ಕರಾವಳಿ

ಮನೆಗೆಲಸಕ್ಕೆ ತೆರಳಿದ್ದ ಮಹಿಳೆ ಮೇಲೆ ಗುಡ್ಡದ ಮಣ್ಣು ಕುಸಿದು ಮೃತ್ಯು | ಕೊಲ್ಲೂರಿನಲ್ಲಿ ದುರ್ಘಟನೆ

Pinterest LinkedIn Tumblr

ಕುಂದಾಪುರ: ವಿಪರೀತ ಮಳೆಯಿಂದಾಗಿ ಮನೆಯೊಂದರ ಮೇಲೆ ಮಣ್ಣು ಕುಸಿದು ಕೂಲಿ ಕಾರ್ಮಿಕ ಮಹಿಳೆ ಮೃತಪಟ್ಟ ಘಟನೆ ಕೊಲ್ಲೂರು ಸಮೀಪದ ಬಾಳೆಗದ್ದೆ ಸೊಸೈಟಿಗುಡ್ಡೆ ಎಂಬಲ್ಲಿ ಗುರುವಾರ ವೇಳೆ ನಡೆದಿದೆ.

ಕುಸಿತವಾದ ಮಣ್ಣು ರಾಶಿಯಲ್ಲಿ ಸಿಲುಕಿ ಹಳ್ಳಿಬೇರು ನಿವಾಸಿ ಅಂಬಾ(47) ಎನ್ನುವರು ಮೃತಪಟ್ಟಿದ್ದಾರೆ.

ಘಟನೆ ಹಿನ್ನೆಲೆ: ನಿರಂತರ ಮಳೆಯಿಂದ ಸಡಿಲಗೊಂಡ ಗುಡ್ಡ ಪ್ರದೇಶದ ಮಣ್ಣು ಮನೆಯ ಮೇಲೆ ಬಿದ್ದ ಪರಿಣಾಮ ಕೂಲಿ ಕೆಲಸಕ್ಕಾಗಿ ಇಲ್ಲಿನ ವಿಶ್ವನಾಥ ಅಡಿಗ ಎನ್ನುವರ ಮನೆಯ ಕೆಲಸಕ್ಕೆ ತೆರಳಿದ್ದ ಅಂಬಾ ಮೃತರಾಗಿದ್ದಾರೆ. ಮಧ್ಯಾಹ್ನ ಊಟ ಮಾಡುವ ತಟ್ಟೆ ತೊಳೆಯಲು ಮನೆ ಹಿಂಭಾಗದ ಪ್ರದೇಶಕ್ಕೆ ತೆರಳಿದ್ದಾಗ ಏಕಾಏಕಿ ಗುಡ್ಡ ಕುಸಿದಿದ್ದು ಅಂಬಾ ಅವರು ಮಣ್ಣಿನಡಿಗೆ ಸಿಲುಕಿದ್ದಾರೆ. ಘಟನೆ ತಿಳಿಯುತ್ತಲೇ ಅವರನ್ನು ರಕ್ಷಿಸಲು ಆಗಮಿಸಿದ ಸ್ಥಳೀಯರು ಹರಸಾಹಸಪಟ್ಟಿದ್ದು ತಕ್ಷಣ ಕುಂದಾಪುರ ಆಸ್ಪತ್ರೆಗೆ ರವಾನಿಸಿದ್ದಾರೆ. ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಕಾರಣ ಅಂಬಾ ಮೃತಪಟ್ಟಿದ್ದಾಗಿ ಪ್ರಾಥಮಿಕ ವರದಿಯಲ್ಲಿ ವೈದ್ಯರು ಖಚಿತಪಡಿಸಿದ್ದಾರೆ.

ಮೃತ ಅಂಬಾ ಅವರು ಕೊಲ್ಲೂರು ಸಮೀಪದ ಕುಗ್ರಾಮವಾದ ಹಳ್ಳಿಬೇರು ನಿವಾಸಿಯಾಗಿದ್ದು ಪುಟ್ಟು ಎನ್ನುವರ ಪತ್ನಿ. ಇವರಿಗೆ ಮೂವರು ಮಕ್ಕಳಿದ್ದಾರೆ. ವಿಶ್ವನಾಥ್ ಅಡಿಗರ ಮನೆಗೆಲಸಕ್ಕೆ ಆಗಾಗ್ಗೆ ಬರುತ್ತಿದ್ದರು ಎಂದು ಮಾಹಿತಿ ಲಭಿಸಿದೆ.

ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕುಂದಾಪುರ ಎಸಿ ರಶ್ಮೀ ಎಸ್.ಆರ್., ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಬೈಂದೂರು ವೃತ್ತ ನಿರೀಕ್ಷಕ ಸವಿತ್ರತೇಜ್, ಹಾಗೂ ಠಾಣಾಧಿಕಾರಿಗಳು ಭೇಟಿ ನೀಡಿದ್ದಾರೆ.

Comments are closed.