ರಿಪೇರಿ ಮಾಡಿಕೊಡುತ್ತಾ ಚಮ್ಮಾರಿಕೆ ಕಾಯಕ ಮಾಡುತ್ತಿರುವ ಮಣಿಕಂಠ ಅವರು ಜ.26 ರಂದು ದೆಹಲಿ ಕೆಂಪುಕೋಟೆಯಲ್ಲಿ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಆಹ್ವಾನಿತರಾಗಿ ಆಯ್ಕೆಯಾಗಿದ್ದು ಬುಧವಾರ ದೆಹಲಿ ತಲುಪಲಿದ್ದಾರೆ.

ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಸಾಲ ಪಡೆದು, ಸ್ವಉದ್ಯೋಗ ನಡೆಸಿ ಯಶಸ್ಸು ಕಂಡಿದ್ದ ಕುಂದಾಪುರದ ಎಲ್.ಐ.ಸಿ ರಸ್ತೆ ವ್ಯಾಸರಾಯ ಕಲ್ಯಾಣಮಂಟಪದ ಸಮೀಪದ ನಿವಾಸಿ ಮಣಿಕಂಠ (38) ಅವರು ಕಳೆದ 23 ವರ್ಷಗಳಿಂದ ಕುಂದಾಪುರದ ಶಾಸ್ತ್ರೀ ಸರ್ಕಲ್‌ನಲ್ಲಿ ಲಿಡ್ಕರ್‌ನ ಪಾದರಕ್ಷೆ ರಿಪೇರಿ ಮಾಡುವ ಚಿಕ್ಕ ಪೆಟ್ಟಿಗೆ ಅಂಗಡಿ ನಡೆಸುತ್ತಿದ್ದಾರೆ. ಮೂಲತಃ ಭದ್ರಾವತಿಯವರಾದ ಮಣಿಕಂಠ ಅವರ ಅಜ್ಜ ಮುನುಸ್ವಾಮಿ 70 ವರ್ಷಗಳ ಹಿಂದೆ ಕುಂದಾಪುರಕ್ಕೆ ಬಂದು ನೆಲೆಸಿದ್ದು ಹೊಟ್ಟೆಪಾಡಿಗಾಗಿ ಚಪ್ಪಲಿ ರಿಪೇರಿ ಅಂಗಡಿಯನ್ನು ಆರಂಭಿಸಿದರು. ಮಣಿಕಂಠ ಅವರ ತಂದೆ ರಾಜು ಕೂಡ ಇದನ್ನು ಮುಂದುವರಿಸಿದ್ದು ವಡೇರಹೋಬಳಿ ಸರಕಾರಿ ಶಾಲೆಯಲ್ಲಿ 5ನೇ ತರಗತಿ ಓದಿದ ಮಣಿ ಹಾಗೂ ಸಹೋದರ ವಿಷ್ಣು ಕೂಡ ತಂದೆಯಿಂದ ಈ ವೃತ್ತಿ ಕಲಿತಿದ್ದಾರೆ.

ಶ್ರದ್ದೆಯಿಂದ ಕೆಲಸ:
ತಮ್ಮ ಪುಟಾಣಿ ಅಂಗಡಿಯಲ್ಲಿ ನಿತ್ಯ ಬೆಳಿಗ್ಗೆನಿಂದ ಸಂಜೆ ತನಕ ಮಣಿಕಂಠ ಕೆಲಸ ಮಾಡುತ್ತಾರೆ. ಇವರ ಕೆಲಸಕ್ಕೆ ಅನುಕೂಲವಾದ ಕುಷನ್ ಕೆಲಸವನ್ನು ವಿಷ್ಣು ಮಾಡುತ್ತಾರೆ. ಚಪ್ಪಲಿ, ಕೊಡೆ ರಿಪೇರಿ, ವಿದ್ಯಾರ್ಥಿಗಳ ಬ್ಯಾಗ್, ಜನರೇಟರ್ ಸಣ್ಣ ಟಯರ್, ಟರ್ಪಾಲು ಹೊಲಿಯುವುದು ಸಹಿತ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಾ ಬಂದಿದ್ದಾರೆ. ಇದರಿಂದ ಬರುವ ಆದಾಯದಲ್ಲಿಯೇ ತಾಯಿ ಸರೋಜಾ, ಪತ್ನಿ ನಿರ್ಮಲಾ ಮತ್ತು ಇಬ್ಬರು ಮಕ್ಕಳು, ಸಹೋದರನೊಂದಿಗೆ ಜೀವನ ನಡೆಸುತ್ತಿದ್ದಾರೆ.

