ಉಡುಪಿ: ಕಳೆದ ಹಲವು ದಿನಗಳಿಂದ ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಉಚಿತವಿರುವ ಸ್ಥಳೀಯ ವಾಹನಗಳಿಗೆ ಫಾಸ್ಟ್ಯಾಗ್ ನಲ್ಲಿ ಸಾಸ್ತಾನದಲ್ಲಿ ಟೋಲ್ ಶುಲ್ಕ ಕಡಿತವಾಗುತ್ತಿರುವ ಕುರಿತು ಸ್ಥಳೀಯರು ಟೋಲ್ ಪ್ಲಾಜಾಕ್ಕೆ ಮುತ್ತಿಗೆ ಹಾಕಿ ಶನಿವಾರ ಪ್ರತಿಭಟನೆ ನಡೆಸಿದರು.
ಈ ಹಿಂದೆ ಹಲವು ಬಾರಿ ಪ್ರತಿಭಟನೆ ಹಾಗೂ ಮನವಿ ನೀಡಿದ ತರುವಾಯ ಸಾಸ್ತಾನ ಗುಂಡ್ಮಿಯ ಟೋಲ್ ಪ್ಲಾಜಾದಲ್ಲಿ ಸ್ಥಳೀಯರಿಗೆ ಕೆಲವಾರು ವರ್ಷಗಳಿಂದ ಶುಲ್ಕ ವಿನಾಯತಿಯಿದ್ದು ನವಯುಗ ಕಂಪೆನಿ ಟೋಲ್ ಪ್ಲಾಜಾವನ್ನು ಹೊಸ ಕಂಪೆನಿಗೆ ಮಾರಾಟ ಮಾಡಿದ್ದು ಸ್ಥಳೀಯ ವಾಹನಗಳ ಫಾಸ್ಟ್ಯಾಗ್ ಮೂಲಕ ಅನಧಿಕೃತವಾಗಿ ಶುಲ್ಕವನ್ನು ಪಡೆಯುತ್ತಿರುವುದರ ಕುರಿತು ಸ್ಥಳೀಯ ವಾಹನ ಚಾಲಕರು ಮತ್ತು ಮಾಲಕರು ಶನಿವಾರ ಶಿವಕೃಪ ಸಭಾಂಗಣದಲ್ಲಿ ಸಭೆ ಸೇರಿ ಟೋಲ್ ಕಂಪೆನಿಯ ವರ್ತನೆಯ ವಿರುದ್ದ ಆಕ್ರೋಶವನ್ನು ವ್ಯಕ್ತಪಡಿಸಿದರು.
2016 ರಲ್ಲಿ ಗುಂಡ್ಮಿ ಟೋಲ್ ಪ್ಲಾಜಾ ಆರಂಭವಾದ ದಿನದಿಂದ ಸ್ಥಳೀಯರಿಗೆ ಶುಲ್ಕ ವಿಧಿಸದಂತೆ ಹೋರಾಟ ನಡೆಸಲು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆದು 2018ರಲ್ಲಿ ಕೋಟ ಜಿಲ್ಲಾ ಪಂಚಾಯತ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಫ್ತಿಯ ಎಲ್ಲಾ ವಾಹನಗಳಿಗೆ ಸಂಪೂರ್ಣವಾಗಿ ಶುಲ್ಕ ವಿನಾಯತಿ ನೀಡಲಾಗಿತ್ತು ಆದರೆ ಇತ್ತೀಚೆಗೆ ಆಡಳಿತ ಬದಲಾವಣೆಗೊಂಡ ಬಳಿಕ ಮತ್ತೆ ಸ್ಥಳೀಯರಿಗೆ ಟೋಲ್ ವಿಧಿಸಲು ಆರಂಭಿಸಿರುವುದು ಸರಿಯಲ್ಲ. ಮತ್ತೆ ಸ್ಥಳೀಯರು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾದ ಪರಿಸ್ಥಿತಿ ಒದಗಿ ಬಂದಿದೆ ಎಂಬ ಅಭಿಪ್ರಾಯಗಳು ಸಭೆಯಲ್ಲಿ ಕೇಳಿ ಬಂತು. ಅಲ್ಲದೆ ಸಭೆ ಮುಗಿಸಿ ದೀಡಿರ್ ಆಗಿ ಎಲ್ಲಾ ನಾಗರಿಕರು ಟೋಲ್ ಪ್ಲಾಜಾಕ್ಕೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡರು.
