ಕುಂದಾಪುರ: ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ಕೊಲ್ಲೂರು ಸಮೀಪದ ನಾಗೋಡಿ ಘಾಟಿ ಬಳಿ ಸೋಮವಾರ ನಡೆದಿದೆ.
ಶಿವಮೊಗ್ಗದಿಂದ ಕೊಲ್ಲೂರಿನತ್ತ ಬರುತ್ತಿದ್ದ ಬಸ್ ಪ್ರಯಾಣಿಕರಾಗಿದ್ದ ಕೊಲ್ಲೂರು ಪ್ರೌಢಶಾಲೆಯ 7 ಮಕ್ಕಳು, ಹಾಗೂ ಕೊಲ್ಲೂರು ಜ್ಯೂನಿಯರ್ ಕಾಲೇಜಿನ 10 ವಿದ್ಯಾರ್ಥಿಗಳ ಸಹಿತ ಪ್ರಯಾಣಿಕರಿಗೆ ಗಾಯಗಳಾಗಿದೆ. ಗಾಯಾಳು ವಿದ್ಯಾರ್ಥಿಗಳನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇವರೆಲ್ಲರೂ ಮಲೆನಾಡು ಭಾಗದ ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಶಾಲೆಗೆ ನಿರಂತರ ರಜೆಯಿದ್ದ ಹಿನ್ನೆಲೆ ಮನೆಗೆ ತೆರಳಿದ್ದ ಅವರು ಸೋಮವಾರ ಮತ್ತೆ ಶಾಲೆಗೆ ವಾಪಾಸ್ಸಾಗುತ್ತಿದ್ದರು. ಬೆಳಿಗ್ಗೆ ಮಳೆ ಹೆಚ್ಚಿದ್ದರಿಂದ ಘಾಟಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿದ್ದು ಮುಂಭಾಗ ಜಖಂಗೊಂಡಿದೆ.
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ಕೊಲ್ಲೂರು ಠಾಣೆಯ ಪಿಎಸ್ಐಗಳಾದ ವಿನಯ್ ಎಂ. ಕೊರ್ಲಹಳ್ಳಿ, ಸುಧಾರಾಣಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ. ಅಪಘಾತದಿಂದ ಮಕ್ಕಳು ಕಂಗಾಲಾಗಿದ್ದು ಬೈಂದೂರು ಬಿಇಒ ನಾಗೇಶ್ ನಾಯಕ್ ಹಾಗೂ ಹೆಚ್ಚುವರಿ ಎಸ್ಪಿ ಶಾಲೆಗೆ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ.
Comments are closed.