ಪ್ರಾಮಾಣಿಕತೆಗೆ ಸಂದ ಗೌರವ:
ಚಪ್ಪಲಿ, ಕೊಡೆ ಮತ್ತು ಇತರೆ ವಸ್ತುಗಳ ರಿಪೇರಿಗೆ ಬೇಕಾದ ಕಚ್ಚಾ ಸಾಮಗ್ರಿ ಖರೀದಿಗೆ ಹಣ‌ಬೇಕಾದಾಗ ಮೊದಲಿಗೆ ಹೆಚ್ಚು ಬಡ್ಡಿ ನೀಡಿ ಸಾಲ ಪಡೆಯುತ್ತಿದ್ದರು. ಎರಡು ವರ್ಷಗಳ ಹಿಂದೆ ಕೌಶಲಾಭಿವೃದ್ಧಿ ಇಲಾಖೆ ಕುಂದಾಪುರ ಪುರಸಭೆ ಮೂಲಕ ಅವರಿಗೆ ಪಿಎಂ ಸ್ವನಿಧಿ (ಬೀದಿ ಬದಿ ವ್ಯಾಪಾರಿಗಳಿಗೆ ನೀಡುವ ಸಾಲ) ಯೋಜನೆಯಡಿ 10 ಸಾವಿರ ರು. ಸಾಲ ನೀಡಿತು. ಶೇ.7ರ ಬಡ್ಡಿ ದರದ ಈ ಸಾಲ ಮರುಪಾವತಿಗೆ 12 ತಿಂಗಳು ಅವಧಿ ಇದ್ದರೂ ಮಣಿಕಂಠ 2,500 ರೂನಂತೆ ಕಟ್ಟಿ ಐದೇ ತಿಂಗಳಲ್ಲಿ ತೀರಿಸಿದರು. ಮತ್ತೆ 20 ಸಾವಿರ ಪಡೆದು ಅದನ್ನೂ 5 ತಿಂಗಳಲ್ಲಿ ಮರುಪಾವತಿಸಿದರು. ತದನಂತರ ಪಡೆದ 50 ಸಾವಿರ ಕೂಡ ಪಾವತಿ ಮಾಡಿ ನಿಷ್ಟೆ ಮೆರೆದಿದ್ದರು. ಈ ಬಾರಿ ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಫಲಾನುಭವಿಗಳಿಗೆ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಲಾಗಿದ್ದು ರಾಜ್ಯದ ನಾಲ್ವರ ಪೈಕಿ ಕುಂದಾಪುರ ಪುರಸಭೆಯ ನಿವಾಸಿ ಮಣಿಕಂಠ ಕೂಡ ಆಯ್ಕೆಯಾಗಿದ್ದಾರೆ.

ಇಂದು (ಬುಧವಾರ) ದೆಹಲಿಗೆ…!
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ ಫಲಾನುಭವಿ ಆಗಿರುವುದರಿಂದ ಮಣಿಕಂಠ ಅವರು ಗಣರಾಜ್ಯೋತ್ಸವ ಕಾರ್ಯಕ್ರಮ ವೀಕ್ಷಣೆಗೆ ಆಗಮಿಸಲು ಕೇಂದ್ರ ಸರಕಾರದಿಂದ ಆಯ್ಕೆ ಮಾಡಲಾಗಿದ್ದು ಮಂಗಳವಾರ ಬೆಳಿಗ್ಗೆ ಬೆಂಗಳೂರು ತಲುಪಿರುವ ಮಣಿಕಂಠ-ನಿರ್ಮಲಾ ದಂಪತಿ ಬುಧವಾರ‌ ಮುಂಜಾನೆ ವಿಮಾನದಲ್ಲಿ ಪ್ರಯಾಣಿಸಿ ಬೆಳಿಗ್ಗೆ ದೆಹಲಿ ತಲುಪಲಿದ್ದಾರೆ. ಈ ಎಲ್ಲಾ ಖರ್ಚು ವೆಚ್ಚವನ್ನು ಕೇಂದ್ರ ಸರಕಾರವೇ ಭರಿಸಲಿದೆ.