ಸುಮಾರು 500ಕ್ಕೂ ಅಧಿಕ ಸಂಖೆಯಲ್ಲಿದ್ದ ಸಾರ್ವಜನಿಕರು ಟೋಲ್ ಪ್ಲಾಜಾಕ್ಕೆ ತೆರಳಿ ಮುತ್ತಿಗೆ ಹಾಕಿ ಟೋಲ್ ಕಂಪೆನಿಯ ವಿರುದ್ದ ಘೋಷಣೆಗಳನ್ನು ಕೂಗಿದರು ಅಲ್ಲದೆ ಟೋಲ್ ರಸ್ತೆಗೆಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಬಂದ ಬ್ರಹ್ಮಾವರ ಪೊಲೀಸ್ ಇನ್ಸ್ ಪೆಕ್ಟರ್ ದಿವಾಕರ್ ಮತ್ತು ಕೋಟ ಪಿಎಸ್ ಐ ತೇಜಸ್ವಿ ಟಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಟೋಲ್ ಅಧಿಕಾರಿಗಳು ಸ್ಥಳೀಯರೊಂದಿಗೆ ಉಡಾಫೆಯನ್ನು ಪ್ರದರ್ಶಿಸುತ್ತಿದ್ದು ಈ ಹಿಂದೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ನೀಡಿದ ಶುಲ್ಕ ವಿನಾಯತಿ ಆದೇಶವನ್ನು ಉಲ್ಲಂಘಿಸಿ ಮತ್ತೆ ಟೋಲ್ ಪಡೆಯುವುದು ನಿಲ್ಲಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ದಿವಾಕರ್ ಅವರು ತನಗೆ ಒಂದು ದಿನದ ಅವಧಿಯನ್ನು ನೀಡಿ ಸೋಮವಾರ ಸಂಜೆಯ ಒಳಗೆ ಟೋಲ್ ಅಧಿಕಾರಿಗಳು ಮತ್ತು ಹೋರಾಟ ಸಮಿತಿಯವರ ಸಭೆಯನ್ನು ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳವುದಾಗಿ ಮನವಿ ಮಾಡಿದರು. ಮನವಿಗೆ ಒಪ್ಪಿದ ಹೋರಾಟ ಸಮಿತಿಯ ಸದಸ್ಯರು ಸೋಮವಾರ ಸಂಜೆಯ ವರೆಗೆ ಕಾಯುವುದಾಗಿ ಹೇಳಿದ್ದು, ಅಲ್ಲಿಯ ತನಕ ಸ್ಥಳೀಯರಿಗೆ ಯಾವುದೇ ರೀತಿಯಲ್ಲಿ ಶುಲ್ಕ ಕಡಿತಗೊಳಿಸಬಾರದು ಎಂದು ಎಚ್ಚರಿಕೆ ನೀಡಿ ಪ್ರತಿಭಟನೆಯನ್ನು ಕೈಬಿಟ್ಟರು.
ಮನೆಯಲ್ಲೇ ವಾಹನವಿದ್ದರೂ ಹಣ ಕಡಿತದ ಆರೋಪ
ಟೋಲ್ ನ ಎರಡೂ ಕಡೆಗಳ ಮೊದಲ ಲೈನ್ ಸ್ಥಳೀಯರಗಿಆಗಿ ಮೀಸಲಾಗಿದ್ದು ಸ್ಥಳೀಯರು ಪ್ರವೇಶಿಸುವಾಗ ಆಧಾರ್ ಕಾರ್ಡ್ ಅಥವಾ ವಾಹನದ ದಾಖಲೆಗಳನ್ನು ತೋರಿಸಿದರೆ ಶುಲ್ಕ ಕಡಿತಗೊಳಿಸದೆ ಮುಂದೆ ಸಾಗಲು ಬಿಡಲಾಗುತ್ತಿತ್ತು. ಆದರೆ ಇದೀಗ ಎರಡೂ ಲೈನ್ ಗಳಲ್ಲಿ ದಾಖಲೆಗಳನ್ನು ತೋರಿಸಿದಾಗ ಸ್ಕ್ರೀನ್ ನಲ್ಲಿ 0 ಮೊತ್ತ ತೋರಿಸಲಾಗುತ್ತಿದೆ ಆದರೆ ಮನೆ ತಲುಪಿದ ಒಂದೆರಡು ಗಂಟೆಗಳ ಬಳಿಕ ಅಥವಾ 24 ಗಂಟೆಯ ನಂತ 60, 120 ರೂ ಕಡಿತಗೊಂಡ ಸಂದೇಶ ಬರುತ್ತಿರುವ ಬಗ್ಗೆ, ಕೆಲವರು ತಮ್ಮ ವಾಹನ ಟೋಲ್ ನ ಕಡೆ ಹೋಗದೆ ಇದ್ದರೂ ಮನೆಯಲ್ಲೇ ನಿಂತಿದ್ದರೂ ಹಣ ಕಡಿತವಾಗಿದೆ ಎಂದು ಸಭೆಯಲ್ಲಿ ದೂರಿದರು.
Comments are closed.