ಕರಾವಳಿ

ಕುಂದಾಪುರದಲ್ಲಿ ‘ರಾಷ್ಟ್ರೀಯ ಮತದಾರರ ದಿನಾಚರಣೆ’; ಮತದಾನ ದೇಶದ ಭವಿಷ್ಯ ರೂಪಿಸುವ ಪ್ರಥಮ ಹೆಜ್ಜೆ: ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್

Pinterest LinkedIn Tumblr

ಕುಂದಾಪುರ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮತದಾನ ಇಡೀ ದೇಶದ ಭವಿಷ್ಯ ರೂಪಿಸುವ ಪ್ರಥಮ ಹೆಜ್ಜೆಯಾಗಿದೆ. ಮತದಾನದ ಹಕ್ಕು ಪಡೆದವರು ದೇಶ, ರಾಜ್ಯದ ಪ್ರಗತಿ ಬಗ್ಗೆ ಸೂಕ್ಷ್ಮವಾಗಿ ವಿಚಾರ ಮಾಡಿ ಜಾಗಾರುಕತೆಯಿಂದ ಮತದಾನ ಮಾಡಬೇಕು. ಈ ಮೂಲಕವಾಗಿ ಸ್ವಸ್ಥ ದೇಶ ಕಟ್ಟುವಲ್ಲಿ ಪ್ರತಿಯೊಬ್ಬ ನಾಗರಿಕ ಮುಂದಾಗಬೇಕು ಎಂದು ಕುಂದಾಪುರದಲ್ಲಿರುವ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ‌ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಹೇಳಿದರು.

ತಾಲೂಕು ಆಡಳಿತ, ತಾಲೂಕು ಕಾನೂನು‌ ಸೇವಾ‌ ಸಮಿತಿ, ವಕೀಲರ ಸಂಘ, ಅಭಿಯೋಗ ಇಲಾಖೆ ಕುಂದಾಪುರದ ಸಹಯೋಗದೊಂದಿಗೆ ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜು ಶ್ರೀ ಲಕ್ಷ್ಮೀ ನರಸಿಂಹ ಕಲಾ ಮಂದಿರದಲ್ಲಿ ಗುರುವಾರ ನಡೆದ ‘ರಾಷ್ಟ್ರೀಯ ಮತದಾರರ ದಿನಾಚರಣೆ-2024’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಓಟು ಬುಲೇಟ್‌ಗಿಂತ ಶಕ್ತಿಶಾಲಿ ಎಂಬ ಮಾತಿದೆ. 18 ವರ್ಷ ತುಂಬಿದ ಪ್ರತಿಯೋರ್ವ ದೇಶದ ಪ್ರಗತಿಯನ್ನು ಮುಂದಿಟ್ಟುಕೊಂಡು ಯಾವುದೇ ರಾಜಕೀಯ ಪಕ್ಷದ ಆಮಿಷಕ್ಕೆ ಒಳಗಾಗದೇ ಪವಿತ್ರವಾದ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು. ಆಡಳಿತ ವರ್ಗ, ವಿವಿಧ ಸಂಸ್ಥೆಗಳು‌ ಒಡಗೂಡಿ ಮತದಾನಕ್ಕೆ ಅರ್ಹರಾದವರನ್ನು ನೋಂದಾಯಿಸುವ ಮೂಲಕ‌ ಚುನಾವಣೆಯ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸಲಾಗುತ್ತದೆ. ಪ್ರಜಾಪ್ರಭುತ್ವ ತನ್ನ ನೈಜ್ಯ ಮೌಲ್ಯ ಕಳೆದುಕೊಳ್ಳುತ್ತಿರುವ ಕಾಲಘಟ್ಟದಲ್ಲಿ ಮತದಾರರ ದಿನಾಚರಣೆಯಂತಹ ಕಾರ್ಯಕ್ರಮ ಅಗತ್ಯವಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು, ತಾಲೂಕು ಕಾನೂನು‌ ಸೇವಾ‌ ಸಮಿತಿಯ ಅಧ್ಯಕ್ಷ ರಾಜು ಎನ್. ಮಾತನಾಡಿ,
ಭಾರತದಲ್ಲಿ ಸಂಸದೀಯ ಮಾದರಿ ಪ್ರಜಾಪ್ರಭುತ್ವ ಜಗತ್ತಿನ‌ಅತೀ ದೊಡ್ಡ ಪ್ರಜಾಪ್ರಭುತ್ವ ಸರಕಾರ ಹೊಂದಿದೆ. ಜಾತಿ, ಪಂಥ, ಜನಾಂಗೀಯ ಅಧಾರದ ಮೇಲೆ ಚಲಾಯಿಸದೆ ಯೋಗ್ಯ ಮತ ಚಲಾಯಿಸುವ ಮೂಲಕ ಬದ್ದತೆ ತೋರಬೇಕು. ಯುವ ಮತದಾರರು ಮಹತ್ತರ ಜವಬ್ದಾರಿ ಹೊಂದಿದ್ದನ್ನು ಅರಿತು ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 3 ಸಾವಿರಕ್ಕೂ ಹೆಚ್ಚು ಯುವ ಮತದಾರರು ಹೆಸರು ನೋಂದಣಿ ಮಾಡಿಕೊಂಡು ಮುಂಬರುವ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ ಎಂದರು.

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ಹಾಗೂ ಮತದಾರರ ನೋಂದಣಾಧಿಕಾರಿ ರಶ್ಮಿ ಎಸ್.ಆರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ, ತಾ.ಕಾ.ಸೇ.ಸಮಿತಿಯ ಸದಸ್ಯ ಕಾರ್ಯದರ್ಶಿ ಶೃತಿಶ್ರೀ ಎಸ್., ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಯು. ಬೆಳ್ಳಿಯಪ್ಪ, ಕುಂದಾಪುರ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಜಿ. ರಾಮಕೃಷ್ಣ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಶ್ರೀನಾಥ ರಾವ್, ಕುಂದಾಪುರದ ಸಹಾಯಕ ಸರಕಾರಿ ಅಭಿಯೋಜಕ ಉದಯ್ ಕುಮಾರ್ ಬಿ.ಎ. ಮೊದಲಾದವರಿದ್ದರು.

ಬಸ್ರೂರು ಶಾರದಾ ಕಾಲೇಜಿನ ರಾಜ್ಯಶಾಸ್ತ್ರ ಪ್ರಾಧ್ಯಾಪಕ ಡಾ. ವಿಶ್ವನಾಥ ಅಚಾರ್ಯ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಿಂದ ‘ಮತ ಮಾರಾಟಕ್ಕಲ್ಲ’ ಕಿರು ನಾಟಕ ಪ್ರದರ್ಶನಗೊಂಡಿತು.

ಕುಂದಾಪುರ ತಹಶಿಲ್ದಾರ್ ಶೋಭಾಲಕ್ಷ್ಮೀ ಎಚ್.ಎಸ್ ಸ್ವಾಗತಿಸಿದರು. ಪೂರ್ಣಿಮಾ ಗಾಂವ್ಕರ್ ನಿರೂಪಿಸಿದರು.

Comments are closed.