ಪುರಸಭೆಯಿಂದ ಮಣಿಕಂಠ ದಂಪತಿಗೆ ಸನ್ಮಾನ
ದೆಹಲಿಯಲ್ಲಿ ಜರಗುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಸರಕಾರದಿಂದ ಆಯ್ಕೆಯಾದ ಮಣಿಕಂಠ ಹಾಗೂ ಪತ್ನಿ ನಿರ್ಮಲ ಅವರನ್ನು ಪುರಸಭೆ ಕಛೇರಿಯಲ್ಲಿ ಅಭಿನಂದಿಸಿ ಗೌರವಿಸಲಾಯಿತು. ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ, ಸಹಾಯಕ ಆಯುಕ್ತೆ ಮತ್ತು ಪುರಸಭೆಯ ಆಡಳಿತಾಧಿಕಾರಿ ರಶ್ಮಿ‌ ಎಸ್.ಆರ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ಮಂಜುನಾಥ್ ಆರ್., ಜಿಲ್ಲಾ ಲೀಡ್ಕರ್ ನಿಗಮದ ಸಂಯೋಜಕ ತಿಪ್ಪೆಸ್ವಾಮಿ, ಪುರಸಭೆ ಸದಸ್ಯರಾದ ದೇವಕಿ ಸಣ್ಣಯ್ಯ, ಪ್ರಭಾಕರ್, ಪರಿಸರ ಅಭಿಯಂತರ ಗುರುಪ್ರಸಾದ್ ಶೆಟ್ಟಿ, ಸಮುದಾಯದ ಸಂಘಟನಾಧಿಕಾರಿಯಾದ ಶರತ್ ಎಸ್ ಖಾರ್ವಿ, ಕಂದಾಯ ಅಧಿಕಾರಿ ಅಂಜನಿ ಗೌಡ, ಹಿರಿಯ ಆರೋಗ್ಯ ನಿರೀಕ್ಷಕ ರಾಘವೇಂದ್ರ ನಾಯ್ಕ್, ಕಚೇರಿಯ ಪ್ರಥಮ ದರ್ಜೆ ಸಹಾಯಕ ಗಣೇಶ್ ಕುಮಾರ್ ಜನ್ನಾಡಿ ಇದ್ದರು.

ನನ್ನಂತ ಸಾಮಾನ್ಯನನ್ನು ಗುರುತಿಸಿದ್ದು ಖುಷಿಯಾಗಿದೆ..
ಚಪ್ಪಲಿ ರಿಪೇರಿ ಮಾಡುವ‌ ನನ್ನಂತ‌ ಸಾಮಾನ್ಯ ವ್ಯಕ್ತಿಯನ್ನು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವಕ್ಕೆ ಆಹ್ವಾನ ನೀಡಿರುವುದು ಖುಷಿ ಕೊಟ್ಟಿದೆ. ಜೀವನದಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡುತ್ತಿರುವೆ. ಬದುಕು ರೂಪಿಸಿದ ನನ್ನ ವೃತ್ತಿಯ ಬಗ್ಗೆ ಹೆಮ್ಮೆಯಿದೆ. ದೆಹಲಿಗೆ ತೆರಳಲು ಹಾಗೂ ಸಮೀಪದಿಂದ ಗಣರಾಜ್ಯೋತ್ಸವವನ್ನು ಕಣ್ತುಂಬಿಕೊಳ್ಳಲು ಉತ್ಸಾಹಿಯಾಗಿರುವೆ. ಕ್ಷೇತ್ರದ ಶಾಸಕರು, ಜಿಲ್ಲಾಡಳಿತ ಹಾಗೂ ಪುರಸಭೆ ಆಡಳಿತಾಧಿಕಾರಿ, ಮುಖ್ಯಾಧಿಕಾರಿ, ಸಿಬ್ಬಂದಿಗಳ ಸಹಕಾರ ಅತ್ಯುತ್ತಮವಾಗಿತ್ತು.
– ಮಣಿಕಂಠ (ಪ್ರಧಾನಮಂತ್ರಿ ಸ್ವನಿಧಿ ಯೋಜನೆ ಫಲಾನುಭವಿ)

ಮಣಿಕಂಠ ಅವರು ಕುಂದಾಪುರ ಪುರಸಭೆ ವ್ಯಾಪ್ತಿಯ‌ ನಿವಾಸಿಯಾಗಿದ್ದು ಇಲ್ಲಿನ ಬೀದಿ ಬದಿ ವ್ಯಾಪಾರಿಯಾಗಿ ತನ್ನ ಉದ್ಯೋಗ ಅಭಿವೃದ್ಧಿಗೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಮೂರು ಬಾರಿ ಸಾಲ ಪಡೆದಿದ್ದರು. ಸಮಯಕ್ಕೆ ಸರಿಯಾಗಿ ಡಿಜಿಟಲ್ ವ್ಯವಸ್ಥೆ ಮೂಲಕ ಸಾಲ ಮರು ಪಾವತಿ ಮಾಡಿದ್ದರು. ಸದ್ಯ ಅವರು ದೆಹಲಿ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿ ತೆರಳಿರುವುದು ಪುರಸಭೆ‌ ಸಹಿತ ಇಡೀ ಜಿಲ್ಲೆಗೂ ಹೆಮ್ಮೆಯ ಸಂಗತಿ.
– ಮಂಜುನಾಥ್ ಆರ್. (ಮುಖ್ಯಾಧಿಕಾರಿಗಳು, ಕುಂದಾಪುರ ಪುರಸಭೆ)

Comments are closed.