ಉಡುಪಿ: ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರು ಕೊಡೇರಿ ರಸ್ತೆಯಲ್ಲಿರುವ ಒಡೆಯರ ಮಠದ ವಿಶ್ವನಾಥ ಉಡುಪರ ಮನೆಯ ತೋಟದಲ್ಲಿರುವ ಬಾವಿಯಲ್ಲಿ ಮಂಗಳವಾರ ಬೃಹತ್ ಗಾತ್ರದ ಮೊಸಳೆ ಕಾಣಿಸಿಕೊಂಡಿದ್ದು ಸತತ ಒಂದು ದಿನದ ಕಾರ್ಯಾಚರಣೆ ಬಳಿಕ ಮೊಸಳೆಯನ್ನು ಸೆರೆ ಹಿಡಿಯಲಾಗಿದೆ.
ಕೊಡೇರಿ ಭಾಗದ ಮಂಜು ಮತ್ತು ಸುಧಾಕರ ತಂಡ ಮೀನುಗಾರರು ಉಪಯೋಗಿಸುವ ಬೀಡಿನ ಬಲೆಯನ್ನು ಬಾವಿಗೆ ಹಾಕಿ ಸತತ 1 ಗಂಟೆ ಕಾರ್ಯಾಚರಣೆ ನಡೆಸಿದ್ದು ಅರಣ್ಯ ಇಲಾಖೆ ಮಾರ್ಗದರ್ಶನದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಬಲೆಗೆ ಬಿದ್ದ ಮೊಸಳೆಯನ್ನು ಮೇಲಕ್ಕೆತ್ತಲಾಯಿತು. ಬಳಿಕ ಪಶುವೈದ್ಯಾಧಿಕಾರಿ ಡಾ. ನಾಗರಾಜ್ ಅವರು ಸ್ಥಳಕ್ಕಾಗಮಿಸಿ ಮೊಸಳೆಯ ವೈದ್ಯಕೀಯ ಪರೀಕ್ಷೆ ನಡೆಸಿದ್ದು ಆರೋಗ್ಯವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಒಂದು ದಿನದ ಕಾರ್ಯಾಚರಣೆ: ಮೊಸಳೆ ಬಾವಿಯಲ್ಲಿರುವುದು ಗಮನಕ್ಕೆ ಬರುತ್ತಲೇ ಮಂಗಳವಾರ ಮಧ್ಯಾಹ್ನ 12 ಗಂಟೆಯಿಂದ ಮಳೆ ನಡುವೆಯೂ ಬೈಂದೂರು ಅರಣ್ಯ ಇಲಾಖೆ, ಪೋಲಿಸ್ ಇಲಾಖೆ, ಅಗ್ನಿಶಾಮಕ ದಳ ಕಂದಾಯ ಇಲಾಖೆ ಅವರ ಸಹಾಯದೊಂದಿಗೆ ಸೆರೆ ಕಾರ್ಯಾಚರಣೆ ಆರಂಭಿಸಿದ್ದು ಮೊಸಳೆ ಬಾವಿಯಿಂದ ಹೊರ ಬರಲು ಬಾವಿಯ ದಂಡೆಯನ್ನು ನೆಲಸಮಾನಕ್ಕೆ ಒಡೆದು ಮೊಸಳೆ ಬೊನು ಇಡಲಾಗಿತ್ತು. ಮೊಸಳೆಯನ್ನು ಹಿಡಿಯಲು ಇಲಾಖೆಯ ಸಿಬ್ಬಂದಿಗಳು ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದಲ್ಲದೆ ಬಾವಿ ಸುತ್ತಲೂ ನಾಗೂರು ನೆಟ್ವರ್ಕ್ ಅಂಡ್ ಸೆಕ್ಯೂರಿಟಿ ಸೊಲ್ಯೂಷನ್ಸ್ ರಕ್ಷಕ್ ಇವರ ಸಹಕಾರದಲ್ಲಿ ಸಿಸಿ ಟಿವಿ ಅಳವಡಿಸಿ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದರು. ಬುಧವಾರ ಬೆಳಿಗ್ಗೆಯೂ ಮೊಸಳೆ ಬೋನಿಗೆ ಬೀಳದಿದ್ದಾಗ ಮುಂದಿನ ಪ್ರಯತ್ನವಾಗಿ ಮೀನುಗಾರರ ಸಹಕಾರದಲ್ಲಿ ಬಲೆಯ ಮೂಲಕ ಸಾಹಾಸಮಯವಾಗಿ ಮೊಸಳೆಯನ್ನು ಮೇಲಕ್ಕೆತ್ತುವ ಕಾರ್ಯ ನಡೆದಿದ್ದು ಮಧ್ಯಾಹ್ನ 1.30ರ ಹೊತ್ತಿಗೆ ಸೆರೆ ಕಾರ್ಯಾಚರಣೆ ಯಶಸ್ವಿಯಾಗಿ ಮುಗಿಯಿತು.
ಬೈಂದೂರು ತಹಶಿಲ್ದಾರ್ ಪ್ರದೀಪ್, ಪಿಎಸ್ಐ ತಿಮ್ಮೇಶ್ ಬಿ.ಎನ್., ಬೈಂದೂರು ವಲಯ ಅರಣ್ಯಾಧಿಕಾರಿ ಸಂದೇಶ್ ಹಾಗೂ ಸಿಬ್ಬಂದಿಗಳು, ಅಗ್ನಿಶಾಮಕ ದಳದವರು ಸ್ಥಳದಲ್ಲಿದ್ದರು.
Comments are closed.